ಬೆಂಗಳೂರು: ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ (ಎಬಿಎಆರ್‌ಕೆ) ಯೋಜನೆಯಡಿ ಸಾವಿರಾರು ಆಸ್ಪತ್ರೆಗಳು ನೋಂದಾಯಿಸಿಕೊಂಡು, ಸೇವೆ ನೀಡುತ್ತಿವೆ. ಆದರೆ, ಆಸ್ಪತ್ರೆಗಳ ಜಾಲ ಗುರುತಿಸಲು ರಾಜ್ಯ ಸರ್ಕಾರ ಸೂಕ್ತ ವ್ಯವಸ್ಥೆ ರೂಪಿಸಿಲ್ಲ. ಹೀಗಾಗಿ, ತುರ್ತು ಸಂದರ್ಭದಲ್ಲಿ ರೋಗಿಗಳು ಹಾಗೂ ಅವರ ಕಡೆಯವರು ಪರದಾಟ ನಡೆಸುವ ಸ್ಥಿತಿ ಇದೆ.
ವಿವಿಧ ಖಾಸಗಿ ವಿಮಾ ಕಂಪನಿಗಳು ನೋಂದಾಯಿತ ಆಸ್ಪತ್ರೆಗಳನ್ನು ಗುರುತಿಸಲು ಮೊಬೈಲ್ ಆ್ಯಪ್ ಹಾಗೂ ಜಾಲತಾಣಗಳನ್ನು ಅಭಿವೃದ್ಧಿಪಡಿಸಿವೆ. ಇದರಿಂದಾಗಿ ತುರ್ತು ಸಂದರ್ಭದಲ್ಲಿ ಸುಲಭವಾಗಿ ಹತ್ತಿರದ ನೋಂದಾಯಿತ ಆಸ್ಪತ್ರೆ ಗುರುತಿಸಲು ಸಾಧ್ಯ. ರಾಜ್ಯ ಸರ್ಕಾರವು ಈ ರೀತಿಯ ವ್ಯವಸ್ಥೆಯನ್ನು ರೂಪಿಸಿಲ್ಲ. ಇದರಿಂದಾಗಿ ಫಲಾನುಭವಿಗಳು ಯೋಜನೆಯಡಿ ಕಾರ್ಡ್ ಹೊಂದಿದ್ದರೂ ಹತ್ತಿರದ ಆಸ್ಪತ್ರೆ ಗುರುತಿಸುವುದು ಸವಾಲಾಗಿ ಪರಿಣಮಿಸಿದ್ದು, ತುರ್ತು ಸಂದರ್ಭದಲ್ಲಿ ಯೋಜನೆಯಡಿ ಸೇವೆ ಪಡೆಯಲು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಬೇಕಾಗಿದೆ.
ಯೋಜನೆ ಪ್ರಾರಂಭವಾದಾಗ ‘ಆರೋಗ್ಯ ಕರ್ನಾಟಕ’ ಜಾಲತಾಣದಲ್ಲಿ ನೋಂದಾಯಿತ ಆಸ್ಪತ್ರೆಗಳ ಪಟ್ಟಿಯನ್ನು ಅಳವಡಿಸಲಾಗಿತ್ತು. ಯೋಜನೆ ನಿರ್ವಹಿಸುತ್ತಿರುವ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಜಾಲತಾಣದಲ್ಲಿಯೂ ಆಸ್ಪತ್ರೆಗಳ ಪಟ್ಟಿಯನ್ನು ಹಾಕಿ, ಹುಡುಕುವ ಅವಕಾಶ ನೀಡಲಾಗಿತ್ತು. ಈಗ ಈ ಎರಡೂ ಜಾಲತಾಣಗಳು ಕಾರ್ಯನಿರ್ವಹಿಸುತ್ತಿಲ್ಲ. ಕೇಂದ್ರ ಸರ್ಕಾರದ ಪಿಎಂಜೆಎವೈ (ಪ್ರಧಾನ್ ಮಂತ್ರಿ ಜನ್ ಆರೋಗ್ಯ ಯೋಜನಾ) ಜಾಲತಾಣ ಹಾಗೂ ಆ್ಯಪ್ ಮೂಲಕ ಯೋಜನೆಯಡಿಯ ಆಸ್ಪತ್ರೆಗಳನ್ನು ಹುಡುಕಬೇಕಾಗಿದೆ. ಆ್ಯಪ್ ಕಾರ್ಯವಿಧಾನದ ಬಗ್ಗೆ ಬಳಕೆದಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತುರ್ತು ಸಂದರ್ಭದಲ್ಲಿ ಅವಕಾಶ: ‘ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ’ ಯೋಜನೆ 2018ರಲ್ಲಿ ಆರಂಭವಾಗಿದ್ದು, ಯೋಜನೆಯಡಿ ಬಿಪಿಎಲ್ ಕುಟುಂಬದವರಿಗೆ ವರ್ಷಕ್ಕೆ ₹ 5 ಲಕ್ಷದವರೆಗೆ ಆರೋಗ್ಯ ವಿಮೆಗೆ ಅವಕಾಶವಿದೆ. ರಾಜ್ಯದಲ್ಲಿ 62.09 ಲಕ್ಷ ಕುಟುಂಬಗಳು ‘ಆಯುಷ್ಮಾನ್ ಭಾರತ್’ ಯೋಜನೆ ಅಡಿ ಬರಲಿವೆ. ಉಳಿದ ಕುಟುಂಬಗಳನ್ನು ‘ಆರೋಗ್ಯ ಕರ್ನಾಟಕ’ ಯೋಜನೆಯಡಿ ಸೇರ್ಪಡೆ ಮಾಡಲಾಗಿದೆ. ಎಪಿಎಲ್ ಕುಟುಂಬದ ಸದಸ್ಯರಿಗೆ ಗರಿಷ್ಠ ₹ 1.50 ಲಕ್ಷ ಚಿಕಿತ್ಸಾ ವೆಚ್ಚ ನಿಗದಿ ಮಾಡಿದ್ದು, ಶೇ 30ರಷ್ಟು ಹಣವನ್ನು ಪಾವತಿಸಲಾಗುತ್ತದೆ.
ಈ ಯೋಜನೆಯ ಲಾಭ ಪಡೆಯಲು ಫಲಾನುಭವಿಗಳು ಮೊದಲು ಸರ್ಕಾರಿ ಆಸ್ಪತ್ರೆಗಳಿಗೆ ತೆರಳಬೇಕು. ಅಲ್ಲಿ ಸೇವೆ ಇಲ್ಲದಿದ್ದಲ್ಲಿ ಶಿಫಾರಸು ಆಧಾರದಲ್ಲಿ ಸೂಚಿಸಿದ ಖಾಸಗಿ ಆಸ್ಪತ್ರೆಗೆ ಹೋಗಿ, ಚಿಕಿತ್ಸೆ ಪಡೆದುಕೊಳ್ಳಬೇಕು. ತುರ್ತು ಸಂದರ್ಭದಲ್ಲಿ ನೇರವಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗುವ ಅವಕಾಶವಿದ್ದರೂ ಆಸ್ಪತ್ರೆ ಗುರುತಿಸುವಿಕೆ ಸಮಸ್ಯೆಯಿಂದ ಕೆಲವರಿಗೆ ಯೋಜನೆಯ ಸೌಲಭ್ಯ ದೊರೆಯುತ್ತಿಲ್ಲ.
‘ಯೋಜನೆಯಡಿ ನೋಂದಾಯಿಸಲ್ಪಟ್ಟ ಸಮೀಪದ ಆಸ್ಪತ್ರೆ ಗುರುತಿಸುವ ವ್ಯವಸ್ಥೆಯನ್ನು ಸರ್ಕಾರ ರೂಪಿಸಬೇಕು. ಆಗ ತುರ್ತು ಸಂದರ್ಭದಲ್ಲಿ ಯೋಜನೆ ನೆರವಾಗಲಿದೆ. ತಂತ್ರಜ್ಞಾನ ಮುಂದುವರಿದಿದ್ದು, ಕೆಲ ವಿಮೆ ಕಂಪನಿಗಳು ಜಿಪಿಎಸ್ ತಂತ್ರಜ್ಞಾನದ ನೆರವಿನಿಂದ ಸುಲಭವಾಗಿ ಹತ್ತಿರದ ಆಸ್ಪತ್ರೆ ಗುರುತಿಸುವ ವ್ಯವಸ್ಥೆ ರೂಪಿಸಿವೆ. ಆದರೆ, ಈ ಬಗ್ಗೆ ಗಮನಹರಿಸದೆ, ಕಾರ್ಡ್ ವಿತರಣೆಯಂತಹ ಕ್ರಮಕ್ಕೆ ಆದ್ಯತೆ ನೀಡಲಾಗುತ್ತಿದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಇಲಾಖೆಯ ನಿವೃತ್ತ ಅಧಿಕಾರಿಯೊಬ್ಬರು ತಿಳಿಸಿದರು.
ಇಲಾಖೆ ಸಚಿವ ದಿನೇಶ ಗುಂಡೂರಾವ್ ದೂರವಾಣಿ ಸಂಪರ್ಕಕ್ಕೆ ಲಭ್ಯರಾಗಿಲ್ಲ.
ಹೃದಯಾಘಾತ, ರಸ್ತೆ ಅಪಘಾತದಂತಹ ಪ್ರಕರಣಗಳಲ್ಲಿ ತುರ್ತು ಚಿಕಿತ್ಸೆ ಅಗತ್ಯ. ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ ಯೋಜನೆಯಡಿ 3 ಸಾವಿರಕ್ಕೂ ಅಧಿಕ ಆಸ್ಪತ್ರೆಗಳು ನೋಂದಾಯಿಸಲ್ಪಟ್ಟಿವೆ. ಆದರೆ, ಬಹುತೇಕವು ಸರ್ಕಾರಿ ಆಸ್ಪತ್ರೆಗಳೇ ಆಗಿವೆ. ಚಿಕಿತ್ಸೆಯ ಪ್ಯಾಕೇಜ್ ದರ ಪರಿಷ್ಕರಿಸದ ಕಾರಣಕ್ಕೆ ಖಾಸಗಿ ಆಸ್ಪತ್ರೆಗಳು ನಿರಾಸಕ್ತಿ ತಾಳಿವೆ. ಇದರಿಂದಾಗಿ ತುರ್ತು ಸಂದರ್ಭದಲ್ಲಿ ಯೋಜನೆಯಡಿ ಚಿಕಿತ್ಸೆ ಪಡೆಯಲು ಖಾಸಗಿ ಆಸ್ಪತ್ರೆಗಳ ಆಯ್ಕೆ ಇಲ್ಲವಾಗಿದೆ.
ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ ರಾಜ್ಯದಲ್ಲಿ ಪ್ರತಿ ವರ್ಷ ಸುಮಾರು 96 ಸಾವಿರ ಮಂದಿ ಹಠಾತ್ ಹೃದಯಾಘಾತದಿಂದ ಮೃತಪಡುತ್ತಿದ್ದಾರೆ. ರಸ್ತೆ ಅಪಘಾತದ ಗಾಯಗಳೂ ರಾಜ್ಯದಲ್ಲಿ ಹೆಚ್ಚಾಗುತ್ತಿದೆ. ರಾಜ್ಯ ಅಪರಾಧ ದಾಖಲೆಗಳ ಬ್ಯೂರೊ ಮಾಹಿತಿ ಪ್ರಕಾರ ರಸ್ತೆ ಅಪಘಾತದಿಂದ ವಾರ್ಷಿಕ ಸರಾಸರಿ 13 ಸಾವಿರ ಮರಣ ಪ್ರಕರಣಗಳು ವರದಿಯಾಗುತ್ತವೆ. 4 ಲಕ್ಷ ಗಂಭೀರ ಗಾಯ ಪ್ರಕರಣಗಳು ದಾಖಲಾಗುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.