ADVERTISEMENT

ಆಜಾನ್‌ಗೆ ಪ್ರತಿಯಾಗಿ ಭಜನೆ- ಶ್ರೀರಾಮಸೇನೆ ಪ್ರತಿಭಟನೆ: ಕಾರ್ಯಕರ್ತರು ವಶಕ್ಕೆ

​ಪ್ರಜಾವಾಣಿ ವಾರ್ತೆ
Published 9 ಮೇ 2022, 23:30 IST
Last Updated 9 ಮೇ 2022, 23:30 IST
   

ಬೆಂಗಳೂರು: ಮಸೀದಿಗಳಲ್ಲಿ ಆಜಾನ್‌ ಬಳಸುವುದಕ್ಕೆ ಪ್ರತಿಯಾಗಿ ಪ್ರತಿಭಟನಾ ಕ್ರಮವಾಗಿ ಸೋಮವಾರ ಶ್ರೀರಾಮಸೇನೆಯ ಕಾರ್ಯಕರ್ತರು ರಾಜ್ಯದ ವಿವಿಧೆಡೆ ದೇವಸ್ಥಾನಗಳಲ್ಲಿ ಧ್ವನಿವರ್ಧಕವನ್ನು ಬಳಸಿ ಹನುಮಾನ್‌ ಚಾಲೀಸಾ, ಭಜನೆ ಪ್ರಸಾರ ಮಾಡಿದರು.

ಪ್ರತಿಭಟನೆ ಹಿನ್ನೆಲೆಯಲ್ಲಿ ವಿವಿಧ ಜಿಲ್ಲೆಗಳಲ್ಲಿ ಮಸೀದಿಗಳ ಬಳಿ ಮುಂಜಾಗರೂಕತಾ ಕ್ರಮವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಹನುಮಾನ್‌ ಚಾಲೀಸಾ, ಭಜನೆ ಪ್ರಸಾರ ಮಾಡುವ ಕಾರ್ಯಕ್ರಮ ಬಹುತೇಕ ಶಾಂತಿಯುತವಾಗಿತ್ತು

ಬೆಂಗಳೂರು ನಗರ, ಕಲಬುರಗಿಯಲ್ಲಿ ಭಜನೆ ಮಾಡಲು ಮುಂದಾಗಿದ್ದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು. ರಾಜಧಾನಿಯಲ್ಲಿ ಕಾರ್ಯಕರ್ತರು ಒಂದು ಹಂತದಲ್ಲಿ ಪೊಲೀಸರೊಂದಿಗೆ ವಾಗ್ವಾದ, ನೂಕಾಟ ನಡೆಸಿದರು. ಇದರಿಂದ ಕೆಲ ಕಾಲ ಗೊಂದಲದ ಸ್ಥಿತಿ ಉಂಟಾಗಿತ್ತು.

ADVERTISEMENT

ಕಲಬುರಗಿಯಲ್ಲಿ ಆಜಾನ್‌ಗೆ ಶ್ರೀರಾಮಸೇನೆ ಸಂಘಟನೆಯವರು ಅಡ್ಡಿ ಮಾಡದಿರಲಿ ಎಂದು ಸೂಪರ್ ಮಾರ್ಕೆಟ್ ಬಳಿಯಿರುವ ಮಸೀದಿಗೆ ದಲಿತ ಸೇನೆ ಕಾರ್ಯಕರ್ತರು ಕಾವಲು ಇದ್ದು, ಗಮನ ಸೆಳೆದರು. ಇಲ್ಲಿ ಪೊಲೀಸರೂ ಸಾಕಷ್ಟು ಸಂಖ್ಯೆಯಲ್ಲಿ ಜಮಾಯಿಸಿದ್ದರು.‌

ದೇವಸ್ಥಾನಗಳಲ್ಲಿ ಭಜನೆ, ಹನುಮಾನ್ ಚಾಲೀಸಾ ಪಠಿಸುವಂತೆ ಶ್ರೀರಾಮಸೇನೆ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಸಂಘಟನೆಯ ಕಾರ್ಯಕರ್ತರು ಈ ಪ್ರತಿಭಟನೆಯನ್ನು ನಡೆಸಿದರು.

ಆಜಾನ್‌ ವಿರೋಧಿಸಿ ಮಂಡ್ಯ ಜಿಲ್ಲೆ ಮದ್ದೂರಿನಲ್ಲಿ ಸುಪ್ರಭಾತ, ಭಜನೆ ನಡೆಸುವುದಾಗಿ ಹೇಳಿದ್ದ ಶ್ರೀರಾಮಸೇನೆ ಮುಖಂಡ ಪ್ರಮೋದ್‌ ಮುತಾಲಿಕ್‌, ಕೊನೇ ಕ್ಷಣದಲ್ಲಿ ಸ್ಥಳ ಬದಲಾಯಿಸಿ, ಮೈಸೂರಿನ ಶಿವರಾಂಪೇಟೆಯ ಆಂಜನೇಯ ಸ್ವಾಮಿ ದೇಗುಲದಲ್ಲಿ ಸೋಮವಾರ ನಸುಕಿನ 5 ಗಂಟೆಗೆ ಸುಪ್ರಭಾತ, ಓಂಕಾರ ಮೊಳಗಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು,‘ಮೈಸೂರಿನಲ್ಲಿ ಇಂದು ಆಂದೋಲನ ಆರಂಭವಾಗಿದೆ. ರಾಜ್ಯ ಸರ್ಕಾರ ಹಾಗೂ ಮುಸ್ಲಿಂ ಸಮುದಾಯಕ್ಕೆ ಈ ಮೂಲಕ ಎಚ್ಚರಿಕೆ ನೀಡುವಲ್ಲಿ ನೂರರಷ್ಟು ಯಶಸ್ವಿಯಾಗಿದ್ದೇವೆ’ ಎಂದು ಸುದ್ದಿಗಾರರಿಗೆ ತಿಳಿಸಿದರು.

ಮಂಡ್ಯ, ಚಾಮರಾಜನಗರ, ಕೊಡಗಿ ನಲ್ಲಿ ಈ ಪ್ರತಿಭಟನೆ ನಡೆಯಲಿಲ್ಲ. ಉಳಿದಂತೆ ಕಲಬುರಗಿ, ಮಂಗಳೂರು, ಚಿಕ್ಕಮಗಳೂರು, ತುಮಕೂರು, ಬೆಳಗಾವಿ, ಧಾರವಾಡ, ವಿಜಯಪುರ ಸೇರಿ ಬಹುತೇಕ ಜಿಲ್ಲೆಗಳಲ್ಲಿ ದೇಗುಲಗಳಲ್ಲಿ ಹನುಮಾನ್ ಚಾಲೀಸಾ, ಭಜನೆ ಮೊಳಗಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.