ಆಲಮಟ್ಟಿ:ಇಲ್ಲಿನ ಲಾಲ್‌ಬಹದ್ದೂರ್ ಶಾಸ್ತ್ರಿ ಜಲಾಶಯದಿಂದ ಆಲಮಟ್ಟಿ ನಾಡಿನ ಎಲ್ಲೆಡೆ ಪ್ರಸಿದ್ಧಿಯಾಗಿದೆ. ಇದಕ್ಕೂ ಮುನ್ನ ಕರ್ನಾಟಕದ ಗಾಂಧಿ ಎಂದೇ ಹೆಸರಾಗಿದ್ದ ಹರ್ಡೇಕರ್ ಮಂಜಪ್ಪ ಅವರಿಂದ ಖ್ಯಾತಿ ಹೊಂದಿತ್ತು.
ಬಸವಾಭಿಮಾನಿಯಾಗಿದ್ದ ಮಂಜಪ್ಪ ಅವರ ಖಾದಿ ಪ್ರಚಾರ, ಸ್ವಾತಂತ್ರ್ಯ ಹೋರಾಟ, ಭಾಷಣ, ಪತ್ರಿಕೆಗಳಲ್ಲಿನ ಲೇಖನ ಹಲ ಬದಲಾವಣೆ ತಂದಿದ್ದವು. ಬ್ರಿಟಿಷರಲ್ಲಿ ನಡುಕ ಹುಟ್ಟಿಸಿದ್ದವು. ಬಸವ ಜಯಂತಿ, ಅಕ್ಕಮಹಾದೇವಿ ಜಯಂತಿಯನ್ನು ಮೊಟ್ಟ ಮೊದಲು ಆಚರಿಸಿದ್ದು ಇವರೇ.
ದಾಸಿಯ ಮಗನಾಗಿದ್ದ ಮಂಜಪ್ಪ ಹುಟ್ಟಿದ್ದು ಬನವಾಸಿಯಾಗಿದ್ದರೂ; ಆಲಮಟ್ಟಿಯನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿಸಿಕೊಂಡಿದ್ದರು. ಕೃಷ್ಣೆಯ ತಟದಲ್ಲಿ ಕಾಯಕ ತಳಹದಿಯ ಶಾಲೆ, ಬಸವಾಭಿಮಾನ, ಅವರ ಸಾವಿನ ನಂತರ ಮುಚ್ಚಿ ಹೋದವು. ಸಮಾಧಿ ಸಹ ಹಿನ್ನೀರಿನಲ್ಲಿ ಮುಳುಗಿತು. ಇದಕ್ಕೆ ಕಾಯಕಲ್ಪ ಕೊಟ್ಟವರು ಗದಗಿನ ತೋಂಟದ ಸಿದ್ಧಲಿಂಗ ಸ್ವಾಮೀಜಿ.
ಕಾಯಕಲ್ಪ ಕೊಟ್ಟರು
ಮಂಜಪ್ಪ ಅವರ ಬಸವಾಭಿಮಾನದ ಬಗ್ಗೆ ಅರಿತಿದ್ದ ತೋಂಟದ ಶ್ರೀ, ಹಲ ವಿದ್ವಾಂಸರನ್ನು ಆಲಮಟ್ಟಿಗೆ ಕಳುಹಿಸಿ ಮಂಜಪ್ಪ ಬದುಕು–ಬರಹದ ಬಗ್ಗೆ ಅಧ್ಯಯನ ನಡೆಸಿದರು. ಸಂಶೋಧಕ ಎಂ.ಎಂ.ಕಲಬುರ್ಗಿ ಸಂಪಾದಕತ್ವದಲ್ಲಿ ನಾಲ್ಕು ಸಂಪುಟಗಳನ್ನು ಮಠದ ಪ್ರಕಾಶನದಲ್ಲಿ ಹೊರಗೆ ತಂದರು.
ಹರ್ಡೇಕರ್ ಕುರಿತು ಹಲವರು ಬರೆದ ಪುಸ್ತಕ, ಮಂಜಪ್ಪ ಬರೆದ ಪುಸ್ತಕಗಳನ್ನು ಸಂಗ್ರಹಿಸಿ ಮರು ಮುದ್ರಣಗೊಳಿಸಿದ್ದು ಸಿದ್ಧಲಿಂಗ ಸ್ವಾಮೀಜಿ. ಈಗಿನ ಪೀಳಿಗೆಗೆ ಸಮಗ್ರ ಪರಿಚಯದ ಚಿತ್ರಣ ನೀಡಿದರು.
ಹಳೆ ಆಲಮಟ್ಟಿಯಲ್ಲಿದ್ದ ಮಂಜಪ್ಪನವರ ಸಮಾಧಿ ಅಗೆಸಿ, ಅವರ ಅಸ್ಥಿಪಂಜರವನ್ನು ಆಲಮಟ್ಟಿಯ ಹರ್ಡೇಕರ್ ಮಂಜಪ್ಪ ಸ್ಮಾರಕ ಪ್ರೌಢಶಾಲೆಯ ಹಿಂಭಾಗದಲ್ಲಿನ ವಿಶಾಲ ಜಾಗಕ್ಕೆ 1998ರಲ್ಲಿ ಸ್ಥಳಾಂತರಿಸಿದ್ದು ತೋಂಟದ ಶ್ರೀ.
ಸ್ಥಳಾಂತರಗೊಂಡ ಸಮಾಧಿ ಸ್ಥಳ 2008ರವರೆಗೂ ಅನಾಥವಾಗಿತ್ತು. ಅಲ್ಲೊಂದು ಸ್ಮಾರಕ ನಿರ್ಮಿಸಿ ಮಂಜಪ್ಪನವರ ಬದುಕು ಬರಹ, ಅವರು ಆ ಸಮಯದಲ್ಲಿ ಆಲಮಟ್ಟಿಯಲ್ಲಿಯೇ ಕಾಗದ ತಯಾರಿಸಿ, ಪತ್ರಿಕೆ ಹೊರ ತರುತ್ತಿರುವ ವಿಧಾನವನ್ನು ಈಗಿನ ಪೀಳಿಗೆಗೆ ತೋರಿಸಬೇಕೆಂಬ ಉತ್ಕಟ ಆಸೆಯನ್ನು ಸ್ವಾಮೀಜಿ ಹೊಂದಿದ್ದರು.
ಇದಕ್ಕಾಗಿ ತಮ್ಮ ಮಠದ ಅಧೀನದಲ್ಲಿದ್ದ ಎರಡು ಎಕರೆ ಪ್ರದೇಶವನ್ನು ಸ್ಮಾರಕ ನಿರ್ಮಾಣಕ್ಕೆ ನೀಡಿದರು. ರಾಜ್ಯ ಸರ್ಕಾರದ ಮೇಲೆ ಒತ್ತಡ ತಂದು ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ₹ 1ಕೋಟಿ ಹಣವನ್ನು ಬಿಡುಗಡೆಗೊಳಿಸಿದರು. ಅದನ್ನು ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರಕ್ಕೆ ನೀಡಿ, ಐಎಎಸ್ ಅಧಿಕಾರಿ ಎಸ್.ಎಂ.ಜಾಮದಾರ ಅವರನ್ನು ಭೇಟಿ ಮಾಡಿ, ‘ಕರ್ನಾಟಕ ಗಾಂಧಿ ಮಂಜಪ್ಪ ಹರ್ಡೇಕರ’ ಸ್ಮಾರಕ ನಿರ್ಮಾಣದ ಹೊಣೆ ನೀಡಿದರು.
ಸ್ಮಾರಕ ನಿರ್ಮಾಣಕ್ಕೆ ಇನ್ನೂ ₹ 50 ಲಕ್ಷದ ಕೊರತೆ ಬಿದ್ದಾಗ, ಆಗಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಿದ್ದ ಗೋವಿಂದ ಕಾರಜೋಳರನ್ನು ಭೇಟಿ ಮಾಡಿ, ಇಲಾಖೆಯಿಂದ ಅನುದಾನ ನೀಡುವಂತೆ ಮನವಿ ಮಾಡಿದ್ದರು. ಅದಕ್ಕೆ ಸ್ಪಂದಿಸಿದ ಕಾರಜೋಳ ತಕ್ಷಣವೇ ₹ 50 ಲಕ್ಷ ಬಿಡುಗಡೆ ಮಾಡಿದ್ದರು. ಹೀಗಾಗಿ ₹ 1.50 ಕೋಟಿ ವೆಚ್ಚದಲ್ಲಿ ಆಲಮಟ್ಟಿಯಲ್ಲಿ ಸುಂದರ ಸ್ಮಾರಕ ನಿರ್ಮಾಣಗೊಂಡಿದೆ. ಅದರಲ್ಲಿ ₹ 9 ಲಕ್ಷ ವೆಚ್ಚದಲ್ಲಿ ಮಂಜಪ್ಪನವರ ಕಂಚಿನ ಪುತ್ಥಳಿಯನ್ನು ಮಠದ ವತಿಯಿಂದ ನಿರ್ಮಿಸಿದ್ದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ.
ಸ್ಮಾರಕಕ್ಕೆ ಉದ್ಯಾನ, ರಸ್ತೆ ನಿರ್ಮಾಣ, ಸುತ್ತಲೂ ಇರುವ ಸುಮಾರು 50 ಎಕರೆ ವಿಶಾಲ ಪ್ರದೇಶದಲ್ಲಿ ಹಸರೀಕರಣಕ್ಕೆ ಆದ್ಯತೆ ನೀಡಲು ಶ್ರೀಗಳು ಈ ಹಿಂದಿನ ಸರ್ಕಾರದಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದ ಎಂ.ಬಿ.ಪಾಟೀಲರನ್ನು ಒತ್ತಾಯಿಸಿದ್ದರು. ತಕ್ಷಣವೇ ಸ್ಪಂದಿಸಿದ ಪಾಟೀಲ, ಸ್ಮಾರಕಕ್ಕೆ ರಸ್ತೆ ಸಂಪರ್ಕ, ಉದ್ಯಾನ ನಿರ್ಮಿಸಿ, ಮಠದ ಅಧೀನದಲ್ಲಿನ 50 ಎಕರೆ ವಿಶಾಲ ಪ್ರದೇಶದಲ್ಲಿ ಸುಮಾರು 10 ಸಾವಿರ ಸಸಿಗಳನ್ನು ಕೆಬಿಜೆಎನ್‌ಎಲ್ ವತಿಯಿಂದ ನೆಡಿಸಿದ್ದರು.
ಇದೀಗ ಸುಂದರ ಸ್ಮಾರಕ ಶ್ರೀಗಳ ಇಚ್ಛೆಗೆ ಅನುಗುಣವಾಗಿ ನಿರ್ಮಾಣಗೊಂಡಿದೆ. ಆದರೆ ಅವರ ಕನಸಿನಂತೆ ಮಂಜಪ್ಪನವರ ಬದುಕು ಬರಹಗಳ ಅಭಿವ್ಯಕ್ತಿ ಕಾರ್ಯ ಇನ್ನೂ ಜರುಗಿಲ್ಲ. ಸ್ಮಾರಕದ ಸುತ್ತಲೂ ಇರುವ 50 ಎಕರೆ ಜಾಗದಲ್ಲಿ ಸುಂದರ ‘ಬಸವ ವಿಶ್ವವಿದ್ಯಾಲಯ’ ಸ್ಥಾಪನೆ ಹಾಗೂ ಕಾಯಕ ತಳಹದಿಯ ಶಿಕ್ಷಣ ನೀಡಬೇಕೆಂಬ ಶ್ರೀಗಳ ಕನಸು ಕನಸಾಗಿಯೇ ಉಳಿದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.