ADVERTISEMENT

ವಾಲ್ಮೀಕಿ, ಮುಡಾ ಹಗರಣ: ಬಿಜೆಪಿ ನಾಯಕರಿಂದ ಸಿಎಂ ನಿವಾಸ ಮುತ್ತಿಗೆ ಯತ್ನ

​ಪ್ರಜಾವಾಣಿ ವಾರ್ತೆ
Published 3 ಜುಲೈ 2024, 16:03 IST
Last Updated 3 ಜುಲೈ 2024, 16:03 IST
<div class="paragraphs"><p>ವಾಲ್ಮೀಕಿ ಅಭಿವೃದ್ಧಿ ನಿಗಮ, ಮೈಸೂರಿನ ‘ಮೂಡಾ’ ಹಗರಣ ಖಂಡಿಸಿ&nbsp;ಮುಖ್ಯಮಂತ್ರಿ ಸಿದ್ದರಾಮಯ್ಯ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದ ಬಿಜೆಪಿ ಮುಖಂಡರು, ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.&nbsp;</p></div>

ವಾಲ್ಮೀಕಿ ಅಭಿವೃದ್ಧಿ ನಿಗಮ, ಮೈಸೂರಿನ ‘ಮೂಡಾ’ ಹಗರಣ ಖಂಡಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದ ಬಿಜೆಪಿ ಮುಖಂಡರು, ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು. 

   

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮ ಮತ್ತು ಮೈಸೂರಿನ ‘ಮುಡಾ’ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಒತ್ತಾಯಿಸಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಮುಖ್ಯಮಂತ್ರಿ ಸಿದ್ದರಾಮಯ್ಯ ಮನೆಗೆ ಮುತ್ತಿಗೆ ಹಾಕಲು ಬುಧವಾರ ಯತ್ನಿಸಿದರು. 

ಕುಮಾರಕೃಪಾ ವಸತಿ ಗೃಹದ ಆವರಣದಿಂದ ಮುಖ್ಯಮಂತ್ರಿ ಮನೆಯತ್ತ ಹೊರಟ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ, ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿ.ಸುನಿಲ್‌ಕುಮಾರ್‌, ವಿಧಾನ ಪರಿಷತ್‌ ಸದಸ್ಯ ಸಿ.ಟಿ. ರವಿ ಸೇರಿದಂತೆ ಹಲವರನ್ನು ಪೊಲೀಸರು ವಶಕ್ಕೆ ಪಡೆದು, ನಂತರ ಬಿಡುಗಡೆ ಮಾಡಿದರು. ವಶಕ್ಕೆ ಪಡೆಯುವಾಗ ಬಿಜೆಪಿ ಮುಖಂಡರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು.

ADVERTISEMENT

ನಂತರ ಸುದ್ದಿಗಾರರ ಜತೆ ಮಾತನಾಡಿದ ಬಿ.ವೈ. ವಿಜಯೇಂದ್ರ, ಮೈಸೂರಿನ ‘ಮುಡಾ’ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಖವಾಡ ಕಳಚಿದೆ. ಆದ್ದರಿಂದ ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು. ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಒತ್ತಾಯಿಸಿದರು.

ಕಾಂಗ್ರೆಸ್‌ ಸರ್ಕಾರದ ಬಣ್ಣ ಬಯಲಾಗಿದೆ. ದಿನಕ್ಕೊಂದು ಹಗರಣ ಹೊರ ಬರುತ್ತಿದೆ. ಮುಖ್ಯಮಂತ್ರಿ ತವರು ಜಿಲ್ಲೆಯ ‘ಮುಡಾ’ದಲ್ಲಿ ಅವರ ಗಮನಕ್ಕೆ ಬಾರದೆ ₹4 ಸಾವಿರ ಕೋಟಿಗೂ ಅಧಿಕ ಮೊತ್ತದ ಹಗರಣ ನಡೆಯಲು ಹೇಗೆ ಸಾಧ್ಯ? ಮುಖ್ಯಮಂತ್ರಿ ಪತ್ನಿಗೆ 15 ನಿವೇಶನಗಳನ್ನು ಕೊಟ್ಟಿದ್ದಾರೆ. ಸಚಿವ ಬೈರತಿ ಸುರೇಶ್‌ ಮೈಸೂರಿಗೆ ಹೋಗಿ ಅಧಿಕಾರಿಗಳ ವರ್ಗಾವಣೆ ಮಾಡಿದ್ದಾರೆ. ಕಡತಗಳನ್ನು ಬೆಂಗಳೂರಿಗೆ ತೆಗೆದುಕೊಂಡು ಬಂದಿದ್ದು, ಅವುಗಳನ್ನು ತಿದ್ದುವ ಮೂಲಕ ಹಗರಣವನ್ನು ಮುಚ್ಚಿಹಾಕುವ ಪ್ರಯತ್ನ ನಡೆದಿದೆ ಎಂದು ಅವರು ಆರೋಪಿಸಿದರು.  

ಹಗರಣದಲ್ಲಿ ಭಾಗಿಯಾದ ಅಧಿಕಾರಿಗಳನ್ನು ಅಮಾನತು ಮಾಡುವ ಬದಲು ವರ್ಗಾವಣೆ ಮಾಡಲಾಗಿದೆ. ಹಗರಣ ಕುರಿತು ಜಿಲ್ಲಾಧಿಕಾರಿ ಆರೇಳು ತಿಂಗಳ ಹಿಂದೆ ವರದಿ ನೀಡಿದ್ದರೂ ಸರ್ಕಾರ ಕಣ್ಮುಚ್ಚಿ ಕುಳಿತಿದೆ ಎಂದು ದೂರಿದರು.

ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ, ಲೂಟಿಗಾಗಿ ಸುರಂಗ ಕೊರೆಯುವ ಕೆಲಸವನ್ನು ಕಾಂಗ್ರೆಸ್‌ ಪಕ್ಷ ಮಾಡುತ್ತಿದೆ. ದಲಿತರ ಹಣ ಚಿನ್ನದ ಅಂಗಡಿ, ಕಾರು ಖರೀದಿ, ಬಾರ್‌ಗಳಿಗೆ ಹೋಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.