ನವದೆಹಲಿ: ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ನೇತೃತ್ವದ ಭ್ರಷ್ಟಾಚಾರ ವಿರೋಧಿ ಹೋರಾಟದ ಬಗ್ಗೆ ಆತಿಶಿ ಸಂದೇಹ ಹೊಂದಿದ್ದರು. ಏಕೈಕ ಕಾರ್ಯಸೂಚಿ ಹೊಂದಿರುವ ಈ ಹೋರಾಟ ಬಹುಕಾಲ ಬಾಳುವುದಿಲ್ಲ ಎಂದು ಭಾವಿಸಿದ್ದರು. ಈ ಚಳವಳಿಯ ಕೂಸು ಅರವಿಂದ ಕೇಜ್ರಿವಾಲ್. ಅವರ ರಾಜಕೀಯ ಪ್ರವೇಶಕ್ಕೆ ರಹದಾರಿಯಾಗಿದ್ದು ಈ ಚಳವಳಿಯೇ. ಭ್ರಷ್ಟಾಚಾರದ ವಿರುದ್ಧ ಹೋರಾಟದಿಂದ ಮೈತಳೆದ ಪಕ್ಷದಲ್ಲಿ ಇದೀಗ ಆತಿಶಿ ಅವರು ಅತ್ಯುನ್ನತ ಹುದ್ದೆಗೆ ಏರಿದ್ದಾರೆ.
ಕೇಜ್ರಿವಾಲ್ ಸಂಪುಟದಲ್ಲಿದ್ದ ಏಕೈಕ ಮಹಿಳಾ ಸಚಿವರು ಆತಿಶಿ. ಅಬಕಾರಿ ನೀತಿ ಹಗರಣದಲ್ಲಿ ಉಪಮುಖ್ಯಮಂತ್ರಿಯಾಗಿದ್ದ ಮನೀಷ್ ಸಿಸೋಡಿಯಾ ಜೈಲುಪಾಲು ಆದಾಗ 2023ರ ಮಾರ್ಚ್‌ನಲ್ಲಿ ಅತಿಶಿ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗಿತ್ತು. ಹಣಕಾಸು, ಶಿಕ್ಷಣ, ಲೋಕೋಪಯೋಗಿ, ನೀರಾವರಿ, ಇಂಧನ ಸೇರಿದಂತೆ 14 ಖಾತೆಗಳ ಹೊಣೆಯನ್ನು ಅವರಿಗೆ ವಹಿಸಲಾಗಿತ್ತು. ಸಚಿವರಾದ ಕೆಲವೇ ತಿಂಗಳಲ್ಲಿ ಅವರು ತಮ್ಮ ಛಾಪು ಮೂಡಿಸಿದ್ದರು.
ಈ ವರ್ಷದ ಮಾರ್ಚ್ 21ರಂದು ಕೇಜ್ರಿವಾಲ್ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿತ್ತು. ಪಕ್ಷದ ಪ್ರಮುಖ ನಾಯಕರ ಬಂಧನದಿಂದ ಸರ್ಕಾರ ಹಾಗೂ ಪಕ್ಷದಲ್ಲಿ ನಿರ್ವಾತ ಸೃಷ್ಟಿಯಾಗಿತ್ತು. ಆಗ ಸಮರ್ಥವಾಗಿ ಹೊಣೆ ನಿಭಾಯಿಸಿದ್ದವರು ಅತಿಶಿ ಹಾಗೂ ಆರೋಗ್ಯ ಸಚಿವ ಸೌರಭ್ ಭಾರದ್ವಾಜ್ ಅವರು. ‘ಸಾರಥಿ’ ಇಲ್ಲದ ಸಮಯದಲ್ಲಿ ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಲೋಪ ಉಂಟಾಗದಂತೆ ಎಚ್ಚರ ವಹಿಸಿದ್ದರು. ಜೂನ್ ತಿಂಗಳಲ್ಲಿ ರಾಜಧಾನಿಯಲ್ಲಿ ಜಲ ಬಿಕ್ಕಟ್ಟು ಉಂಟಾದ ಸಂದರ್ಭದಲ್ಲಿ ನೀರು ಬಿಡುಗಡೆಗೆ ಹರಿಯಾಣ ಸರ್ಕಾರ ತಕರಾರು ಎತ್ತಿತ್ತು. ಆಗ ಹರಿಯಾಣ ಸರ್ಕಾರದ ವಿರುದ್ಧ ಆತಿಶಿ 10 ದಿನಗಳ ಉಪವಾಸ ಸತ್ಯಾಗ್ರಹ ನಡೆಸಿದ್ದರು. ಕೇಂದ್ರ ಸರ್ಕಾರ ಹಾಗೂ ಲೆಫ್ಟಿನೆಂಟ್ ಗವರ್ನರ್ ಜತೆಗೆ ಸಂಘರ್ಷಕ್ಕೆ ಇಳಿದು ಸುದ್ದಿಯಲ್ಲಿದ್ದವರು.
ಕೇಜ್ರಿವಾಲ್ ಬಂಧನದ ಬಳಿಕ ಆತಿಶಿ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಸುದ್ದಿ ಎಎಪಿ ಪಡಸಾಲೆಯಲ್ಲಿ ದಟ್ಟವಾಗಿ ಹಬ್ಬಿತ್ತು. ಆಗ ಜೈಲಿನಿಂದಲೇ ಸರ್ಕಾರ ನಡೆಸಲು ಕೇಜ್ರಿವಾಲ್ ತೀರ್ಮಾನಿಸಿದ್ದರು. ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ ಅವರು ‘ಅದೃಷ್ಟ ಪರೀಕ್ಷೆ’ಯ ರಾಜಕೀಯ ದಾಳ ಉರುಳಿಸಿದ್ದಾರೆ. ತಮಗೆ ನಿಷ್ಠರಾಗಿರುವ ಅತಿಶಿ ಅವರನ್ನೇ ಐದು ತಿಂಗಳ ಅವಧಿಗೆ ‘ಉತ್ತರಾಧಿಕಾರಿ’ಯಾಗಿ ನಿಯೋಜಿಸಿದ್ದಾರೆ.
ಆತಿಶಿ ಅವರು ಎಡಪಂಥೀಯ ಶಿಕ್ಷಣತಜ್ಞ ದಂಪತಿ ವಿಜಯ್ ಸಿಂಗ್ ಮತ್ತು ತ್ರಿಪ್ತಾ ವಾಹಿ ಅವರ ಪುತ್ರಿ. ದೆಹಲಿ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದ ಅವರು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಉನ್ನತ ವ್ಯಾಸಂಗ ಮಾಡಿದ್ದಾರೆ.
ಹಳ್ಳಿ ವಾಸದಿಂದ ಜೀವನಾನುಭವ:
ಗ್ರಾಮೀಣ ಜನರ ಬದುಕಿನ ಸಂಕಷ್ಟಗಳನ್ನು ಅರಿಯುವ ಉದ್ದೇಶದಿಂದ ಆತಿಶಿ ಅವರು ಮಧ್ಯಪ್ರದೇಶದ ಒಂದು ಸಣ್ಣ ಹಳ್ಳಿಯಲ್ಲಿ ಏಳು ವರ್ಷಗಳನ್ನು ಕಳೆದರು. 20ರ ಹರೆಯದ ಅವರು ಅಲ್ಲಿ ಸಾವಯವ ಕೃಷಿ ಮತ್ತು ಪ್ರಗತಿಶೀಲ ಶಿಕ್ಷಣ ವ್ಯವಸ್ಥೆಗಳಲ್ಲಿ ತೊಡಗಿಸಿಕೊಂಡರು. ಅವರು ಅಲ್ಲಿ ಹಲವಾರು ಸ್ವಯಂಸೇವಾ ಸಂಘಟನೆಗಳೊಂದಿಗೆ ಕೆಲಸ ಮಾಡಿದರು. ಹಿಂದುಳಿದವರ ಶ್ರೇಯೋಭಿವೃದ್ಧಿಗೆ ಕೈಗೊಳ್ಳಬೇಕಾದ ಉಪಕ್ರಮಗಳ ಬಗ್ಗೆಅವರಿಗೆ ತಳಮಟ್ಟದ ಅರಿವು ಮೂಡಿದ್ದು ಅಲ್ಲೇ. ತಮ್ಮ ಮೂವತ್ತರ ಹರೆಯದಲ್ಲಿ ಅವರು ತಮ್ಮ ತಳಮಟ್ಟದ ಚಟುವಟಿಕೆಯನ್ನು ರಾಜಕೀಯ ಹಾಗೂ ನೀತಿಗೆ ವಿಸ್ತರಿಸಿದರು. ಅವರು ಇಲ್ಲಿಯವರೆಗೆ ಕಲಿತಿದ್ದನ್ನು ಪ್ರಯೋಗಿಸಲು ಆರಂಭಿಸಿದರು. 42ನೇ ವಯಸ್ಸಿನಲ್ಲಿ ಸರ್ಕಾರದ ಭಾಗವಾದರು. 16 ತಿಂಗಳಲ್ಲೇ ದೊಡ್ಡ ಹುದ್ದೆಗೆ ಬಡ್ತಿ ಪಡೆದರು. ಕೇಜ್ರಿವಾಲ್ ಅವರ ಯೋಗ್ಯ ಉತ್ತರಾಧಿಕಾರಿ ಎಂಬುದನ್ನು ಹಲವು ಸಲ ಸಾಬೀತುಪಡಿಸಿದರು.
ಆತಿಶಿ ಅವರನ್ನು ಎಎಪಿಗೆ ಕರೆತಂದಿದ್ದು ಹಿರಿಯ ವಕೀಲ ಪ್ರಶಾಂತ್ ಭೂಷಣ್ ಹಾಗೂ ಎಎಪಿಯ ಹಿರಿಯ ನಾಯಕರ ಜತೆಗಿನ ಒಡನಾಟ ಹಾಗೂ ಸಂವಾದ. ಅಣ್ಣಾ ಹಜಾರೆ ಅವರ ಚಳವಳಿಯ ಕುರಿತು ಅವರ ಮನದಲ್ಲಿದ್ದ ಅನುಮಾನವನ್ನು ದೂರ ಮಾಡಿದವರು ಈ ಹಿರಿಯ ನಾಯಕರು.
ಪ್ರಣಾಳಿಕೆ ತಯಾರಿಯಿಂದ ಉನ್ನತ ಸ್ಥಾನದವರೆಗೆ:
ರಾಜಕೀಯ ಮಹತ್ವಾಕಾಂಕ್ಷೆಯನ್ನು ಬೆಳೆಸಿಕೊಂಡ ಕೇಜ್ರಿವಾಲ್ ಅವರು ಪಕ್ಷದ ಕಾರ್ಯಸೂಚಿ ವಿನ್ಯಾಸಗೊಳಿಸಲು ಕಾರ್ಯಕರ್ತರು, ಶಿಕ್ಷಣ ತಜ್ಞರು, ನೀತಿ ನಿರೂಪಕರು ಮತ್ತಿತರರನ್ನು ತಮ್ಮ ಗುಂಪಿಗೆ ಸೇರಿಸಿಕೊಂಡರು. 2013ರಲ್ಲಿ ಎಎಪಿ ಮೊದಲ ಬಾರಿಗೆ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಅತಿಶಿ ಅವರು ಪ್ರಣಾಳಿಕೆ ಕರಡು ತಂಡದ ಭಾಗವಾದರು.
ಅವರು ಎರಡು ವರ್ಷ ತೆರೆಮರೆಯಲ್ಲಿ ಕೆಲಸ ಮಾಡಿದರು. 2015ರಲ್ಲಿ ಎಎಪಿ ಅಧಿಕಾರಕ್ಕೆ ಮರಳಿದಾಗ ಉಪಮುಖ್ಯಮಂತ್ರಿ ಸಿಸೋಡಿಯಾ ಅವರು ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆಗಳನ್ನು ತರಲು ಯುವ ನಾಯಕಿಯನ್ನು ಸಲಹೆಗಾರರನ್ನಾಗಿ ತಮ್ಮ ತಂಡಕ್ಕೆ ಸೇರಿಸಿಕೊಂಡರು. ದೆಹಲಿ ಸರ್ಕಾರಿ ಶಾಲೆಗಳಲ್ಲಿ ‘ಹ್ಯಾಪಿನೆಸ್ ಕ್ಲಾಸ್’ ಪ್ರಾರಂಭ, ಪ್ರಾಥಮಿಕ ಹಾಗೂ ಮಾಧ್ಯಮಿಕ ವಿದ್ಯಾರ್ಥಿಗಳ ಕಲಿಕಾ ಮಟ್ಟ ಸುಧಾರಣೆ, ಖಾಸಗಿ ಶಾಲೆಗಳ ನಿಯಂತ್ರಣ ಮತ್ತಿತರ ಯೋಜನೆಗಳ ಅನುಷ್ಠಾನದಲ್ಲಿ ಸಿಸೋಡಿಯಾ ಅವರಿಗೆ ಸಹಾಯ ಮಾಡಿದರು. ಸಲಹೆಗಾರರ ನೇಮಕ ನಿಯಮಬಾಹಿರ ಎಂಬ ಕಾರಣಕ್ಕೆ ಅವರು 2018ರಲ್ಲಿ ತಮ್ಮ ಹುದ್ದೆಯನ್ನು ಕಳೆದುಕೊಂಡರು.
2019ರ ಲೋಕಸಭಾ ಚುನಾವಣೆಯಲ್ಲಿ ಪೂರ್ವ ದೆಹಲಿ ಕ್ಷೇತ್ರದಿಂದ ಎಎಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದರು. ಬಿಜೆಪಿಯ ಗೌತಮ್ ಗಂಭೀರ್ ವಿರುದ್ಧ 4.7 ಲಕ್ಷ ಮತಗಳ ಅಂತರದಿಂದ ಪರಾಜಯ ಅನುಭವಿಸಿದರು. 2020ರ ವಿಧಾನಸಭಾ ಚುನಾವಣೆಯಲ್ಲಿ ಕಲ್ಕಾಜಿ ಕ್ಷೇತ್ರದಲ್ಲಿ ಜಯಭೇರಿ ಬಾರಿಸಿದರು. ಕೇಜ್ರಿವಾಲ್ ಸಂಪುಟಕ್ಕೆ ಅವರು ಸೇರ್ಪಡೆಯಾಗಲಿದ್ದಾರೆ ಎಂಬ ಹಲವು ನಾಯಕರ ನಿರೀಕ್ಷೆ ಹುಸಿಯಾಯಿತು. ಆದರೆ, ಅವರು ವಿಧಾನಸಭೆಯ ಹಲವು ನಿರ್ಣಾಯಕ ಸಮಿತಿಗಳ ನೇತೃತ್ವ ವಹಿಸಿದರು. ಸಿಸೋಡಿಯಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಪರಿಸ್ಥಿತಿ ಮತ್ತೆ ಬದಲಾಯಿತು. ಕೇಜ್ರಿವಾಲ್ ಜೈಲಿಗೆ ಹೋದ ಬಳಿಕ ಅತಿಶಿ ಸರ್ಕಾರದ ಮುಖವಾಗಿ ಕೆಲಸ ಮಾಡಿದರು.
ಅತಿಶಿ ಅವರ ಉಪನಾಮ ‘ಮರ್ಲೆನಾ’. ಮಾರ್ಕ್ ಹಾಗೂ ಲೆನಿನ್ ಹೆಸರಿನ ಸಂಯೋಜನೆಯ ಈ ಉಪನಾಮವನ್ನು ಪೋಷಕರು ಆಯ್ಕೆ ಮಾಡಿದ್ದರು. ಅತಿಶಿ ವಿದೇಶಿ ಹಾಗೂ ಕ್ರೈಸ್ತರು ಎಂದು ಬಿಜೆಪಿ ‘ಪಿಸು ಮಾತಿನ ಅಭಿಯಾನ’ ನಡೆಸಿತ್ತು. ತನ್ನ ಕೆಲಸವೇ ಈ ಆರೋಪಗಳಿಗೆ ಉತ್ತರ ಕೊಡುತ್ತದೆ ಎಂಬ ಕಾರಣಕ್ಕೆ ಉಪನಾಮ ಬಳಸುವುದನ್ನು ಅವರು ಕೈಬಿಟ್ಟರು. ಸಿಂಗ್ ಎಂಬ ಜಾತಿ ಉಪನಾಮವನ್ನು ಬಳಸದಿರಲು ನಿರ್ಧರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.