ನವದೆಹಲಿ: ‘ಕಾವೇರಿ ಜಲವಿವಾದ ನ್ಯಾಯಮಂಡಳಿ ಆದೇಶದ ಪ್ರಕಾರ, ತಮಿಳುನಾಡಿಗೆ ಜುಲೈ ಅಂತ್ಯದ ವರೆಗೆ 40.43 ಟಿಎಂಸಿ ಅಡಿ ನೀರು ಬಿಡಬೇಕಿತ್ತು. ಈ ವರ್ಷ ಇಲ್ಲಿಯವರೆಗೆ 86.17 ಟಿಎಂಸಿ ಅಡಿ ನೀರು ಹರಿಸಲಾಗಿದೆ. ಈ ಮೂಲಕ ಆಗಸ್ಟ್ ತಿಂಗಳ ಪಾಲನ್ನೂ ನೀಡಿದಂತಾಗಿದೆ’ ಎಂದು ಕರ್ನಾಟಕ ಸರ್ಕಾರ ಪ್ರತಿಪಾದಿಸಿದೆ.
ನವದೆಹಲಿಯಲ್ಲಿ ಮಂಗಳವಾರ ನಡೆದ ಕಾವೇರಿ ನೀರು ನಿಯಂತ್ರಣ ಸಮಿತಿಯ ಸಭೆಯಲ್ಲಿ ಕರ್ನಾಟಕ ಸರ್ಕಾರ ಈ ವಾದ ಮುಂದಿಟ್ಟಿತು.
ಕಾವೇರಿ ನ್ಯಾಯಮಂಡಳಿಯ 1995ರ ಆದೇಶದಂತೆ ಹಾಗೂ ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರದ ಮೊದಲನೇ ಸಭೆಯ ನಿರ್ಣಯದಂತೆ ಈ ಹೆಚ್ಚುವರಿ ನೀರಿನ ಪ್ರಮಾಣವನ್ನು ಮುಂಬರುವ ತಿಂಗಳುಗಳಲ್ಲಿ ಕರ್ನಾಟಕ ರಾಜ್ಯವು ಹರಿಸಬೇಕಾದ ನೀರಿನ ಮೊತ್ತಕ್ಕೆ ಜಮೆ ಮಾಡಿಕೊಳ್ಳತಕ್ಕದ್ದು ಎಂದು ಹೇಳಿತು.
ತಮಿಳುನಾಡು ಸರ್ಕಾರ, ‘ಮೆಟ್ಟೂರು ಜಲಾಶಯದಿಂದ ನೀರಾವರಿಗಾಗಿ ನೀರು ಹರಿಸಲಾಗುತ್ತಿದೆ. ಪ್ರಸ್ತುತ, 23,000 ಕ್ಯೂಸೆಕ್ ನೀರನ್ನು ಜಲಾಶಯದಿಂದ ಬಿಡಲಾಗುತ್ತಿದೆ. ಕಾವೇರಿ ನ್ಯಾಯಮಂಡಳಿ ಆದೇಶದ ಪ್ರಕಾರ, ಮುಂದಿನ ತಿಂಗಳುಗಳಲ್ಲಿ ರಾಜ್ಯಕ್ಕೆ ನೀರು ಹರಿಸುವಂತೆ ಕರ್ನಾಟಕಕ್ಕೆ ನಿರ್ದೇಶನ ನೀಡಬೇಕು’ ಎಂದು ಕೋರಿತು.
‘ಬಿಳಿಗುಂಡ್ಲುವಿನ ಹರಿವಿನಲ್ಲಿ ಯಾವುದೇ ಆತಂಕ ಇಲ್ಲ ಹಾಗೂ ಹರಿವು ಸಾಮಾನ್ಯವಾಗಿದೆ. ಮುಂದಿನ ತಿಂಗಳ ಸಭೆಯಲ್ಲಿ ಹರಿವಿನ ಪರಿಸ್ಥಿತಿಯನ್ನು ಮತ್ತೊಮ್ಮೆ ಅವಲೋಕಿಸಲಾಗುವುದು’ ಎಂದು ಸಮಿತಿ ಅಭಿಪ್ರಾಯಪಟ್ಟಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.