ADVERTISEMENT

ಒಂದು ವರ್ಷ ಕಾಲಹರಣ ಮಾಡಿದ್ದೇ ಸಿದ್ದರಾಮಯ್ಯ ಸರ್ಕಾರದ ಸಾಧನೆ: ಬಿ.ವೈ.ವಿಜಯೇಂದ್ರ

​ಪ್ರಜಾವಾಣಿ ವಾರ್ತೆ
Published 20 ಮೇ 2024, 9:43 IST
Last Updated 20 ಮೇ 2024, 9:43 IST
<div class="paragraphs"><p>ಬಿ.ವೈ.ವಿಜಯೇಂದ್ರ</p></div>

ಬಿ.ವೈ.ವಿಜಯೇಂದ್ರ

   

ಬೆಂಗಳೂರು: ‘ಗ್ಯಾರಂಟಿ ಹೆಸರಿನಲ್ಲಿ ತೆರಿಗೆದಾರರ ಹಣವನ್ನು ಲೂಟಿ ಮಾಡಿದ್ದು, ಯಾವುದೇ ಅಭಿವೃದ್ಧಿ ಕೆಲಸ ಮಾಡದೇ ಒಂದು ವರ್ಷ ಕಾಲಹರಣ ಮಾಡಿದ್ದೇ ಸಿದ್ದರಾಮಯ್ಯ ಸರ್ಕಾರದ ಒಂದು ವರ್ಷದ ಸಾಧನೆ. ಮಹಿಳೆಯರಿಗೆ ಸುರಕ್ಷತೆ ಭಾವನೇ ಇಲ್ಲದಿರುವುದು ನಿರಂತರ ಹೆಣ್ಣು ಮಕ್ಕಳ ಕೊಲೆ ನಡೆಯುತ್ತಿದೆ. ಇದೂ ಒಂದು ಸಾಧನೆಯೇ’ ಎಂದು ಬಿಜೆಪಿ ಪ್ರಶ್ನಿಸಿದೆ.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಅವರು ಜಂಟಿ ಸುದ್ದಿಗೋಷ್ಠಿಯಲ್ಲಿ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ‘ಶೂನ್ಯ ಸಾಧನೆಯ, ಹೆಣ್ಣು ಮಕ್ಕಳ ಕೊಲೆಯನ್ನು ತಡೆಯಲು ವಿಫಲರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು ತೊಲಗಬೇಕು’ ಎಂದು ಹೇಳಿದರು.

ADVERTISEMENT

‘ಆರ್ಥಿಕವಾಗಿ ಸಮೃದ್ಧವಾಗಿದ್ದ ರಾಜ್ಯವನ್ನು ಗ್ಯಾರಂಟಿ ಹೆಸರಿನಲ್ಲಿ ದಿವಾಳಿ ಅಂಚಿಗೆ ತಂದು ನಿಲ್ಲಿಸಿದ್ದಾರೆ. ಮುಂದಿನ ಬಜೆಟ್‌ನಲ್ಲಿ ₹2 ಲಕ್ಷ ಕೋಟಿಗೂ ಅಧಿಕ ಸಾಲವನ್ನು ಎತ್ತಲು ಸಿದ್ಧರಾಗಿದ್ದಾರೆ. ಅಭಿವೃದ್ಧಿ ಕೆಲಸಕ್ಕೆ ಒಂದು ಪೈಸೆ ಬಿಡುಗಡೆ ಮಾಡದಿರುವ ಕಾರಣ ಕಾಂಗ್ರೆಸ್ ಶಾಸಕರೇ ಬಂಡಾಯ ಎದ್ದು ಸರ್ಕಾರವನ್ನು ಪತನಗೊಳಿಸುತ್ತಾರೆ. ಅದಕ್ಕೆ ದಿನಗಣನೆ ಆರಂಭವಾಗಿದೆ’ ಎಂದೂ ಹೇಳಿದರು.

ಬಿ.ವೈ.ವಿಜಯೇಂದ್ರ ಮಾತನಾಡಿ, ‘ಕಳೆದ ಒಂದು ವರ್ಷದಲ್ಲಿ ಒಂದೇ ಒಂದು ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಿಲ್ಲ, ಗುದ್ದಲಿ ಪೂಜೆಯ ಉದಾಹರಣೆ ಇಲ್ಲ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.

‘ಗ್ಯಾರಂಟಿಯೇ ಅಭಿವೃದ್ಧಿಯೇ ಎಂದು ಬಿಂಬಿಸಲಾಗುತ್ತಿದೆ. ಬರಗಾಲದ ವಿಚಾರದಲ್ಲಿ ಸರ್ಕಾರದ ನಡವಳಿಕೆ ಅಕ್ಷಮ್ಯ ಅಪರಾಧ. ಕೇಂದ್ರ ಸರ್ಕಾರದಿಂದ ಅನುದಾನ ಬಂದಿಲ್ಲ ಎಂದು ಹೋರಾಟ ಮಾಡಿದರು. ಆದರೆ, ಚುನಾಯಿತ ಸರ್ಕಾರದ ಜವಾಬ್ದಾರಿ, ಮುಖ್ಯಮಂತ್ರಿಗಳ ಹೊಣೆ ನಿಭಾಯಿಸುತ್ತಿದ್ದಾರೆ ಎಂದು ರೈತರಿಗೆ ಯಾವತ್ತೂ ಅನಿಸಿಲ್ಲ’ ಎಂದು ಬಿ.ವೈ.ವಿಜಯೇಂದ್ರ ಅವರು ಆಕ್ಷೇಪ ವ್ಯಕ್ತಪಡಿಸಿದರು.

‘ರಾಜ್ಯದಲ್ಲಿ 692ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ, ರಾಜ್ಯ ಸರ್ಕಾರವು ಕೃಷಿ ಸಾಲ, ಬೆಳೆ ನಷ್ಟಕ್ಕೆ ಪರಿಹಾರ ಕೊಡುವ ನಿಟ್ಟಿನಲ್ಲಿ ಗಂಭೀರವಾದ ಅಥವಾ ಜವಾಬ್ದಾರಿಯುತ ಸರ್ಕಾರ ನಡೆದುಕೊಳ್ಳದೇ ಇರುವುದು ದುರದೃಷ್ಟಕರ’ ಎಂದರು.

‘ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳ ಮಾತನ್ನು ಕೇಳಿದರೆ, ಗ್ಯಾರಂಟಿಯೇ ಈ ರಾಜ್ಯದ ಅಭಿವೃದ್ಧಿ ಎಂದು ಬಿಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ. ಕಳೆದ ಒಂದು ವರ್ಷದಲ್ಲಿ ಗ್ಯಾರಂಟಿಗೆ ಪ್ರಚಾರ ಕೊಟ್ಟು, ಅದರ ಮೂಲಕ ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ಆಗಿದೆ ಎಂದು ಬಿಂಬಿಸುವ ಪ್ರಯತ್ನವನ್ನು ರಾಜ್ಯ ಸರಕಾರ ಮಾಡುತ್ತಿದೆ’ ಎಂದು ಟೀಕಿಸಿದರು.

‘ಕೇಂದ್ರ ಸರಕಾರದ ಜೊತೆ ಸಂಘರ್ಷದ ಹಾದಿಯನ್ನು ತೆಗೆದುಕೊಂಡಿರುವುದೇ ಈ ಸರಕಾರದ ಸಾಧನೆ ಎಂದು ವಿಜಯೇಂದ್ರ ಅವರು ಟೀಕಿಸಿದರು. ಮಾನ್ಯ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು, ರಾಜ್ಯ ಸರಕಾರವು ಕೇಂದ್ರ ಸರಕಾರದ ವಿರುದ್ಧ ಟೀಕೆ ಮಾಡುವುದು, ಗೂಬೆ ಕೂರಿಸುವುದನ್ನು, ಎಲ್ಲ ವಿಚಾರದಲ್ಲೂ ತನ್ನ ಜವಾಬ್ದಾರಿಯಿಂದ ನುಣುಚಿಕೊಂಡು ಕೇಂದ್ರ ಸರಕಾರದತ್ತ ಬೆಟ್ಟು ಮಾಡುವುದನ್ನು ಯಶಸ್ವಿಯಾಗಿ ಮಾಡುತ್ತ ಬಂದಿದೆ’ ಎಂದು ಆಕ್ಷೇಪಿಸಿದರು.

‘ರಾಜ್ಯದ್ದು ಕೊಲೆಗಡುಕರ ಸರಕಾರ’

‘ಕರ್ನಾಟಕ ಎಂದರೆ ಕೊಲೆಗಡುಕರ ಸರಕಾರ ಎಂದು ದೇಶದೆಲ್ಲೆಡೆ ಮಾತ್ರವಲ್ಲದೆ ಅಂತರರಾಷ್ಟ್ರೀಯ ಮಟ್ಟದಲ್ಲೂ ಮಾತು ಕೇಳುತ್ತಿದೆ. ಹುಬ್ಬಳ್ಳಿ ಕಾಲೇಜು ಕ್ಯಾಂಪಸ್ಸಿನ ನೇಹಾ ಹತ್ಯೆ ಪ್ರಕರಣ, ಮನೆಗೆ ನುಗ್ಗಿ ಅಂಜಲಿ ಹತ್ಯೆ, ಕೊಡಗಿನಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯ ರುಂಡ ಕತ್ತರಿಸಿ ಹತ್ಯೆ, ಕೊಡಗಿನಲ್ಲಿ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತನನ್ನು ಕಾರು ಹರಿಸಿ ಹತ್ಯೆ ಮಾಡಿದ್ದಾರೆ. ಗುಲ್ಬರ್ಗದಲ್ಲಿ ಈ ಸರಕಾರ ಬಂದ ಬಳಿಕ ನಿರಂತರವಾಗಿ ಬಿಜೆಪಿ ಕಾರ್ಯಕರ್ತರ ಮೇಲೆ ಆಗುತ್ತಿರುವ ದಬ್ಬಾಳಿಕೆ, ದೌರ್ಜನ್ಯ ಹೆಚ್ಚಾಗಿದೆ. 3-4 ತಿಂಗಳಿನಿಂದ 450ಕ್ಕೂ ಹೆಚ್ಚು ಕೊಲೆ ಪ್ರಕರಣಗಳು ನಡೆದಿವೆ. ಇದರಿಂದ ರಾಜ್ಯವೇ ದೇಶದ ಮುಂದೆ ತಲೆ ತಗ್ಗಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ನುಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.