ಬೆಂಗಳೂರು: ಗುರುಮಠಕಲ್ ಜೆಡಿಎಸ್ ಶಾಸಕ ನಾಗನಗೌಡ ಅವರ ಪುತ್ರ ಶರಣ್ ಗೌಡ ಅವರಿಗೆ ಆಮಿಷ ಒಡ್ಡಿದರೆನ್ನಲಾದ ಆಡಿಯೋವನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಶುಕ್ರವಾರ ಬಿಡುಗಡೆ ಮಾಡಿದರು.
ದೇವದುರ್ಗದಲ್ಲಿ ಯಡಿಯೂರಪ್ಪ ಅವರು ಶರಣ್ ಗೌಡ ಅವರನ್ನು ಕರೆಸಿಕೊಂಡು ಮಂತ್ರಿಸ್ಥಾನ, ₹25 ಕೋಟಿ ಹಣ ನೀಡಿದ್ದಾರೆ ಎನ್ನುವ ಅಂಶಗಳು ಆಡಿಯೊದಲ್ಲಿವೆ ಎಂದರು.
ಹಾಗದರೆ ಆಡಿಯೊದಲ್ಲಿರುವುದೇನು?
ಯಡಿಯೂರಪ್ಪ, ಹಾಸನ ಶಾಸಕ ಪ್ರೀತಂಗೌಡ, ದೇವದುರ್ಗ ಶಾಸಕ ಶಿವನಗೌಡ ಮತ್ತು ಶಾಸಕ ನಾಗನಗೌಡ ಅವರ ಮಗ ಶರಣಗೌಡ ಅವರ ಧ್ವನಿ ಎಂದು ಹೇಳಲಾಗಿರುವ ಆಡಿಯೊದ ಸಂಭಾಷಣೆಯ ತುಣುಕುಗಳು ಹೀಗಿವೆ...
ಯಡಿಯೂರಪ್ಪ: ಏನು ಮಾಡುತ್ತಿಯಪ್ಪ ನೀನು?
ಶರಣಗೌಡ: ಸಂಪೂರ್ಣವಾಗಿ ರಾಜಕೀಯದಲ್ಲಿಯೇ ತೊಡಗಿದ್ದೇನೆ ಸರ್.
ಶಾಸಕ: ಸಂಪೂರ್ಣ ಕ್ಷೇತ್ರವನ್ನು ಇವರೇ ನಿರ್ವಹಣೆ ಮಾಡ್ತಾರೆ.ದೇವರಿಗೆ ಬಂದಿದ್ದಾರೆ ಎಂದು ಹೇಳಿದರು.
ಯಡಿಯೂರಪ್ಪ: ನಿಮ್ಮ ತಂದೆ ವಯಸ್ಸೇನು?
ಶರಣಗೌಡ: 72–73 ಸರ್.
ಯಡಿಯೂರಪ್ಪ: ನಾಳೆ ಎಲ್ಲಾ ಸರಿ ಹೋದರೆ ನೀನೆ ನಿಲ್ತೀಯ ಚುನಾವಣೆಗೆ?
ಶರಣಗೌಡ: ನೀವು ಹೆಂಗೆ ಹೇಳ್ತೀರೊ ಹಂಗೆ ಸರ್. ಪರಿಸ್ಥಿತಿ ಹೆಂಗೆ ಬರುತ್ತೆ ನೋಡ್ಬೇಕು ಸರ್.
ಯಡಿಯೂರಪ್ಪ: ಏನೇನು ಇಲ್ಲಾರಿ. ನಾಲ್ಕು ದಿನಕ್ಕೆ ಸರ್ಕಾರ ಆಗುತ್ತೆ. ಮಂತ್ರಿ ಆಗು ಮುಂದೆ ಹೋಗು ಅಷ್ಟೆ. ಆ ಊರಲ್ಲಿ ನಮಗೆ ಯಾರು ಇಲ್ಲ. ಮಂತ್ರಿ ಮಾಡುವುದಕ್ಕೂ ನಮಗೆ ಯಾವುದೇ ಕಷ್ಟ ಇಲ್ಲ.
ಶರಣಗೌಡ: ನಾನು ಒಬ್ಬ ಬಂದ್ರೆ ಆಗ್ತದಾ ಎನ್ನುವ ಭಯ ಇದೆ ಸರ್ ನನಗೆ
ಯಡಿಯೂರಪ್ಪ: ಹೆಂಗೂ ಎಲ್ಲಾ ನೀನೆ ನೋಡಿಕೊಳ್ಳೊದು. ನೀನು ಬಾಂಬೆಗೆ ಬಾ. ಡಾ. ಸುಧಾಕರ್ ಸಹ ಬಾಂಬೆ ಸೇರಿದ್ದಾನೆ. ಇನ್ನಿಬ್ಬರು ನಾಳೆ ಅಧಿವೇಶನ ಮುಗಿಯುತ್ತಿದ್ದಂತೆ ಹೋಗುತ್ತಾರೆ. ನೀನು, ಅವರಿಬ್ಬರು ಸೇರಿದ್ರೆ ನಾಳೆಗೆ 13 ರಿಂದ 14 ಜನ ಆಗ್ತಾರೆ ನಮಗೆ ಇನ್ನೊಬ್ಬರು ಬೇಕು ಅಷ್ಟೆ. ದೈವೀಕರವಾದ ಒಂದು ಅವಕಾಶ. ನನ್ನ ಮಗನಂತೆ ನಿನ್ನ ನೋಡ್ಕೊತೀನಿ. ಹೊರಡು ಅಷ್ಟೆ. ನಾನು ಒಮ್ಮೆ ಭರವಸೆ ಕೊಟ್ರೆ, ಹಿಂದೆ ಸರಿಯುವುದಾಗಲಿ, ದ್ರೋಹ ಬಗೆಯುವುದಾಗಲಿ ನನ್ನ ಜೀವನದಲ್ಲಿ ಇಲ್ಲ. ಚುನಾವಣೆಗಾಗಿ ನಿಗೆ ದುಡ್ಡು ಕೊಡ್ಸನಾ
ಶಾಸಕ: ಅದೆಲ್ಲಾ ವಿಜಯಣ್ಣನ ಜೊತೆ ಮಾತಾಡ್ತೀವಿ ಸರ್.
ಯಡಿಯೂರಪ್ಪ: 99% ನಾಳೆ ಸಂಜೆಯೊಳಗೆ 14–15 ಜನ ಆಗೋಗ್ತಾರೆ.
ಶರಣಗೌಡ: ಸದಸ್ಯತ್ವ ಅದು ಇದು ಅಂತಾರೆ. ಈ ವಯಸ್ಸಲ್ಲಿ ನಮ್ಮ ತಂದೆಯವರಿಗೆ ಸುಮ್ಮನೆ ಮಾತಾಡ್ತಾರೆ. ಅದು ಭಯ ಸರ್
ಯಡಿಯೂರಪ್ಪ: ಈ ನನ್ನ ಮಗ ಸಿದ್ದರಾಮಯ್ಯ ಮಾತಾಡೋಕೆ ಕವಡೆ ಕಾಸಿನ ಕಿಮ್ಮತ್ತಿ ಇಲ್ಲ. ವಿಪ್ ಕೊಡ್ತೀನಿ, ಸದಸ್ಯತ್ವ ಹೋಗತ್ತೆ, ಮತ್ತೊಂದು ಎಂದು ಮೂರು ದಿನದಿಂದ ಬೊಬ್ಬೆ ಹೊಡಿತಿದಾನೆ. ಯಾವನು ಕೇರ್ ಮಾಡಿಲ್ಲ. ನಾನು ಒಂದು ಸರಿ ಭರವಸೆ ಕೊಟ್ಟ ಮೇಲೆ ಮುಗಿತು.
ಶರಣಗೌಡ: ನಾಳೆ 9.30ಕ್ಕೆ ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ ಸರ್.
ಶಾಸಕ: ನಿಮ್ಮ ತಂದೆ ಅವರು ಅದಕ್ಕೆ ಹೋಗಲಿ. ನೀನು ಬಾಂಬೆ ಬಾ. ಬಂದು ಅಲ್ಲಿ ನೋಡು, ಸರಿ ಅನ್ಸಿದ್ರೆ ನಿಮ್ಮ ತಂದೆಗೆ ರಾಜೀನಾಮೆ ಕೊಡ್ಸು. ನೀನು ಬಾ ಸಾಕು. ಅವರು ಬರೋದೆ ಬೇಡ.
ಶರಣಗೌಡ: ನಮ್ಮದೆಲ್ಲ ಕಾಂಗ್ರೆಸ್ ಕೋಟೆ. ಮುಂದೆ ನಾವು ಆ ನಿರ್ಧಾರ ತೆಗೆದುಕೊಂಡರೆ, ನಿಮ್ಮ ಆಶೀರ್ವಾದ ಇರರ್ಬೇಕು ಸರ್
ಶಾಸಕ: ವೆಂಕಟರೆಡ್ಡಿ ಮುದ್ನಾಳ್, ನಾನು, ರಾಜು ಇಬ್ಬರು ನಿನ್ನ ಪರವಾಗಿ ಕೆಲಸ ಮಾಡ್ತೀವಿ.
ಯಡಿಯೂರಪ್ಪ: 12 ಜನನ ಮಂತ್ರಿ ಮಾಡ್ತೀವಿ. 8 ಜನರನ್ನು ಅಧ್ಯಕ್ಷರನ್ನಾಗಿ ಮಾಡ್ತೀವಿ. ಒಂದು ಟರ್ಮ್ ಮಂತ್ರಿಯಾಗೆ ಇರು.
ಶರಣಗೌಡ: ಚುನಾವಣೆ ಖರ್ಚು ವೆಚ್ಚ?
ಯಡಿಯೂರಪ್ಪ:₹10 ಕೋಟಿ ಕೊಡ್ತೀವಲ್ಲಪ್ಪ. ನಾಳೆ ಸರ್ಕಾರ ರಚನೆ ಆದ್ಮೆಲೆ ಮಂತ್ರಿ ಅಂತ ನಿನ್ನ ಘೋಷಣೆ ಮಾಡ್ತೀವಿ. ಚುನಾವಣೆ ಸಮಯದಲ್ಲಿ ಇನ್ನು ಹೆಚ್ಚು ಖರ್ಚು ಮಾಡೋಣ ಬಿಡು. ನಿನ್ನ ಶಾಸಕ ಮಾಡುವ ಜವಾಬ್ದಾರಿ ನಮ್ಮದು. ನಿನ್ನ ತಂದೆಯನ್ನು ಒಪ್ಪಿಸುವ ಜವಾಬ್ದಾರಿ ನಿನ್ನದು. ನನ್ನ ಮಗ ವಿಜಯೇಂದ್ರ ಹೆಂಗೊ ನೀನು ಹಂಗೆ. ಒಂದು ಕ್ಷಣ ತಡ ಮಾಡದೆ ಬಾಂಬೆಗೆ ಹೋಗು.ಸುಧಾಕರ್ ಸೇರಿ 11 ಜನ ಈಗ ಬಾಂಬೆಯಲ್ಲಿದ್ದಾರೆ.ಸಭಾಪತಿ ರಮೇಶ್ ಕುಮಾರ್ ಅವರನ್ನು ₹50 ಕೋಟಿ ಕೊಟ್ಟು ಬುಕ್ ಮಾಡಿದ್ದೇವೆ, ನ್ಯಾಯಮೂರ್ತಿಗಳನ್ನು ಅಮಿತ್ ಶಾ, ಮೋದಿ ಬುಕ್ ಮಾಡುತ್ತಾರೆ.ಇನ್ನೇನು ಜೆಡಿಎಸ್‌ಗೆ ಭವಿಷ್ಯವಿಲ್ಲ. ನಮ್ಮೊಂದಿಗೆ ಬಾ ಒಳ್ಳೆಯದಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.