ADVERTISEMENT

ಬಿ.ಎಲ್ ಸಂತೋಷ್‌ ರಾಷ್ಟ್ರೀಯ ನಾಯಕರಂತೆ ಮಾತಾಡಲಿ: ಡಿ.ಕೆ. ಶಿವಕುಮಾರ್‌

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2023, 16:12 IST
Last Updated 1 ಸೆಪ್ಟೆಂಬರ್ 2023, 16:12 IST
ಡಿ.ಕೆ ಶಿವಕುಮಾರ್‌
ಡಿ.ಕೆ ಶಿವಕುಮಾರ್‌   

ಬೆಂಗಳೂರು: ‘ಬಿ.ಎಲ್. ಸಂತೋಷ್‌ ರಾಷ್ಟ್ರೀಯ ನಾಯಕರು ಎಂದು ಭಾವಿಸಿದ್ದೇವೆ. ಅವರು ಕೆ.ಎಸ್‌. ಈಶ್ವರಪ್ಪ, ಸಿ.ಟಿ. ರವಿ ಅವರಂತೆ ಮಾತಾಡಿದರೆ ನಾವು ಏನು ಮಾಡುವುದು’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಕೇಳಿದರು.

‘ಕಾಂಗ್ರೆಸ್‌ನ 40–45 ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ’ ಎಂಬ ಸಂತೋಷ್‌ ಹೇಳಿಕೆ ಕುರಿತು ಸುದ್ದಿಗಾರರಿಗೆ ಶುಕ್ರವಾರ ಪ್ರತಿಕ್ರಿಯಿಸಿದ ಅವರು, ‘ಅವರು ನಮ್ಮ 136 ಶಾಸಕರ ಜತೆಗೂ ಸಂಪರ್ಕ ಇರಿಸಿಕೊಳ್ಳಲಿ. ತಪ್ಪೇನಿದೆ’ ಎಂದು ಪ್ರಶ್ನಿಸಿದರು.

‘ಸಂತೋಷ್‌ ದೇಶ ಆಳುತ್ತಿರುವ ಪಕ್ಷದ ನಾಯಕರು. ಅವರ ಮಾತಿಗೆ ತೂಕವಿರುತ್ತದೆ. ಈ ರೀತಿ ಘನತೆಗೆ ಧಕ್ಕೆಯಾಗುವಂತೆ ಮಾತನಾಡಬಾರದು’ ಎಂದರು.

ADVERTISEMENT

‘ಕಾಂಗ್ರೆಸ್‌ ಶಾಸಕರು ಅವರ ಸಂಪರ್ಕದಲ್ಲಿರುವ ಮಾಹಿತಿ ನನಗಿಲ್ಲ. ಹಿಂದೆ ಒಮ್ಮೆ ನಮ್ಮ ಸರ್ಕಾರದ ವಿರುದ್ಧ ಷಡ್ಯಂತ್ರ ರೂಪಿಸಲು ಸಭೆ ನಡೆದಿತ್ತು. ಈಗ ತಣ್ಣಗಾಗಿದೆ. ಹೆಚ್ಚಿನ ಮಾಹಿತಿ ಬೇಕಿದ್ದರೆ ಶಾಸಕರನ್ನೇ ಕೇಳಿ’ ಎಂದು ಹೇಳಿದರು.

‘ಒಂದು ದೇಶ–ಒಂದು ಚುನಾವಣೆ’ ಕುರಿತು ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಶಿವಕುಮಾರ್‌, ‘ಈ ವಿಷಯದ ಬಗ್ಗೆ ದೀರ್ಘ ಕಾಲದಿಂದ ಚರ್ಚೆ ನಡೆಯುತ್ತಿದೆ. ಹಲವು ರಾಜ್ಯಗಳಲ್ಲಿ ಬೇರೆ ಬೇರೆ ಸಮಯದಲ್ಲಿ ಚುನಾವಣೆ ನಡೆಯುತ್ತಿದೆ. ಈ ಕುರಿತು ನಮ್ಮ ರಾಷ್ಟ್ರೀಯ ನಾಯಕರು ಪ್ರತಿಕ್ರಿಯಿಸುತ್ತಾರೆ’ ಎಂದರು.

ಎಚ್ಚರಿಕೆ ಗಂಟೆ: ಪ್ರಜ್ವಲ್‌ ರೇವಣ್ಣ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿರುವ ಬಗ್ಗೆ ಕೇಳಿದಾಗ, ‘ಎಲ್ಲ ಶಾಸಕರು, ಸಂಸದರಿಗೆ ಇದು ಎಚ್ಚರಿಕೆ ಗಂಟೆ. ಜನಪ್ರತಿನಿಧಿಗಳು ಜಾಗರೂಕರಾಗಿ ಇರಬೇಕು. ತೀರ್ಪು ಏನಿದೆ ತಿಳಿದ ಬಳಿಕ ಪ್ರತಿಕ್ರಿಯಿಸುತ್ತೇನೆ’ ಎಂದು ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.