ADVERTISEMENT

‘ಊಟ ಕೇಳಬೇಡಿ, ಸಮಸ್ಯೆ ಹೇಳಬೇಡಿ’

ಆಸ್ಟಿನ್‌ ಟೌನ್‌ನ ಸಮಾಜ ಕಲ್ಯಾಣ ವಸತಿ ನಿಲಯದ ವಿದ್ಯಾರ್ಥಿಗಳ ಸಂಕಟ

ಭೀಮಣ್ಣ ಮಾದೆ
Published 12 ಮಾರ್ಚ್ 2019, 20:27 IST
Last Updated 12 ಮಾರ್ಚ್ 2019, 20:27 IST
ವಸತಿ ನಿಲಯದ ನೋಟ
ವಸತಿ ನಿಲಯದ ನೋಟ   

ಬೆಂಗಳೂರು: ಕೊಠಡಿ ಪ್ರವೇಶಿಸುತ್ತಿದ್ದಂತೆ ಮೂಗಿಗೆ ಬಡಿಯುವ ದುರ್ಗಂಧ, ಬೆನ್ನುಬಿಡದೆ ಮೈಗೆ ಮೆತ್ತಿಕೊಂಡು ಮಜ್ಜನ ಮಾಡಿಸುವ ದೂಳು, ಬಣ್ಣ ಬದಲಿಸಿಕೊಂಡ ಜೀವಜಲ...

ಬೆಂಗಳೂರು ಉತ್ತರ ತಾಲ್ಲೂಕಿನ ಆಸ್ಟಿನ್‌ ಟೌನ್‌ನಲ್ಲಿರುವ ಸಮಾಜ ‘ಕಲ್ಯಾಣ’ ಇಲಾಖೆಯ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದ ಚಿತ್ರಣ ಇದು.

20 ಕೊಠಡಿಗಳಿರುವ ಈ ವಸತಿ ನಿಲಯದಲ್ಲಿ 88 ವಿದ್ಯಾರ್ಥಿಗಳು ವಾಸವಾಗಿದ್ದಾರೆ. ಭವಿಷ್ಯದ ಬದುಕಿನ ಕನಸನ್ನು ಹೊತ್ತು ದೂರದ ರಾಯಚೂರು, ಯಾದಗಿರಿ, ಶಿವಮೊಗ್ಗ ಮತ್ತು ಕೊಪ್ಪಳದಿಂದ ಬಂದ ವಿದ್ಯಾರ್ಥಿಗಳು ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೆ ನಿಲಯ ಅವ್ಯವಸ್ಥೆಯ ಆಗರವಾಗಿದೆ.

ADVERTISEMENT

ವಸತಿ ನಿಲಯದ ಕಟ್ಟಡ ದೂಳು ಮೆತ್ತಿಕೊಂಡು ನಿಂತಿದ್ದು, ಸುಮಾರು ವರ್ಷಗಳಿಂದ ಸುಣ್ಣ–ಬಣ್ಣ ಕಂಡಿಲ್ಲ. ಕೆಲ ಕಿಟಕಿಗಳು ಮುರಿದು ಹೋಗಿವೆ. ಆದರೂ ಇಲಾಖೆ ದುರಸ್ತಿಯ ಗೋಜಿಗೆ ಹೋಗಿಲ್ಲ.

ಇಲ್ಲಿ ಸ್ವಚ್ಛತೆ ನೋಡಲೂ ಸಿಗುವುದಿಲ್ಲ. ಶೌಚಾಲಯಗಳು ನಿರ್ವಹಣೆ ಇಲ್ಲದೆ ಸೊರಗಿ, ದುರ್ನಾತ ಬೀರುತ್ತಿವೆ. ವಿದ್ಯಾರ್ಥಿಗಳು ಮೂಗು ಮುಚ್ಚಿಕೊಂಡು ನಿತ್ಯಕರ್ಮ ಮುಗಿಸಬೇಕಾದ ಸ್ಥಿತಿ ಇದೆ. ಚಿಲಕಗಳು ಕಿತ್ತು ಹೋಗಿದ್ದು, ನೀರಿನ ಪೈಪ್‌ಗಳು ಒಡೆದಿವೆ. ಕೊಳಾಯಿಗಳಿಲ್ಲ. ಅವ್ಯವಸ್ಥೆಯ ಕಾರಣ ಕೆಲ ವಿದ್ಯಾರ್ಥಿಗಳು ಬಹಿರ್ದೆಸೆಗೆ ಸಾರ್ವಜನಿಕ ಶೌಚಾಲಯಕ್ಕೆ ತೆರಳುತ್ತಾರೆ.

ಕಳಪೆ ಆಹಾರ: ‘ವಸತಿ ನಿಲಯದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಮೆನುವನ್ನು ಗಾಳಿಗೆ ತೂರಿ, ಕಳಪೆ ಗುಣಮಟ್ಟದ ಆಹಾರ ನೀಡಲಾಗುತ್ತಿದೆ. ವಿದ್ಯಾರ್ಥಿಗಳಿಗೆ ತರಹೆವಾರಿ ಉಪಾಹಾರ ನೀಡಬೇಕು ಎಂದು ಮೆನುವಿನಲ್ಲಿ ಹೇಳಲಾಗಿದೆ. ಆದರೂ ಒಂದೇ ತರಹದ ಉಪಾಹಾರ ನೀಡುತ್ತಾರೆ. ಮಧ್ಯಾಹ್ನದ ಊಟ ಇಲ್ಲ. ಆಹಾರದಲ್ಲಿ ಪೌಷ್ಟಿಕಾಂಶ ಇರುವುದಿಲ್ಲ. ಕಾಲೇಜಿಗೆ ತೆರಳಲು ಆಯಾಸವಾಗುತ್ತದೆ’ ಎಂದು ವಿದ್ಯಾರ್ಥಿಯೊಬ್ಬರು ಅಳಲು ತೋಡಿಕೊಂಡರು.

ಗ್ರಂಥಾಲಯವೇ ಇಲ್ಲ: ಗ್ರಂಥಾಲಯ ಸ್ಥಾಪನೆಗೆ ಪ್ರತಿ ವಸತಿ ನಿಲಯಕ್ಕೂ ಸಮಾಜ ಕಲ್ಯಾಣ ಇಲಾಖೆ ಅನುದಾನ ನೀಡುತ್ತದೆ. ಆದರೆ ಇಲ್ಲಿ ಗ್ರಂಥಾಲಯವಿಲ್ಲ! ವಿದ್ಯಾರ್ಥಿಗಳು ಓದಿಗೆ ಮತ್ತೊಂದು ಗ್ರಂಥಾಲಯವನ್ನು ಅವಲಂಬಿಸುವುದು ಅನಿವಾರ್ಯ
ವಾಗಿದೆ.

ಕಮರಿದ ಬದುಕು: ‘ಅವ್ಯವಸ್ಥೆಯ ಕಾರಣ ಕೆಲ ದೂರದ ಊರಿನ ವಿದ್ಯಾರ್ಥಿಗಳು ಬ್ಯಾಗ್‌ ಹೆಗಲಿಗೇರಿಸಿಕೊಂಡು ಊರಿನ ಬಸ್‌ ಹಿಡಿದಿದ್ದಾರೆ. ಕಾಲೇಜು ಬಿಟ್ಟು ಹಾಗೇ ಊರಿಗೆ ಹೋದವರು ಭವಿಷ್ಯದ ಕನಸನ್ನು ಕಮರಿಸಿಕೊಂಡು ಹೊಲದಲ್ಲಿ ಕೆಲಸ ಮಾಡುತ್ತಿದ್ದಾರೆ. ಅದಕ್ಕೆ ಹೊಣೆ ಯಾರು’ ಎಂದು ವಿದ್ಯಾರ್ಥಿಯೊಬ್ಬ ಪ್ರಶ್ನಿಸಿದ.

ಪ್ರತಿಭಟನೆ ಮಾಡಿ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದರು ಸಹ ಪ್ರಯೋಜನವಾಗಿಲ್ಲ ಎಂದು ವಸತಿ ನಿಲಯದ ವಿದ್ಯಾರ್ಥಿಗಳು ದೂರಿದರು.

***

ಅಂಕಿ–ಅಂಶಗಳು

88 -ವಸತಿ ನಿಲಯದಲ್ಲಿನ ವಿದ್ಯಾರ್ಥಿಗಳು

₹1,500 -ಪ್ರತಿ ವಿದ್ಯಾರ್ಥಿಗೆ ಸಿಗುವ ಮಾಸಿಕ ಆಹಾರ ಭತ್ಯೆ

***

ಹಳೆ ಕಟ್ಟಡವಾದ್ದರಿಂದ ಸಮಸ್ಯೆಗಳು ಇವೆ. ನವೀಕರಣಕ್ಕೆ ಪತ್ರ ಬರೆದಿದ್ದೇವೆ. ಅನುದಾನ ಬಿಡುಗಡೆಯಾದ ತಕ್ಷಣ ಸಮಸ್ಯೆ ಬಗೆಹರಿಸುತ್ತೇವೆ. - ಕುಮಾರಸ್ವಾಮಿ, ಸಹಾಯಕ ನಿರ್ದೇಶಕ, ಸಮಾಜ ಕಲ್ಯಾಣ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.