ಬೆಂಗಳೂರು: ತನ್ನ ಮೇಲೆ ಹಲ್ಲೆ ನಡೆಯುವ ಸಾಧ್ಯತೆಯಿದೆ ಎಂಬ ರಾಜ್ಯ ಗುಪ್ತಚರ ವರದಿಯ ಹಿನ್ನೆಲೆಯಲ್ಲಿ ನಟಿ ಹಾಗೂ ಎಐಸಿಸಿ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ ಅವರು ‘ರೆಬೆಲ್ ಸ್ಟಾರ್’ ಅಂಬರೀಷ್ ಅವರ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ಹಿಂದೇಟು ಹಾಕಿದರು ಎನ್ನಲಾಗಿದೆ.
ರಮ್ಯಾ ಅವರ ರಾಜಕೀಯ ಪ್ರವೇಶಕ್ಕೆ ಮಂಡ್ಯದಲ್ಲಿ ವೇದಿಕೆ ಕಲ್ಪಿಸಿದ್ದೇ ಅಂಬರೀಷ್. ಅವರು ಸಂಸದೆಯಾಗಿ ಆಯ್ಕೆಯಾಗಲು ಅಂಬಿ ಅವರ ಪರಿಶ್ರಮ ಹೆಚ್ಚಿತ್ತು. ಆದರೆ, ರಾಜಕೀಯ ರಂಗದ ಚದುರಂಗದಾಟದಲ್ಲಿ ರಮ್ಯಾ, ಅಂಬಿ ಬಳಗದಿಂದ ದೂರ ಉಳಿದಿದ್ದರು. ಅಂಬರೀಷ್ ಅವರ ಅಂತ್ಯಸಂಸ್ಕಾರದಲ್ಲಿ ಚಿತ್ರರಂಗದ ಗಣ್ಯರು, ರಾಜಕಾರಣಿಗಳು, ಹೊರರಾಜ್ಯ ಮತ್ತು ವಿದೇಶದಲ್ಲಿರುವ ಅವರ ಸ್ನೇಹಿತರು ಪಾಲ್ಗೊಂಡಿದ್ದರು.
ಆದರೆ, ರಮ್ಯಾ ಮಾತ್ರ ಪಾಲ್ಗೊಂಡಿರಲಿಲ್ಲ. ತಮ್ಮ ಟ್ವಿಟರ್‌ನಲ್ಲಿ ಅಂಬರೀಷ್ ನಿಧನ ಕುರಿತು ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟೀಕೆ ವ್ಯಕ್ತವಾಗಿತ್ತು.
ರಮ್ಯಾ ಅವರು ರಾಜ್ಯಸಭೆಯ ಹಿರಿಯ ಸದಸ್ಯರೊಬ್ಬರ ಜತೆಗೆ ದೆಹಲಿಯಿಂದ ಬೆಂಗಳೂರಿಗೆ ಬರಲು ವಿಮಾನದ ಟಿಕೆಟ್ ಬುಕ್ ಮಾಡಿಸಿದ್ದರು. ಆದರೆ, ಗುಪ್ತಚರ ಇಲಾಖೆ ನೀಡಿದ ಎಚ್ಚರಿಕೆ ಹಿನ್ನೆಲೆಯಲ್ಲಿ ಕೊನೆಯ ಕ್ಷಣದಲ್ಲಿ ಪ್ರಯಾಣವನ್ನು ರದ್ದುಗೊಳಿಸಿದರು ಎನ್ನಲಾಗಿದೆ.
ಕಾಯಿಲೆಗೆ ತುತ್ತಾದ ರಮ್ಯಾ: ಆಸ್ಟಿಯೋಕ್ಲ್ಯಾಟೋಮಾ ಎಂಬ ಅಪರೂಪದ ಕಾಯಿಲೆಗೆ ರಮ್ಯಾ ತುತ್ತಾಗಿದ್ದಾರೆ. 10 ಲಕ್ಷ ಜನರಲ್ಲಿ ಒಬ್ಬರಿಗೆ ಇದು ಕಾಣಿಸಿಕೊಳ್ಳುತ್ತದೆ.
‘ಮೂಳೆಗೆ ಸಂಬಂಧಿಸಿದ ಕಾಯಿಲೆಯಿಂದ ನಾನು ಬಳಲುತ್ತಿದ್ದೇನೆ. ಹಾಗಾಗಿ, ಅಂಬರೀಷ್ ಅವರ ಅಂತ್ಯಕ್ರಿಯೆಗೆ ಹಾಜರಾಗಲು ಸಾಧ್ಯವಾಗಲಿಲ್ಲ’ ಎಂದು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಕಾಲಿಗೆ ಬ್ಯಾಂಡೇಜ್ ಸುತ್ತಿಕೊಂಡಿರುವ ಫೋಟೊವನ್ನು ಅವರು ಅಪ್‌ಲೋಡ್ ಮಾಡಿದ್ದಾರೆ.
‘ಈಗ ನನ್ನ ಕಾಲು, ಗೆಡ್ಡೆ ಮತ್ತು ಕ್ಯಾನ್ಸರ್‌ನಿಂದ ಮುಕ್ತವಾಗಿದೆ. ಕೆಲವು ದಿನಗಳ ತನಕ ವಿಶ್ರಾಂತಿಯ ಅಗತ್ಯವಿದೆ. ಮತ್ತೆ ದೈಹಿಕ ಪರೀಕ್ಷೆಗೆ ಒಳಗಾಗುವಂತೆ ವೈದ್ಯರು ಸೂಚಿಸಿದ್ದಾರೆ. ದೇಹದ ಯಾವುದೇ ಭಾಗದಲ್ಲಿ ನೋವು ಕಾಣಿಸಿಕೊಂಡರೆ ನಿರ್ಲಕ್ಷಿಸಬೇಡಿ. ಕೂಡಲೇ, ವೈದ್ಯರ ಬಳಿ ಹೋಗಿ ಪರೀಕ್ಷಿಸಿಕೊಳ್ಳಿ’ ಎಂದು ಪೋಸ್ಟ್‌ನಲ್ಲಿ ಸಲಹೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.