ADVERTISEMENT

ಎಟಿಎಂ ಘಟಕದಲ್ಲಿ ಕೊಲೆ ಯತ್ನ; ಅಪರಾಧಿಗೆ 10 ವರ್ಷ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2021, 13:26 IST
Last Updated 2 ಫೆಬ್ರುವರಿ 2021, 13:26 IST
ಎಟಿಎಂ ಘಟಕಕ್ಕೆ ಬಂದಾಗ ದಾಳಿ
ಎಟಿಎಂ ಘಟಕಕ್ಕೆ ಬಂದಾಗ ದಾಳಿ   

ಪ್ರಜಾವಾಣಿ ವಾರ್ತೆ

ಬೆಂಗಳೂರು: ಎನ್‌.ಆರ್. ಚೌಕದ ಕಾರ್ಪೊರೇಷನ್‌ ಬ್ಯಾಂಕ್ ಎಟಿಎಂ ಘಟಕದಲ್ಲಿ ಜ್ಯೋತಿ ಉದಯ್ ಎಂಬುವರ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದ ಪ್ರಕರಣದಡಿ ಬಂಧಿಸಲಾಗಿದ್ದ ಮಧುಕರ್ ರೆಡ್ಡಿ ಅಪರಾಧಿ ಎಂಬುದು ಸಾಬೀತಾಗಿದ್ದು, ಆತನಿಗೆ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಲಾಗಿದೆ.

2013ರ ನವೆಂಬರ್‌ 19ರಂದು ಬೆಳಿಗ್ಗೆ ಜ್ಯೋತಿ ಅವರು ಹಣ ಡ್ರಾ ಮಾಡಿಕೊಳ್ಳಲು ಎಟಿಎಂ ಘಟಕಕ್ಕೆ ಬಂದಾಗ ಆರೋಪಿ ದಾಳಿ ಮಾಡಿದ್ದ.ಹಣ ನೀಡುವಂತೆ ಒತ್ತಾಯಿಸಿ ಮಚ್ಚಿನಿಂದ ಹೊಡೆದಿದ್ದ. ತೀವ್ರವಾಗಿ ಗಾಯಗೊಂಡಿದ್ದ ಜ್ಯೋತಿ, ಮೂರು ತಿಂಗಳವರೆಗೆ ಆಸ್ಪತ್ರೆಯಲ್ಲಿದ್ದು ಚಿಕಿತ್ಸೆ ಪಡೆದುಕೊಂಡಿದ್ದರು.

ADVERTISEMENT

ಪ್ರಕರಣ ದಾಖಲಿಸಿಕೊಂಡಿದ್ದ ಎಸ್‌.ಜೆ.ಪಾರ್ಕ್ ಠಾಣೆ ಪೊಲೀಸರು, ಆರೋಪಿ ಮಧುಕರ್ ರೆಡ್ಡಿ ಅಲಿಯಾಸ್ ಮದನ್ ರೆಡ್ಡಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ 65ನೇ ಸಿಟಿ ಸಿವಿಲ್ ನ್ಯಾಯಾಲಯ, ವಾದ– ಪ್ರತಿವಾದ ಹಾಗೂ ಪುರಾವೆಗಳನ್ನು ಪರಿಶೀಲಿಸಿ ಮಂಗಳವಾರ ಶಿಕ್ಷೆ ಪ್ರಕಟ ಮಾಡಿದೆ.

ಅಪರಾಧಿ ಮಧುಕರ್ ರೆಡ್ಡಿ, ಈಗಾಗಲೇ ಮೂರು ವರ್ಷ ಶಿಕ್ಷೆ ಅನುಭವಿಸಿದ್ದಾನೆ. ಇನ್ನು 7 ವರ್ಷ ಮಾತ್ರ ಆತ ಶಿಕ್ಷೆ ಅನುಭವಿಸುವುದು ಬಾಕಿ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.