ಬೆಂಗಳೂರು: ‘ರಾಜ್ಯದ ಮೇರು ಕಲಾವಿದರು ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಗೆ ಕೇಂದ್ರ ಸರ್ಕಾರದಿಂದ ಪ್ರಶಸ್ತಿ, ಪುರಸ್ಕಾರಗಳು ಲಭ್ಯವಾಗುತ್ತಿಲ್ಲ. ಕರ್ನಾಟಕದ ಧ್ವನಿ ದೂರದ ದೆಹಲಿಯಲ್ಲಿ ಕ್ಷೀಣವಾಗಿದೆ’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ್ ಬೇಸರ ವ್ಯಕ್ತಪಡಿಸಿದರು.
ನಗರದಲ್ಲಿ ಶುಕ್ರವಾರ ಪರಿಷತ್ತು ಆಯೋಜಿಸಿದ ಕಾರ್ಯಕ್ರಮದಲ್ಲಿ ‘ಕೆ. ಮೋಹನ್‌ದೇವ್ ಆಳ್ವ ಹಾಗೂ ಡಾ.ಎಂ.ಕೆ. ಶೈಲಜಾ ಆಳ್ವ ದತ್ತಿ ಪ್ರಶಸ್ತಿ’ಯನ್ನು ಗಾಯಕರಾದ ಬಿ.ಕೆ. ಸುಮಿತ್ರಾ ಮತ್ತು ಪ್ರೊ.ಟಿ.ಎನ್. ಪದ್ಮಾ ಅವರಿಗೆ ಪ್ರದಾನ ಮಾಡಿದರು. ಈ ಪ್ರಶಸ್ತಿಗಳು ತಲಾ ₹ 30 ಸಾವಿರ ನಗದು ಒಳಗೊಂಡಿವೆ.
‘ನಾಡಿನ ಶ್ರೇಷ್ಠ ಸಂಗೀತಗಾರರಾದ ಪುಟ್ಟರಾಜ ಗವಾಯಿ, ಆರ್.ಕೆ. ಶ್ರೀಕಂಠನ್ ಅವರಿಗೆ ‘ಪದ್ಮಭೂಷಣ ಪ್ರಶಸ್ತಿ’ ನೀಡಬೇಕೆಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ನಾನು ಐದಾರು ಬಾರಿ ಶಿಫಾರಸು ಮಾಡಿದೆ. ಆಮೇಲೆ ಅವರಿಗೆ ಪ್ರಶಸ್ತಿ ದೊರಕಿತು. ತಮಿಳುನಾಡಿನವರಿಗೆ ಈ ಪ್ರಶಸ್ತಿಗಳಲ್ಲಿ ಸಿಂಹಪಾಲು ಸಲ್ಲುತ್ತಿವೆ. ಕರ್ನಾಟಕದವರ ಸಾಧನೆಗೆ, ಅರ್ಹತೆಗೆ ತಕ್ಕ ಮನ್ನಣೆ ಸಿಗಬೇಕಾಗಿದೆ. ದೆಹಲಿಯಲ್ಲಿ ನಮ್ಮ ರಾಜ್ಯದ ಸಾಹಿತಿ-ಕಲಾವಿದರ ಸಾಧನೆಯನ್ನು ಸೂಕ್ತವಾಗಿ ಮನವರಿಕೆ ಮಾಡಿಕೊಡಬೇಕಾಗಿದೆ’ ಎಂದರು.
ದತ್ತಿದಾನಿ ಕೆ. ಮೋಹನ್ ದೇವ ಆಳ್ವ ಮಾತನಾಡಿ, ‘ಶಾಸ್ತ್ರೀಯ ಸಂಗೀತಕ್ಕೆ ಜಾನಪದವೇ ಮೂಲಬೇರು. ಬಾಲ್ಯದಿಂದಲೇ ಸಂಗೀತದ ಜೊತೆಗೆ ಅವಿನಾಭಾವ ಸಂಬಂಧವನ್ನು ನಾನು ಹೊಂದಿದ್ದೆ. ಹಾಗಾಗಿ, ಸಂಗೀತಕ್ಕೆ ಸಂಬಂಧಿಸಿದ ದತ್ತಿನಿಧಿಗಳನ್ನು ಕನ್ನಡ ಸಾಹಿತ್ಯ ಪರಿಷತ್ತು, ಗಾಯನ ಸಮಾಜ ಸೇರಿದಂತೆ ವಿವಿಧೆಡೆ ಸ್ಥಾಪಿಸಿದ್ದೇನೆ.ಬಿ.ಕೆ. ಸುಮಿತ್ರಾ ಮತ್ತು ಟಿ.ಎನ್. ಪದ್ಮಾ ಅವರು ಇದುವರೆಗೂ ಯಾವ ಪ್ರಶಸ್ತಿಗಾಗಿಯು ಸರ್ಕಾರದ ಅಥವಾ ಸಾಂಸ್ಕೃತಿಕ ಸಂಸ್ಥೆಗಳ ಕದ ಬಡಿದಿಲ್ಲ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.