ADVERTISEMENT

ಲೇಖಕ, ಬ್ಯಾರಿ ಆಂದೋಲನದ ರೂವಾರಿ ಅಬ್ದುಲ್ ರಹೀಮ್ ಟೀಕೆ ನಿಧನ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2019, 5:50 IST
Last Updated 15 ಫೆಬ್ರುವರಿ 2019, 5:50 IST
   

ಮಂಗಳೂರು: ಖ್ಯಾತ ಉದ್ಯಮಿ, ಬ್ಯಾರಿ ಆಂದೋಲನದ ರೂವಾರಿ, ಕವಿ, ಲೇಖಕ, ಅನುವಾದಕ ಅಬ್ದುಲ್ ರಹೀಮ ಟೀಕೆ (65) ಅಲ್ಪ ಕಾಲದ ಅನಾರೋಗ್ಯದಿಂದ ಮಂಗಳೂರಿನ ಸ್ವಗೃಹದಲ್ಲಿ ನಿಧನರಾದರು.

ಇವರಿಗೆ ಪತ್ನಿ, ಇಬ್ಬರು ಪುತ್ರರು ಇದ್ದಾರೆ.

ಟೀಕೇಸ್ ಕಾನ್ಸೆಪ್ಟ್‌ಸ್ ಸಂಸ್ಥೆಯ ಆಡಳಿತ ನಿರ್ದೇಶಕರಾಗಿದ್ದ ಇವರು ಓರ್ವ ಹವ್ಯಾಸಿ ಕವಿ ಮತ್ತು‌ ಲೇಖಕರಾಗಿದ್ದರು. ಸಮಾಜದ ಬಗ್ಗೆ ಕಳಕಳಿ ಇರುವ ಭಾವಜೀವಿಯಾಗಿದ್ದ ಇವರು ಕೇಂದ್ರ ಬ್ಯಾರಿ ಸಾಹಿತ್ಯ ಪರಿಷತ್ತಿನ ಸ್ಥಾಪಕಾಧ್ಯಕ್ಷರಾಗಿದ್ದರು. ಬ್ಯಾರಿ ಭಾಷಾ ಆಂದೋಲನದಲ್ಲಿ ಪೂರ್ಣ ಪ್ರಮಾಣದಲ್ಲಿ ತನ್ನನ್ನು ತೊಡಗಿಸಿಕೊಂಡವರು.

ADVERTISEMENT

1998ರಲ್ಲಿ ಮಂಗಳೂರು ಪುರ ಭವನದಲ್ಲಿ ನೆರವೇರಿದ ಐತಿಹಾಸಿಕ ಪ್ರಥಮ ಬ್ಯಾರಿ ಸಾಹಿತ್ಯ ಸಮ್ಮೇಳನದ ಸಂಚಾಲಕರಾಗಿದ್ದ ಇವರು ಅನಂತರ ಸ್ಥಾಪನೆಯಾದ ಕೇಂದ್ರ ಬ್ಯಾರಿ ಸಾಹಿತ್ಯ ಪರಿಷತ್ತಿನ ಸ್ಥಾಪಕ ಅಧ್ಯಕ್ಷರಾಗಿದ್ದವರು. ಅವರ ಅವಧಿಯಲ್ಲಿ 1999ರಲ್ಲಿ ಬಂಟ್ವಾಳದ ನೇರಳ ಕಟ್ಟಯಲ್ಲಿ ಜರುಗಿದ 2ನೇ ಮತ್ತು 2001ರಲ್ಲಿ ಉಡುಪಿಯಲ್ಲಿ ನೆರವೇರಿದ 3ನೇ ಬ್ಯಾರಿ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ನಡೆಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಈ ಮೂಲಕ ಬ್ಯಾರಿ ಸಾಹಿತ್ಯ ಅಕಾಡೆಮಿಯನ್ನು ದೊರಕಿಸಿ ಕೊಡುವಲ್ಲಿ ಇವರ ಪ್ರಯತ್ನ‌ ಅಪಾರ.

ಇವರು ಬ್ಯಾರಿ ಭಾಷೆಗೆ ಅನುವಾದಿಸಿದ ಮಮತಾ ಜಿ. ಸಾಗರ್ ಅವರ ಇಂಗ್ಲಿಷ್ - ಕನ್ನಡ ಕವನ ಫಾರ್ ಯು (ನಿಮಗೆ...), 'ಹೈಡ್ ಅಂಡ್ ಸೀಕ್' ಎಂಬ ಇಂಗ್ಲಿಷ್ ಕವನ ಸಂಕಲನದಲ್ಲಿ ಪ್ರಕಟವಾಗಿ ಅಂತರ್‌ರಾಷ್ಟ್ರೀಯ ಗೌರವಕ್ಕೆ ಪಾತ್ರವಾಗಿದೆ. ಅನಂತರ ಪ್ರಕಟಗೊಂಡ ಇವರ ಚೊಚ್ಚಲ ಬ್ಯಾರಿ ಕವನ ಸಂಕಲನ 'ಮಲ್ಲಿಗೆ ಬಲ್ಲಿ' ಬ್ಯಾರಿ ಸಾಹಿತ್ಯ ಲೋಕಕ್ಕೆ ಒಂದು ಅಫೂರ್ವ ಕೊಡುಗೆಯಾಗಿದೆ.

ಜಗತ್‌ಪ್ರಸಿದ್ಧ ಇಂಗ್ಲಿಷ್ ಲೇಖಕ 'ಪಾವ್ಲೊ ಕೊಯ್ಲೊ' ಅವರ 'ದಿ ಅಲ್ ಕೆಮಿಸ್ಟ್' ಇಂಗ್ಲಿಷ್ ಕಾದಂಬರಿಯನ್ನು ಮೂಲ ಲೇಖಕರ ಅಧಿಕೃತ ಅನುಮತಿಯನ್ನು ಪಡೆದು, 'ರಸವಾದಿ' ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿದ ಕೀರ್ತಿಯು ಇವರಿಗೆ ಸಲ್ಲುತ್ತದೆ. ಕನ್ನಡ ಮತ್ತು ಬ್ಯಾರಿ ಭಾಷೆಯಲ್ಲಿ ಇವರು ಬರೆದ ವೈಚಾರಿಕ ಲೇಖನ, ವಿಮರ್ಶೆ, ಕತೆ, ಕವನಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

ಅಬ್ದುಲ್ ರಹೀಮ್ ಟೀಕೆ ಜೋಕಟ್ಟೆಯಲ್ಲಿ ಹುಟ್ಟಿ ಬಜಪೆಯಲ್ಲಿ ಬೆಳೆದವರು. ಪ್ರತಿಷ್ಠಿತ ಕಡೇಮನೆ ತರವಾಡಿನ ಬಾವ ಅಬ್ದುಲ್ ಖಾದರ್ ಮತ್ತು ಕುಂಞರಕಾನ ತರವಾಡಿನ ಸಲ್ಮಾ ಅಬ್ದುಲ್ ಖಾದರ್ ದಂಪತಿಯ ಎರಡನೇ ಪುತ್ರನಾದ ಇವರು ಮಂಗಳೂರು ನಗರದಲ್ಲಿ ವಾಸವಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.