ಬೆಂಗಳೂರು: ಬೆಳೆ ಪರಿಹಾರ ಸಿಕ್ಕಿಲ್ಲ, ನೆರೆ ಹಾವಳಿಗೆ ತುತ್ತಾದ ಮನೆಗಳಿಗೆ ಇನ್ನೂ ಪಂಚಾಂಗ ಹಾಕಿಲ್ಲ ಮೊದಲಾದ ಆರೋಪಗಳು ಕೇಳುತ್ತಿವೆ. ಆಡಳಿತ ಸಡಿಲಗೊಂಡಿದ್ದರ ಸಂಕೇತ ಇದು, ಇನ್ನು ಮುಂದೆ ಇಂತಹ ಆರೋಪಗಳು ಕೇಳಿ ಬರಕೂಡದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಧಿಕಾರಿಗಳನ್ನು ಎಚ್ಚರಿಸಿದರು.
ವಿಧಾನಸೌಧದಲ್ಲಿ ಶುಕ್ರವಾರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿಗಳ ಸಭೆಯಲ್ಲಿ ಮಾತನಾಡಿದ ಅವರು, ತಾಲ್ಲೂಕು, ಜಿಲ್ಲಾ ಮಟ್ಟದಲ್ಲಿ ಅಧಿಕಾರಿಗಳು ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ, ಇದರಿಂದಾಗಿಯೇ ಇಂತಹ ಆರೋಪಗಳು ಕೇಳುವಂತಾಗಿದೆ ಎಂದರು.
ಇನ್ನು ಎರಡು, ಮೂರು ದಿನಗಳಲ್ಲಿ ಜಿಲ್ಲಾಧಿಕಾರಿಗಳೊಂದಿಗೆಸಭೆ ನಡೆಸಿ ಆಡಳಿತಕ್ಕೆ ಚುರುಕು ಮುಟ್ಟಿಸಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ಸಭೆಯಲ್ಲಿ ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಡಾ. ಸಿ.ಎನ್. ಅಶ್ವತ್ಥನಾರಾಯಣ ಸೇರಿದಂತೆ ಹಲವು ಸಚಿವರು, ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್ ಪಾಲ್ಗೊಂಡಿದ್ದರು.
ಸಭೆಗೆ ಶ್ರೀರಾಮುಲು ಗೈರು
ಅಧಿಕಾರಿಗಳ ಸಭೆಯಲ್ಲಿ ಆರೋಗ್ಯ ಸಚಿವ ಬಿ.ಶ್ರೀರಾಮುಲು ಗೈರಾಗಿರುವುದು ಎದ್ದು ಕಾಣಿಸಿತು. ಡಿಸಿಎಂ ಹುದ್ದೆ ಕೈತಪ್ಪುವ ಆತಂಕದಲ್ಲಿರುವ ಅವರು ಕಳೆದ ಮೂರು ದಿನಗಳಿಂದ ಯಾವ ಪ್ರಮುಖ ಸಭೆ, ಸಮಾರಂಭಗಳಿಗೆ ಬರುತ್ತಿಲ್ಲ, ಆ ಮೂಲಕ ತಮ್ಮ ಸಂದೇಶ ರವಾನಿಸುವ ಪ್ರಯತ್ನ ನಡೆಸಿದ್ದಾರೆ ಎಂದು ಹೇಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.