ಬೆಂಗಳೂರು:ನಮ್ಮ ಕುಟುಂಬದವರ ಮೇಲೆ ಹಲ್ಲೆ ಮಾಡಿ ಕೊಲೆಗೆ ಪ್ರಯತ್ನ ಮಾಡಿದಾರೆ. ನಮ್ಮ ಕಾರ್ಯಕರ್ತ ರಾಹುಲ್ ಕಿಣಿ ಮೇಲೆ ಮಾರಣಾಂತಿಕ ಹಲ್ಲೆಯಾಗಿದೆ ಎಂದು ಹಾಸನ ಬಿಜೆಪಿ ಶಾಸಕ ಪ್ರೀತಂ ಗೌಡ ಅವರು ಗಂಭೀರ ಆರೋಪ ಮಾಡಿದರು.
ಹಾಸನದಲ್ಲಿನ ತಮ್ಮ ಮನೆ ಮೇಲೆ ಜೆಡಿಎಸ್ ಕಾರ್ಯಕರ್ತರು ಬುಧವಾರ ಕಲ್ಲು ತೂರಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಹಲ್ಲೆ ಮಾಡಿರುವುದು ಖಂಡನೀಯ. ಇದಕ್ಕೆಲ್ಲ ನಾನು ಜಗ್ಗಲ್ಲ. ನಾನೂ ಸಹ ಕಾನೂನು ಹೋರಾಟ ಮಾಡುವೆ. ಇವರ ಗೂಂಡಾಗಿರಿಗೆ ಹೆದರಿ ನಾನು ಸುಮ್ಮನಿರಲ್ಲ ಎಂದು ಹೇಳಿದರು.
ಬಿನ್ನಾಭಿಪ್ರಾಯ ಇದ್ದರೆ ಚರ್ಚಿಸಲಿ. ಅದು ಬಿಟ್ಟು ಹಲ್ಲೆ ಮಾಡುವುದು ಖಂಡನೀಯ. ಹಲ್ಲೆಗೆ ಒಳಗಾದವರೊಬ್ಬರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಗೂಂಡಾಗಿರಿ ರಾಜಕೀಯ ಒಳ್ಳೆಯದಲ್ಲ. ಹಾಸನದಲ್ಲಿ ‘ರೌಡಿಸಂ ಪಾಲಿಟಿಕ್ಸ್’ ನಡೆಯುತ್ತಿದೆ. ನಮ್ಮ ಮನೆ ಮೇಲೆ ದಾಳಿ ನಡೆದ ಸಂದರ್ಭದಲ್ಲಿ ನಾನಿರಲಿಲ್ಲ ಎಂದು ಪ್ರೀತಂಗೌಡ ಹೇಳಿದ್ದಾರೆ.
ಗೂಂಡಾಗಿರಿಗೆ ಸಿಎಂ ಬೆಂಬಲ, ಘಟನೆಯನ್ನು ಕೇಂದ್ರ ಗೃಹ ಸಚಿವರಿಗೆ ತಿಳಿಸುವೆ : ಬಿಎಸ್‌ವೈ
‘ನಮ್ಮ ಶಾಸಕರ ಮನೆ ಮೇಲೆ ಕಲ್ಲು ತೂರಾಟ ನಡೆಸಲು ಪ್ರಚೋದನೆ ನೀಡುವ ಮೂಲಕ ಮುಖ್ಯಮಂತ್ರಿ ಕುಮಾರಸ್ವಾಮಿ ಗೂಂಡಾಗಿರಿಗೆ ಬೆಂಬಲ ನೀಡಿದ್ದಾರೆ. ಈ ಘಟನೆ ಬಗ್ಗೆ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಅವರಿಗೆ ದೂರು ನೀಡುತ್ತೇವೆ. ಗೂಡಾ ವರ್ತನೆ ದೇಶದ ಜನರಿಗೆ ಗೊತ್ತಾಗಲಿ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಹಾಸನದಲ್ಲಿ ನಮ್ಮ ಶಾಸಕ ಪ್ರೀತಂಗೌಡ ಮನೆ ಮೇಲೆ ದಾಳಿ ಆಗಿದೆ. ನಮ್ಮ ಒಬ್ಬ ಕಾರ್ಯಕರ್ತನ ಮೇಲೆ ಹಲ್ಲೆ ಆಗಿದೆ. ಇದು ಖಂಡನೀಯ. ಸಿಎಂ ಎಚ್.ಡಿ. ಕುಮಾರಸ್ವಾಮಿ, ಎಚ್.ಡಿ.ರೇವಣ್ಣ ಅವರಿಂದ ಗೂಂಡಾಗಿರಿ ಪ್ರವೃತ್ತಿ ನಡೆಯುತ್ತಿದೆ. ಇದರಿಂದ ಏನೂ ಸಾಧನೆ ಆಗಲ್ಲ ಎಂದರು.
ಸಧ್ಯದಲ್ಲೇ ಹಾಸನಕ್ಕೆ ಹೋಗುತ್ತೇನೆ. ಅಲ್ಲಿ ಪ್ರತಿಭಟನಾ ಸಭೆ ನಡೆಸುತ್ತೇನೆ. ಇವರ ಗೂಂಡಾಗಿರಿ ಪ್ರವೃತ್ತಿ ವಿರೋಧಿಸ್ತೇವೆ. ಇವರ ಬೆದರಿಕೆಗೆ ನಾವು ಜಗ್ಗಲ್ಲ. ಇದನ್ನೆಲ್ಲ ಎದುರಿಸುವ ಶಕ್ತಿ ನಮಗಿದೆ ಎಂದು ಹೇಳಿದರು.
ಸಿಎಂ ಹೊಣೆ: ಸಿ.ಟಿ.ರವಿ
ಪೊಲೀಸರು ದೌರ್ಜನ್ಯ ನಡೆಯುವಾಗ ಸುಮ್ಮನಿದ್ದಾರೆ. ಶಾಸಕ ಪ್ರೀತಂ ಗೌಡ ಕುಟುಂಬಕ್ಕೆ ಏನಾದರೂ ಆದರೆ ಅದಕ್ಕೆ ಮುಖ್ಯಮಂತ್ರಿ ಹೊಣೆ ಎಂದು ಶಾಸಕ ಸಿ.ಟಿ. ರವಿ ಆರೋಪಿಸಿದರು.
ಪ್ರೀತಂ ಶಾಸಕರಾದಾಗಿನಿಂದಲೂ ಮುಖ್ಯಮಂತ್ರಿ ಹಾಗೂ ರೇವಣ್ಣ ಅವರಿಗೆ ಹೊಟ್ಟೆಯುರಿ. ಪ್ರೀತಂ ಗೌಡ ಅವರ ಬೆಳವಣಿಗೆ ಸಹಿಸದೆ ಈ ರೀತಿ ಮಾಡಿದ್ದಾರೆ. ಇದನ್ನ ನಾನು ಖಂಡಿಸುತ್ತೇನೆ. ಪ್ರೀತಂ ಗೌಡ ಪರವಾಗಿ ನಿಲ್ಲುತ್ತೇನೆ ಎಂದು ಹೇಳಿದರು.
* ಇವನ್ನೂ ಓದಿ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.