ADVERTISEMENT

ಅಯೋಧ್ಯೆ ವಿವಾದ: ತೀರ್ಪು ಏನೇ ಬಂದರೂ ಶಾಂತಿ ಕಾಪಾಡಿ

ನಿವೃತ್ತ ನ್ಯಾಯಮೂರ್ತಿಗಳು, ಸಾಹಿತಿಗಳಿಂದ ಮನವಿ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2019, 12:34 IST
Last Updated 5 ನವೆಂಬರ್ 2019, 12:34 IST
   

ಬೆಂಗಳೂರು: ‘ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿದ ತೀರ್ಪು ಯಾರ ಪರವೇ ಬಂದರೂ ಜನ ಭಾವೋದ್ವೇಗಕ್ಕೆ ಒಳಗಾಗದೆ ಶಾಂತಿ ಕಾಪಾಡಬೇಕು. ಸೌಹಾರ್ದ ಕಾಪಾಡುವ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಬೇಕು’ ಎಂದು ನಿವೃತ್ತ ನ್ಯಾಯಮೂರ್ತಿಗಳು ಮತ್ತು ಸಾಹಿತಿಗಳು ಮನವಿ ಮಾಡಿದರು.

ಈ ಕುರಿತು ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ, ‘ಈ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನ ಅಂತಿಮ ತೀರ್ಪನ್ನು ಸಮಚಿತ್ತದಿಂದ ಸ್ವೀಕರಿಸಬೇಕು. ಯಾವುದೇ ಜಾತಿ ಮತ್ತು ಧರ್ಮಕ್ಕೆ ನಮ್ಮ ಬೆಂಬಲ ಇಲ್ಲ. ದೇಶದ ಹಿತ, ಪ್ರಗತಿಯ ಉದ್ದೇಶದಿಂದ ಶಾಂತಿ ಮತ್ತು ಸಾಮರಸ್ಯ ಮುಖ್ಯ’ ಎಂದರು.

‘ಈ ಸಂದೇಶವನ್ನು ರಾಜ್ಯದೆಲ್ಲೆಡೆ ಮನೆ–ಮನೆಗೆ ತಲುಪಿಸಲುಸೌಹಾರ್ದ ಸಮಿತಿ ರಚಿಸಲಾಗಿದೆ. ಅಲ್ಲಲ್ಲಿ ಕಾರ್ಯಕ್ರಮಗಳನ್ನು ರೂಪಿಸಿ ಜನರಿಗೆ ತಿಳುವಳಿಕೆ ನೀಡುವ ಪ್ರಯತ್ನ ನಡೆಸಲಾಗುವುದು. ಧಾರ್ಮಿಕ ಮುಖಂಡರನ್ನು ಭೇಟಿ ಮಾಡಿ ಅವರ ಮೂಲಕವೇ ಜನರಲ್ಲಿ ತಿಳಿವಳಿಕೆ ಮೂಡಿಸುತ್ತೇವೆ’ ಎಂದು ಹೇಳಿದರು.

ADVERTISEMENT

ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಮಹ್ಮದ್ ಅನ್ವರ್, ‘ಶಾಂತಿ ಮತ್ತು ಸೌಹಾರ್ದದಿಂದ ಮಾತ್ರ ದೇಶವನ್ನು ಮುಂದೆ ಕೊಂಡೊಯ್ಯಲು ಸಾಧ್ಯ. ತೀರ್ಪಿನ ನಂತರ ಯಾರೊಬ್ಬರೂ ಗಲಭೆ, ಘರ್ಷಣೆಗೆ ಇಳಿಯಬಾರದು’ ಎಂದು ಮನವಿ ಮಾಡಿದರು.

ಸಾಹಿತಿ ಕೆ. ಮರುಳಸಿದ್ದಪ್ಪ, ‘ಇಂತಹ ಸಂದರ್ಭವನ್ನು ಬಳಸಿಕೊಂಡು ದೇಶದಲ್ಲಿ ದ್ವೇಷ ಹುಟ್ಟು ಹಾಕುವ ಪ್ರಯತ್ನವನ್ನು ಸಮಾಜಘಾತಕ ಶಕ್ತಿಗಳು ಮಾಡುವ ಸಾಧ್ಯತೆ ಇದೆ. ಮಾಧ್ಯಮಗಳು ಸೌಹಾರ್ದದ ಪರವಾಗಿ ಕೆಲಸ ಮಾಡಬೇಕು. ಪ್ರಚೋದನೆಗೆ ಅವಕಾಶ ನೀಡಬಾರದು’ ಎಂದು ಕೋರಿದರು.

ಸಾಹಿತಿ ಬರಗೂರು ರಾಮಚಂದ್ರಪ್ಪ, ‘ತೀರ್ಪು ಯಾರದೇ ಪರ ಬಂದರೂ, ಕಾನೂನಿನನ್ವಯ ನಡೆದುಕೊಳ್ಳಬೇಕು. ಹಲ್ಲೆ, ಹತ್ಯೆ ಮತ್ತು ಆತ್ಮಹತ್ಯೆ ರಾಜಕಾರಣ ಮುಂದುವರಿಸಲು ಯಾರೂ ಅವಕಾಶ ಕೊಡಬಾರದು. ಶಾಂತಿ ಮತ್ತು ಸೌಹಾರ್ದಕ್ಕಾಗಿ ಮಾಧ್ಯಮಗಳು ಅಭಿಯಾನ ಆರಂಭಿಸಬೇಕು’ ಎಂದರು.

ಕವಯಿತ್ರಿ ಕೆ.ಶರೀಫಾ, ‘ಸಮಾಜದ ಸ್ವಾಸ್ಥ್ಯ ಕಾಪಾಡುವಂತಹ ತೀರ್ಪು ಬರಲಿ ಎಂದು ಆಶಿಸುತ್ತೇವೆ. ಮುಸ್ಲಿಂ ಸಮಾಜ ಈಗಾಗಲೇ ಅಭದ್ರತೆ ಎದುರಿಸುತ್ತಿದೆ. ಭಯದ ವಾತಾವರಣ ನಿವಾರಿಸುವಲ್ಲಿ ಮಾಧ್ಯಮಗಳ ಪಾತ್ರ ದೊಡ್ಡದು’ ಎಂದು ಹೇಳಿದರು.

ರಂಗಕರ್ಮಿ ಪ್ರಸನ್ನ, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.