ADVERTISEMENT

ಆರ್ಥಿಕ ಬಿಕ್ಕಟ್ಟು: ಆಟೊಮೊಬೈಲ್ ಕ್ಷೇತ್ರ ವಿಲವಿಲ

ವಿಜಯಕುಮಾರ್ ಎಸ್.ಕೆ.
Published 27 ಆಗಸ್ಟ್ 2019, 1:14 IST
Last Updated 27 ಆಗಸ್ಟ್ 2019, 1:14 IST
ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಕೆಲಸವಿಲ್ಲದೆ ಕುಳಿತಿರುವ ಕಾರ್ಮಿಕ –ಪ್ರಜಾವಾಣಿ ಚಿತ್ರ
ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಕೆಲಸವಿಲ್ಲದೆ ಕುಳಿತಿರುವ ಕಾರ್ಮಿಕ –ಪ್ರಜಾವಾಣಿ ಚಿತ್ರ   

ಬೆಂಗಳೂರು: ದೇಶವನ್ನು ಕಾಡುತ್ತಿರುವ ಆರ್ಥಿಕ ಬಿಕ್ಕಟ್ಟು ರಾಜ್ಯದ ಆಟೊಮೊಬೈಲ್ ಕ್ಷೇತ್ರ ನಡುಗುವಂತೆ ಮಾಡಿದೆ. ಅತ್ತ ಮುಚ್ಚಲೂ ಆಗದೆ, ಇತ್ತ ನಿರ್ವಹಣೆ ಮಾಡಲೂ ಸಾಧ್ಯವಾಗದೆ ಉದ್ಯಮಿಗಳು ವಿಲವಿಲನೆ ಒದ್ದಾಡುತ್ತಿದ್ದಾರೆ.

ಟೊ‌ಯೋಟ, ವೊಲ್ವೊ, ಹೋಂಡಾ ಸ್ಕೂಟರ್, ಮಹೀಂದ್ರ ಎಲೆಕ್ಟ್ರಿಕ್ ವಾಹನ ಕಂಪನಿಗಳನ್ನು ಬಿಟ್ಟರೆ ಬೆಂಗಳೂರಿನಲ್ಲಿ ಬೇರೆ ಕಂಪನಿಗಳು ವಾಹನ ತಯಾರಿಕಾ ಘಟಕಗಳನ್ನು ತೆರೆದಿಲ್ಲ. ಆದರೆ, ವಾಹನಗಳ ಬಿಡಿಭಾಗ ತಯಾರಿಕಾ ಕಂಪನಿಗಳು ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿವೆ. ವೀಲ್ಹ್ ಡ್ರೈವ್, ಸ್ಟೀರಿಂಗ್ ಸಿಸ್ಟಮ್, ಎಲೆಕ್ಟ್ರಿಕ್ ಕಾಂಪೊನೆಂಟ್ ಆ್ಯಂಡ್ ಲೈಟ್, ಆ್ಯಕ್ಸಸರೀಸ್‌, ಸಸ್ಪೆನ್ಷನ್, ಬ್ರೇಕ್ ಸಿಸ್ಟಮ್, ಸೀಟ್ ಬೆಲ್ಟ್ ಮತ್ತು ಸೀಟ್ ಕವರ್ ತಯಾರಿಕೆಯಂತಹ ಸಣ್ಣ ಕಂಪನಿಗಳೂ ಇಲ್ಲಿವೆ.

ಹೊರ ರಾಜ್ಯಗಳಲ್ಲಿರುವ ಮಾರುತಿ, ಹ್ಯುಂಡೈ, ಹೋಂಡಾ, ಟೊಯೋಟ, ಟಾಟಾ ಸೇರಿ ಎಲ್ಲಾ ಕಂಪನಿಗಳಿಗೆ ಈ ಬಿಡಿಭಾಗಗಳು ಸರಬರಾಜಾಗುತ್ತವೆ. ಈ ಕಂಪನಿಗಳ ಶೋ ರೂಮ್‌ಗಳು ಖಾಲಿ ಹೊಡೆಯಲು ಆರಂಭವಾದ ನಂತರ ವಾಹನಗಳ ತಯಾರಿಕೆ ಪ್ರಮಾಣವನ್ನೂ ಅವು ಕಡಿಮೆ ಮಾಡಿವೆ. ಪರಿಣಾಮ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಸಿದ್ಧವಾಗುವ ವಾಹನಗಳ ಬಿಡಿ ಭಾಗಗಳಿಗೆ ಬೇಡಿಕೆ ಕುಸಿದೆ.

ADVERTISEMENT

ಏಪ್ರಿಲ್‌ನಲ್ಲಿ ಉಂಟಾದ ಕುಸಿತ ಮೇ ಅಥವಾ ಜೂನ್‌ನಲ್ಲಿ ಚೇತರಿಸಿಕೊಳ್ಳಬಹುದು ಎಂಬ ನಿರೀಕ್ಷೆಯೂ ಹುಸಿಯಾಗಿದೆ. ಜುಲೈನಲ್ಲಿ ಬಿಡಿ ಭಾಗಗಳಿಗೆ ಬೇಡಿಕೆಯೇ ಇಲ್ಲವಾಗಿದೆ. ಆಗಸ್ಟ್‌ನಲ್ಲೂ ಇದೇ ಪರಿಸ್ಥಿತಿ ಇದೆ. ನಾಲ್ಕು ತಿಂಗಳಲ್ಲಿ ಉಂಟಾದ ಬೇಡಿಕೆ ಹಿಂಜರಿಕೆ ಕೈಗಾರಿಕೋದ್ಯಮಿಗಳನ್ನು ಭಾಗಶಃ ಬೀದಿಗೆ ತಂದು ನಿಲ್ಲಿಸಿದೆ.

‘ಇ–ಮೇಲ್‌ ಅನ್ನು ಎಷ್ಟು ಬಾರಿ ರಿಫ್ರೆಶ್ ಮಾಡಿದರೂ ಕಂ‍ಪನಿಗಳಿಂದ ಬೇಡಿಕೆಯ ಪಟ್ಟಿ ಬರುತ್ತಲೇ ಇಲ್ಲ. ಉತ್ಪಾದನೆಯನ್ನು ಶೇ 80ರಷ್ಟು ಕಡಿಮೆ ಮಾಡಿದ್ದೇವೆ. ಕಾರ್ಖಾನೆಯ ಗೋದಾಮಿನಲ್ಲಿರುವ ಬಿಡಿ ಭಾಗಗಳ ರಾಶಿಯನ್ನು ನೋಡಿದರೆ ಕಣ್ಣುಗಳು ಒದ್ದೆಯಾಗುತ್ತವೆ’ ಎಂದು ಉದ್ಯಮಿ ರಮೇಶ್ ಹೇಳಿದರು.

ಊರು ಬಿಡಬೇಕು: ‘ಕಾರ್ಖಾನೆಗಳ ಬಾಗಿಲು ಮುಚ್ಚಲೇಬೇಕಾದ ಸ್ಥಿತಿ ಇದೆ. ಆದರೆ, ಮುಚ್ಚಲು ಆಗುವುದಿಲ್ಲ. ಕಾರ್ಮಿಕರು ನಮ್ಮನ್ನು ನಂಬಿದ್ದಾರೆ. ಬ್ಯಾಂಕ್‌ಗಳಲ್ಲಿ ಸಾಲ ಪಡೆದು ಯಂತ್ರೋಪಕರಣಗಳನ್ನು ಖರೀದಿಸಿದ್ದೇವೆ. ನಮ್ಮ ಕೆಟ್ಟಸ್ಥಿತಿ ಏನೇ ಇದ್ದರೂ ಸಾಲ ಮರುಪಾವತಿ ಮಾಡಲೇಬೇಕು. ಇಲ್ಲದಿದ್ದರೆ ಸುಸ್ತಿದಾರರ ಪಟ್ಟಿಗೆ ಸೇರಿಸಿ ಆಸ್ತಿ, ಮಾನ ಎರಡನ್ನೂ ಬ್ಯಾಂಕ್‌ನವರು ಹರಾಜು ಹಾಕುತ್ತಾರೆ. ಹಾಗೊಂದು ವೇಳೆ ಬಾಗಿಲು ಮುಚ್ಚಲೇಬೇಕಾದ ಸ್ಥಿತಿ ಬಂದರೆ ಊರು ಬಿಡಬೇಕು, ಇಲ್ಲವೇ ಜೀವ ಬಿಡಬೇಕು’ ಎಂದು ಆಟೊಮೊಬೈಲ್ ಬಿಡಿ ಭಾಗ ತಯಾರಿಸುವ ಕೈಗಾರಿಕೆ ನಡೆಸುತ್ತಿರುವ ಮನೋಜ್ ನೋವು ತೋಡಿಕೊಂಡರು.

‘ಕಳೆದ ತಿಂಗಳ ಸಂಬಳದಲ್ಲಿ ಅರ್ಧದಷ್ಟನ್ನು ಮಾತ್ರ ನೀಡಿದ್ದಾರೆ. ವಾರದಲ್ಲಿ ಎರಡು ದಿನ ರಜೆ ಕೊಡುತ್ತಿದ್ದಾರೆ. ಸಂಬಳವನ್ನು ಮುಂದಿನ ತಿಂಗಳೇ ಕೊಡಲಿ, ಆದರೆ, ನಾಳೆಯಿಂದ ಕೆಲಸಕ್ಕೆ ಬರಬೇಡ ಎಂಬ ಮಾತು ಮಾಲೀಕರ ಬಾಯಿಂದ ಬಾರದಿದ್ದರೆ ಸಾಕು’ ಎಂದು ಹೇಳಿದ ಕಾರ್ಮಿಕ ಮಂಜೇಗೌಡ ಕಣ್ಣೊರೆಸಿಕೊಂಡರು.

’ಕಾರ್ಮಿಕರನ್ನು ಹೊರ ಹಾಕಬಾರದು’

‘ಬಹುತೇಕ ಕಂಪನಿಗಳು ಮೂರು ಪಾಳಿಯಿಂದ ಒಂದು ಪಾಳಿಗೆ ಇಳಿಸಿದ್ದರೆ, ಕೆಲವರು ಅರ್ಧದಷ್ಟು ವೇತನ ಕೊಟ್ಟರೆ, ಇನ್ನೂ ಕೆಲವರು ರಜೆ ಕೊಟ್ಟು ಕಳುಹಿಸಿದ್ದಾರೆ’ ಎಂದು ಕಾರ್ಮಿಕ ಮುಖಂಡ ಮೀನಾಕ್ಷಿ ಸುಂದರಂ ಹೇಳಿದರು.

‘ಇದಲ್ಲದೇ ಆಟೊಮೊಬೈಲ್ ಕ್ಷೇತ್ರದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮಂದಿ ಹೊರ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದರು. ಅವರನ್ನು ಈಗ ಕೆಲಸಕ್ಕೆ ಕರೆಯುತ್ತಿಲ್ಲ’ ಎಂದು ಅವರು ‘‍ಪ್ರಜಾವಾಣಿ’ಗೆ ತಿಳಿಸಿದರು.

‘ಆರ್ಥಿಕ ಬಿಕ್ಕಟ್ಟು ಸರಿಪಡಿಸಲು ಸರ್ಕಾರ ಉದ್ಯಮಿಗಳಿಗೆ ನೆರವಾದರೆ ಪ್ರಯೋಜನ ಇಲ್ಲ. ತಯಾರಾಗಿರುವ ವಾಹನಗಳ ಮಾರಾಟ ಹೆಚ್ಚಿಸಲು ಏನು ಮಾಡಬೇಕು ಎಂಬುದರ ಬಗ್ಗೆ ಆಲೋಚಿಸಬೇಕು’ ಎಂದು ಅವರು ಅಭಿಪ್ರಾಯಪಟ್ಟರು.

‘ಬ್ಯಾಂಕ್‌ಗಳ ಕಾಟವಾದರೂ ತಪ್ಪಬೇಕು’

‘ಆರ್ಥಿಕ ಬಿಕ್ಕಟ್ಟಿದೆ ಎಂಬ ಕಾರಣಕ್ಕೆ ಸಾಲ ಕೊಟ್ಟಿರುವ ಬ್ಯಾಂಕ್‌ಗಳು ಸುಮ್ಮನೆ ಬಿಡುವುದಿಲ್ಲ. ಕಂತು ಕಟ್ಟುವುದನ್ನು ಮೂರು ತಿಂಗಳು ನಿಲ್ಲಿಸಿದರೆ ವಸೂಲಾಗದ ಸಾಲ ಎಂದು ಪರಿಗಣಿಸಿ ಸುಸ್ತಿದಾರರ ಪಟ್ಟಿಗೆ ಸೇರಿಸುತ್ತವೆ. ಅದನ್ನು ತಪ್ಪಿಸದಿದ್ದರೆ ಉದ್ಯಮಿಗಳು ಕಾರ್ಖಾನೆ ಗಳನ್ನು ಮುಚ್ಚದೆ ಬೇರೆ ದಾರಿ ಇಲ್ಲ’ ಎನ್ನುತ್ತಾರೆ ಸಣ್ಣ ಕೈಗಾರಿಕೆಗಳ ಸಂಘದ(ಕಾಸಿಯಾ) ಮಾಜಿ ಅಧ್ಯಕ್ಷ ಬಿ.ಪಿ. ಶಶಿಧರ್.

‘ಭಾರತೀಯ ರಿಸರ್ವ್ ಬ್ಯಾಂಕ್ ಅನುಮತಿ ಪಡೆದು ಸಾಲ ಮರುಪಾವತಿಗೆ ಒಂದು ವರ್ಷಗಳ ಕಾಲಾವಕಾಶವನ್ನಾದರೂ ನೀಡಬೇಕು’ ಎಂದು ಅವರು ಮನವಿ ಮಾಡಿದರು.

***

ಬೆಂಗಳೂರಿನಲ್ಲಿರುವ ವಾಹನ ತಯಾರಿಕಾ ಕಂಪನಿಗಳ ಘಟಕಗಳು :4

ವಾಹನಗಳ ಬಿಡಿ ಭಾಗ ತಯಾರಿಕಾ ಕಾರ್ಖಾನೆಗಳು :3,000

ವಹಿವಾಟು ಕುಸಿತದ ಪ್ರಮಾಣ :ಶೇ 50

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.