ADVERTISEMENT

ರಾಜ್ಯದ ಚಾರಣಿಗರ ರಕ್ಷಣೆಗಾಗಿ ಉತ್ತರಾಖಂಡಕ್ಕೆ ತೆರಳಿದ ಸಚಿವ ಕೃಷ್ಣ ಬೈರೇಗೌಡ

​ಪ್ರಜಾವಾಣಿ ವಾರ್ತೆ
Published 5 ಜೂನ್ 2024, 11:40 IST
Last Updated 5 ಜೂನ್ 2024, 11:40 IST
ಕೃಷ್ಣ ಬೈರೇಗೌಡ 
ಕೃಷ್ಣ ಬೈರೇಗೌಡ    

ಬೆಂಗಳೂರು: ಹವಾಮಾನ ವೈಪರೀತ್ಯದಿಂದಾಗಿ ಉತ್ತರಾಖಂಡದ ಸಹಸ್ತ್ರ ತಾಲ್‌ನಲ್ಲಿ ಗೈಡ್‌ಗಳು ಮತ್ತು ರಾಜ್ಯದ ಸುಮಾರು 19 ಚಾರಣಿಗರು (ಎಲ್ಲರೂ ಬೆಂಗಳೂರಿನವರು) ಅಪಾಯಕ್ಕೆ ಸಿಲುಕಿದ್ದು, ಈ ಪೈಕಿ ನಾಲ್ವರು ಮೃತಪಟ್ಟಿರುವ ಮಾಹಿತಿ ಲಭ್ಯವಾಗಿದೆ. ಉಳಿದವರ ರಕ್ಷಣೆಗಾಗಿ ತುರ್ತು ಕಾರ್ಯಾಚರಣೆ ಆರಂಭಿಸಲಾಗಿದೆ.

ಮಂಗಳವಾರ ಬೆಳಿಗ್ಗೆ ಈ ತಂಡ  ಚಾರಣ ಆರಂಭಿಸಿತ್ತು. ಚಾರಣದ ಗಮ್ಯಸ್ಥಾನ ತಲುಪಿದ ತಂಡ ಶಿಬಿರಕ್ಕೆ ಹಿಂತಿರುಗಲು ಯತ್ನಿಸಿದೆ. ಮಾರ್ಗದ ಮಧ್ಯೆ ಸಹಸ್ತ್ರ ತಾಲ್‌ನ ಮಯಳಿ ಎಂಬ ಪ್ರದೇಶದಲ್ಲಿ ಮಧ್ಯಾಹ್ನ 2 ಗಂಟೆಗೆ ಹಿಮಗಾಳಿಯಿಂದಾಗಿ ಹವಾಮಾನ ಸಂಪೂರ್ಣ ಹದಗೆಟ್ಟಿದ್ದು, ಎಲ್ಲ ಚಾರಣಿಗರು ಅಪಾಯಕ್ಕೆ ಸಿಲುಕಿದ್ದಾರೆ.

ದುರಂತದಲ್ಲಿ ಮೃತಪಟ್ಟವರ ಗುರುತು ಇನ್ನಷ್ಟೇ ಪತ್ತೆ ಹಚ್ಚಬೇಕಿದೆ. ಚಾರಣವನ್ನು ಭಾರತೀಯ ಪರ್ವತಾರೋಹಿಗಳ ಒಕ್ಕೂಟ ಆಯೋಜಿಸಿತ್ತು ಎಂದು ತಿಳಿದು ಬಂದಿದೆ. ಉತ್ತರಾಖಂಡ ಸರ್ಕಾರ, ಭಾರತೀಯ ಪರ್ವತಾರೋಹಿಗಳ ಒಕ್ಕೂಟ ಮತ್ತು ಕೇಂದ್ರ ಗೃಹ ಇಲಾಖೆಯ ನೆರವಿನಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

ADVERTISEMENT

ಕಾರ್ಯಾಚರಣೆಗೆ ಅಗತ್ಯ ನೆರವು ನೀಡಲು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಬುಧವಾರ ಮಧ್ಯಾಹ್ನ ಡೆಹ್ರಾಡೂನ್‌ಗೆ ತೆರಳಿದ್ದಾರೆ.

ಡೆಹ್ರಾಡೂನ್‌ಗೆ ತೆರಳುವ ಮೊದಲು ಪ್ರತಿಕ್ರಿಯಿಸಿದ ಕೃಷ್ಣ ಬೈರೇಗೌಡ, ‘ಚಾರಣಿಗರು ಪ್ರತಿಕೂಲ ವಾತಾವರಣದಿಂದಾಗಿ ಅಪಾಯಕ್ಕೆ ಸಿಲುಕಿರುವ ಮಾಹಿತಿ ಮಂಗಳವಾರ ರಾತ್ರಿ ನಮಗೆ ಬಂತು. ತಕ್ಷಣ ಉತ್ತರಾಖಂಡ ಸರ್ಕಾರ, ಭಾರತೀಯ ಪರ್ವತಾರೋಹಣ ಒಕ್ಕೂಟ ಮತ್ತು ಕೇಂದ್ರ ಸರ್ಕಾರದ ಗೃಹ ಇಲಾಖೆಯನ್ನು ಸಂಪರ್ಕಿಸಿ ಚಾರಣಿಗರ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದೆ’ ಎಂದರು.

‘ಸ್ಥಳೀಯವಾಗಿ ಲಭ್ಯವಿರುವ ಹೆಲಿಕಾಪ್ಟರ್‌ಗಳ ಸಹಾಯದಿಂದ ತುರ್ತು ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದೆ. ಅಲ್ಲದೆ, ಚಾರಣಿಗರ ರಕ್ಷಣೆಗಾಗಿ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಬುಧವಾರ ಬೆಳಿಗ್ಗೆ 9 ಗಂಟೆಗೆ ಉತ್ತರಕಾಶಿ ತಲುಪಿದೆ. ವಿಪತ್ತು ನಿರ್ವಹಣಾ ಪಡೆ ಕೂಡಾ ಭೂ ಮಾರ್ಗವಾಗಿ ಶಿಬಿರದ ಬಳಿಗೆ ತೆರಳಿದೆ’ ಎಂದರು.

‘ರಕ್ಷಣಾ ಕಾರ್ಯಾಚರಣೆಯ ಫಲವಾಗಿ ಕೆಲವು ಚಾರಣಿಗರನ್ನು ರಕ್ಷಿಸಿ ಡೆಹ್ರಾಡೂನ್‌ನ ಸುರಕ್ಷಿತ ಸ್ಥಳಕ್ಕೆ ಕರೆದುಕೊಂಡು ಬರಲಾಗಿದೆ. ಚಾರಣಿಗರ ಪೈಕಿ ಒಬ್ಬರ ಜೊತೆ ನಾನು  ಮಾತನಾಡಿದ್ದು, ಅಲ್ಲಿನ ಸದ್ಯದ ಪರಿಸ್ಥಿತಿಯ ಬಗ್ಗೆ ನಿಖರ ಮಾಹಿತಿ ಪಡೆದಿದ್ದೇನೆ. ಉಳಿದವರನ್ನೂ ರಕ್ಷಿಸುವ ಕಾರ್ಯ ಪ್ರಗತಿಯಲ್ಲಿದೆ. ಅಪಾಯದಲ್ಲಿ ಸಿಲುಕಿದವರನ್ನು ರಕ್ಷಿಸಲು ರಾಜ್ಯ ಸರ್ಕಾರ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ’ ಎಂದರು. 

‘ಕೆಲವು ಚಾರಣಿಗರು ಮೃತಪಟ್ಟಿರುವ ಮಾಹಿತಿಯೂ ಲಭ್ಯವಾಗಿದೆ. ಅದನ್ನು ನಾವು ಸ್ಥಳೀಯ ಅಧಿಕಾರಿಗಳು ಮತ್ತು ಖಾಸಗಿ ಏಜೆನ್ಸಿಗಳ ಜೊತೆ ಮತ್ತೊಮ್ಮೆ ದೃಢೀಕರಿಸಲು ಯತ್ನಿಸುತ್ತಿದ್ದೇವೆ. ಮೃತರ ಪಾರ್ಥಿವ ಶರೀರಗಳನ್ನು ಹೊರತೆಗೆಯಲು ಸಾಧ್ಯವಾದ ಎಲ್ಲ ಪ್ರಯತ್ನಗಳನ್ನು ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಉತ್ತರಾಖಂಡ ಸರ್ಕಾರದೊಂದಿಗೆ ಸಂಪರ್ಕದಲ್ಲಿದ್ದು, ಈ ನಿಟ್ಟಿನಲ್ಲಿಯೂ ಕೆಲಸ ನಡೆಯುತ್ತಿದೆ’ ಎಂದೂ ಹೇಳಿದರು.

ಅಪಾಯದಲ್ಲಿರುವ ಸಿಲುಕಿರುವವರ ರಕ್ಷಣೆಗಾಗಿ ಉತ್ತರಾಖಂಡದ ಉತ್ತರಕಾಶಿಯಲ್ಲಿ ಸಹಾಯ ಕೇಂದ್ರವನ್ನು ತೆರೆಯಲಾಗಿದೆ. ಐಎಎಸ್‌ ಅಧಿಕಾರಿ ವಿಪುಲ್‌ ಬನ್ಸಾಲ್‌ (9480474949) ಅವರಿಗೆ ಈ ಕೇಂದ್ರದ ಜವಾಬ್ದಾರಿ ನೀಡಿ ರಾಜ್ಯ ಸರ್ಕಾರ  ಆದೇಶ ಹೊರಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.