ಬೆಂಗಳೂರು: ರಾಜ್ಯದಲ್ಲಿ ‘ಆಯುಷ್ಮಾನ್ ಭಾರತ ಪ್ರಧಾನಮಂತ್ರಿ ಜನಾರೋಗ್ಯ ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ ಯೋಜನೆ’ಯಡಿ ಈವರೆಗೆ 77 ಲಕ್ಷ ಮಂದಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಯೋಜನೆಯಡಿ ಎಲ್ಲ ಅರ್ಹ ಫಲಾನುಭವಿಗಳು ಚಿಕಿತ್ಸೆ ಪಡೆಯುವಂತಾಗಲು ಎಲ್ಲ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಕಿಯೋಸ್ಕ್‌ಗಳನ್ನು ಸ್ಥಾಪಿಸುವ ಬಗ್ಗೆ ಇಲಾಖೆ ಆಯುಕ್ತ ಡಿ. ರಂದೀಪ್ ಸುತ್ತೋಲೆ ಹೊರಡಿಸಿದ್ದಾರೆ.
ಸೌಲಭ್ಯ ವಂಚಿತ ದರ್ಬಲ ಕುಟಂಬಗಳಿಗೂ ಯೋಜನೆಯಡಿ ವೈದ್ಯಕೀಯ ಸೇವೆ ಸಿಗುವಂತಾಗಬೇಕು. ಆದ್ದರಿಂದ ಪ್ರತಿ ಜಿಲ್ಲಾಸ್ಪತ್ರೆ, ಸಾರ್ವಜನಿಕ ಮತ್ತು ತಾಲ್ಲೂಕು ಆಸ್ಪತ್ರೆ, ವೈದ್ಯಕೀಯ ಮಹಾವಿದ್ಯಾಲಯದ ಆಸ್ಪತ್ರೆಗಳಲ್ಲಿ ಯೋಜನೆಯ ಕಿಯೋಸ್ಕ್ ಸ್ಥಾಪಿಸುವಂತೆ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ ಆದೇಶಿಸಿದೆ. ಆಸ್ಪತ್ರೆಗಳ ಹೊರರೋಗಿಗಳ ವಿಭಾಗದಲ್ಲಿ ಕಿಯೋಸ್ಕ್‌ಗಳನ್ನು ಸ್ಥಾಪಿಸಬೇಕಿದೆ. ಅದಕ್ಕೆ ವಿದ್ಯುತ್ ಹಾಗೂ ಅಂತರ್ಜಾಲ ಸಂಪರ್ಕ ಇರಬೇಕು ಎಂದು ಹೇಳಿದ್ದಾರೆ.
ಕಿಯೋಸ್ಕ್ ಮೂಲಕ ಯೋಜನೆಯ ಬಗ್ಗೆ ಮಾಹಿತಿ ಒದಗಿಸಬೇಕು. ಕಿಯೋಸ್ಕ್ ಸ್ಥಾಪನೆಗೆ ಅಗತ್ಯವಿರುವ ವೆಚ್ಚವನ್ನು ಯೋಜನೆಯಡಿ ಮರುಪಾವತಿಯಾದ ಚಿಕಿತ್ಸಾ ನಿಧಿಯಿಂದ ಭರಿಸಬೇಕು. ಎಲ್ಲ ಆಸ್ಪತ್ರೆಗಳಲ್ಲೂ ಮಾ.15ರೊಳಗೆ ಕಿಯೋಸ್ಕ್‌ಗಳು ಕಾರ್ಯಾರಂಭ ಮಾಡಬೇಕು ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.