ಬೆಂಗಳೂರು: ವಾಣಿಜ್ಯ ನಿವೇಶನಗಳ ನಿಯಮದಡಿ ಕಾರಣಗಳನ್ನು ನೀಡದೆಯೇ, ನಿವೇಶನಗಳ ಹರಾಜು ಬಿಡ್ ತಿರಸ್ಕರಿಸುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಅಧಿಕಾರವನ್ನು ಹೈಕೋರ್ಟ್ ಎತ್ತಿಹಿಡಿದಿದೆ.
‘ಏಕಸದಸ್ಯ ನ್ಯಾಯಪೀಠದ ಆದೇಶವನ್ನು ರದ್ದುಗೊಳಿಸಬೇಕು’ ಎಂದು ಕೋರಿ ಬಿಡಿಎ ಸಲ್ಲಿಸಿದ್ದ ರಿಟ್ ಮೇಲ್ಮನವಿಯನ್ನು ಪುರಸ್ಕರಿಸಿರುವ ನ್ಯಾಯಮೂರ್ತಿ ಅನು ಶಿವರಾಮನ್ ಮತ್ತು ಜಿ.ಬಸವರಾಜು ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.
‘ಬಿಡಿಎ ಕ್ರಮದಲ್ಲಿ ಯಾವುದೇ ಏಕಪಕ್ಷೀಯ, ಪೂರ್ವಗ್ರಹ ಪೀಡಿತ ಭಾವನೆ ಅಥವಾ ತರತಮ ನೀತಿ ಅನುಸರಣೆ ಕಂಡು ಬಂದಿಲ್ಲ. ಅದು ನಿಯಮಾನುಸಾರವೇ ಕ್ರಮ ಕೈಗೊಂಡಿದೆ. ಟೆಂಡರ್‌ದಾರರು ಇತರೆ ಬಿಡ್‌ದಾರರ ಜತೆ ಸೇರಿ ತಮ್ಮದೇ ವ್ಯೂಹ ರಚಿಸಿಕೊಂಡು ವಂಚನೆ ಮಾಡಲು ಯತ್ನಿಸಿರುವುದನ್ನು ಸಾಬೀತುಪಡಿಸುವ ಯಾವುದೇ ಅಂಶಗಳು ಇಲ್ಲಿ ಕಂಡು ಬಂದಿಲ್ಲ’ ಎಂದು ಸ್ಪಷ್ಟಪಡಿಸಿದೆ.
‘ಬಿಡಿಎ ಹೊರಡಿಸಿರುವ ಇ-ಹರಾಜು ಅಧಿಸೂಚನೆಯ ನಿಯಮ ಮತ್ತು ನಿಬಂಧನೆಗಳಡಿ, ಬಿಡ್ ತಿರಸ್ಕರಿಸುವ ಮುನ್ನ ಯಾವುದೇ ವಿಚಾರಣೆ ನಡೆಸಲು ಅವಕಾಶವಿಲ್ಲ. ನಿಯಮಗಳ ಪ್ರಕಾರ ಯಾವುದೇ ಯಶಸ್ವಿ ಬಿಡ್ ಅನ್ನು ಒಪ್ಪಿಕೊಳ್ಳುವ ಅಥವಾ ತಿರಸ್ಕರಿಸುವ ಅಧಿಕಾರ ಬಿಡಿಎಗೆ ಇದೆ. ಹಾಗಾಗಿ, ಬಿಡಿಎ ಆದೇಶದಲ್ಲಿ ಯಾವುದೇ ಲೋಪವಾಗಿಲ್ಲ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಪ್ರಕರಣವೇನು?: ಏಕಸದಸ್ಯ ನ್ಯಾಯಪೀಠವು ನಾಗರಭಾವಿಯ ಸಚಿನ್ ನಾಗರಾಜಪ್ಪ ಎಂಬುವರ ರಿಟ್ ಅರ್ಜಿಯನ್ನು ಪುರಸ್ಕರಿಸಿತ್ತು. ಬಿಡ್ ತಿರಸ್ಕರಿಸಿ ಬಿಡಿಎ ಕಳುಹಿಸಿದ್ದ ನೋಟಿಸ್ ಅನ್ನು ರದ್ದುಗೊಳಿಸಿತ್ತು. ‘ಟೆಂಡರ್‌ನಲ್ಲಿ ನಮೂದು ಮಾಡಿರುವಂತೆ 1,54,000 ಚದರ ಮೀಟರ್ ಜಾಗವನ್ನು ಅರ್ಜಿದಾರರಿಗೆ ಒಪ್ಪಿಸಿ’ ಎಂದು ಆದೇಶಿಸಿತ್ತು.
‘ಏಕಸದಸ್ಯ ನ್ಯಾಯಪೀಠದ ಈ ತೀರ್ಪು ಬಿಡಿಎ ವಾಣಿಜ್ಯ ನಿವೇಶನಗಳು ಮತ್ತು ಮೂಲೆ ನಿವೇಶಗಳ ವಿಲೇವಾರಿ ನಿಯಮ–1984ಕ್ಕೆ ವಿರುದ್ಧವಾಗಿದೆ. ರಾಜ್ಯ ಸರ್ಕಾರ ಅದಕ್ಕಾಗಿಯೇ ನಿಯಮಗಳನ್ನು ರೂಪಿಸಿದೆ ಮತ್ತು ಬಿಡಿಎಗೆ ಕಾರಣಗಳನ್ನು ನೀಡದೆ ಬಿಡ್ ಅನ್ನು ತಿರಸ್ಕರಿಸುವ ಅಥವಾ ಒಪ್ಪಿಕೊಳ್ಳುವ ಅಧಿಕಾರವಿದೆ’ ಎಂದು ವಿಭಾಗೀಯ ಪೀಠದಲ್ಲಿ ಬಿಡಿಎ ರಿಟ್ ಮೇಲ್ಮನವಿ ಸಲ್ಲಿಸಿತ್ತು.
ಕದ್ದ ಮಾಲು ವಿಲೇವಾರಿ: ಹೈಕೋರ್ಟ್ ಮಾರ್ಗಸೂಚಿ
ಬೆಂಗಳೂರು: ಕಳ್ಳತನದ ಪ್ರಕರಣಗಳಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದ ವಸ್ತುಗಳನ್ನು ಮಾಲೀಕರಿಗೆ ಬಿಡುಗಡೆ ಮಾಡುವಾಗ ವಿಚಾರಣಾ ನ್ಯಾಯಾಲಯ ಅನುಸರಿಸಬೇಕಾದ ನಿಯಮಗಳೇನು ಎಂಬ ಬಗ್ಗೆ ಹೈಕೋರ್ಟ್, ಮಾರ್ಗಸೂಚಿ ಹೊರಡಿಸಿದೆ.
‘ಅಂಗಡಿಯಲ್ಲಿ ಕದ್ದ ಎಲೆಕ್ಟ್ರಾನಿಕ್ ಉಪಕರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಉಪಕರಣಗಳ ಬಿಡುಗಡೆಗೆ ನಿರ್ದೇಶಿಸಬೇಕು’ ಎಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣಾ ನ್ಯಾಯಾಲಯ ವಜಾಗೊಳಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ವಿಶಾಲ್ ಖಟ್ವಾನಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ.ಶ್ರೀಶಾನಂದ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಮಾರ್ಗಸೂಚಿ ಹೊರಡಿಸಿದೆ.
‘ಈ ಸಂಬಂಧ ಸರ್ಕಾರ ಸೂಕ್ತ ನಿಯಮಗಳನ್ನು ರೂಪಿಸುವತನಕ ಈ ಮಾರ್ಗಸೂಚಿ ಅನ್ವಯವಾಗಲಿದೆ ಮತ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಜಿದಾರರಿಂದ 40 ಲಕ್ಷ ಮೊತ್ತದ ಬಾಂಡ್ ಪಡೆದು ಎಲ್ಲ ವಸ್ತುಗಳನ್ನು ಬಿಡುಗಡೆ ಮಾಡಬೇಕು’ ಎಂದು ಆದೇಶಿಸಿದೆ.
‘ವಿದ್ಯುನ್ಮಾನ ಉಪಕರಣಗಳು, ಡಿಜಿಟಲ್ ಸಾಧನಗಳು, ವೈದ್ಯಕೀಯ ಮಾದರಿಗಳು, ಆಹಾರ ಪದಾರ್ಥಗಳು, ಪೆಟ್ರೋಲಿಯಂ ಉತ್ಪನ್ನಗಳು, ಶೀಘ್ರದಲ್ಲಿ ಹಾಳಾಗುವಂತಹ ವಸ್ತುಗಳು, ಚಿನ್ನ ಮತ್ತು ಬೆಳ್ಳಿಯಂತಹ ಬೆಲೆ ಬಾಳುವಂತಹ ವಸ್ತುಗಳನ್ನು ವಶಪಡಿಸಿಕೊಂಡು ಅವುಗಳನ್ನು ಬಿಡುಗಡೆ ಮಾಡುವ ಸಂಬಂಧ ರಾಜ್ಯ ಸರ್ಕಾರ ಅಗತ್ಯ ನಿಯಮಾವಳಿ ರೂಪಿಸಬೇಕು’ ಎಂದು ನ್ಯಾಯಪೀಠ ಆದೇಶಿಸಿದೆ.
ಅಮಾನತು: ಸರ್ಕಾರಿ ಆದೇಶ ಎತ್ತಿಹಿಡಿದ ಕೆಎಟಿ
ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್‌ಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ವಿಶೇಷ ಸೌಲಭ್ಯ ಕಲ್ಪಿಸಿದ ಆರೋಪದಡಿ ಜೈಲು ಅಧೀಕ್ಷಕ ಹುದ್ದೆಯಿಂದ ಮಲ್ಲಿಕಾರ್ಜುನ ಬಿ.ಸ್ವಾಮಿ ಅವರನ್ನು ಅಮಾನತು ಪಡಿಸಿದ್ದ ರಾಜ್ಯ ಸರ್ಕಾರದ ಆದೇಶವವನ್ನು ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ) ಎತ್ತಿ ಹಿಡಿದಿದೆ.
‘ಸರ್ಕಾರದ ಆದೇಶ ರದ್ದುಪಡಿಸಬೇಕು’ ಎಂದು ಕೋರಿ ಮಲ್ಲಿಕಾರ್ಜುನ ಬಿ.ಸ್ವಾಮಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿ ಕೆಎಟಿ ಅಧ್ಯಕ್ಷರೂ ಆದ ನ್ಯಾಯಮೂರ್ತಿ ಆರ್.ಬಿ. ಬೂದಿಹಾಳ್ ಮತ್ತು ಆಡಳಿತಾತ್ಮಕ ಸದಸ್ಯ ರಾಘವೇಂದ್ರ ಔರಾದ್ಕರ್ ಅವರಿದ್ದ ವಿಭಾಗೀಯ ಪೀಠ ಈ ಕುರಿತಂತೆ ಆದೇಶಿಸಿದೆ.
‘ಪ್ರಕರಣದ ದಾಖಲೆಗಳನ್ನು ಪರಿಶೀಲಿಸಿದರೆ ಸರ್ಕಾರದ ಆದೇಶ ಸೂಕ್ತವಾಗಿದೆ ಎಂದು ಕಂಡು ಬರು ತ್ತಿದೆ. ಹಾಗಾಗಿ, ಅರ್ಜಿಯನ್ನು ವಜಾಗೊಳಿಸಲಾಗುತ್ತಿದೆ’ ಎಂದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.