ADVERTISEMENT

ಕೆಎಎಸ್ ಪೂರ್ವಭಾವಿ ಪರೀಕ್ಷೆ ದಿನಾಂಕ ಮುಂದೂಡಲು ವಿಜಯೇಂದ್ರ ಆಗ್ರಹ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಆಗಸ್ಟ್ 2024, 17:54 IST
Last Updated 22 ಆಗಸ್ಟ್ 2024, 17:54 IST
<div class="paragraphs"><p>ಬಿ.ವೈ. ವಿಜಯೇಂದ್ರ</p></div>

ಬಿ.ವೈ. ವಿಜಯೇಂದ್ರ

   

ಬೆಂಗಳೂರು: ‘2023-24ರ ಕೆಎಎಸ್ ಪೂರ್ವಭಾವಿ ಪರೀಕ್ಷೆ ನಡೆಸಲು ತರಾತುರಿಯಲ್ಲಿ ದಿನಾಂಕ ಪ್ರಕಟಿಸಿರುವ ಕೆಪಿಎಸ್‌ಸಿ ನಡೆ ಹಲವಾರು ಅನುಮಾನಗಳನ್ನು ಹುಟ್ಟು ಹಾಕಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ಈ ಕುರಿತಂತೆ ನೊಂದ ಮಹಿಳಾ ಅಭ್ಯರ್ಥಿಯೊಬ್ಬರ ವಿಡಿಯೊವನ್ನು ಎಕ್ಸ್‌ನಲ್ಲಿ ಹಂಚಿಕೊಂಡಿರುವ ಅವರು, ಸರ್ಕಾರ ಮತ್ತು ಕರ್ನಾಟಕ ಲೋಕಸೇವಾ ಆಯೋಗವನ್ನು ತರಾಟೆಗೆ ತೆಗೆದುಕೊಂಡರು.

ADVERTISEMENT

‘ಕರ್ನಾಟಕ ಸರ್ಕಾರವಾಗಲಿ, ಕರ್ನಾಟಕ ಲೋಕಸೇವಾ ಆಯೋಗವಾಗಲಿ ತಾವೊಂದು ನೇಮಕಾತಿ ಅಥವಾ ಪರೀಕ್ಷೆ ನಡೆಸಬೇಕಾದರೆ ವಿದ್ಯಾರ್ಥಿ ಸ್ನೇಹಿ ನಿರ್ಧಾರಗಳನ್ನು ಕೈಗೊಳ್ಳುವುದು ಸಹಜ ನ್ಯಾಯದ ಪ್ರತೀಕ. ಹೀಗೆ ತರಾತುರಿಯಲ್ಲಿ ದಿನಾಂಕ ಪ್ರಕಟಿಸಿರುವುದು ಸರಿಯಲ್ಲ’ ಎಂದರು.

‘ಹೊರ ಜಿಲ್ಲೆಗಳಿಂದ ಪರೀಕ್ಷೆಗೆ ಹಾಜರಾಗುವ ಗ್ರಾಮೀಣ ಅಭ್ಯರ್ಥಿಗಳು ಹಾಗೂ ಈಗಾಗಲೇ ಖಾಸಗಿ ಉದ್ಯೋಗ ವಲಯಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಸಾವಿರಾರು ಆಕಾಂಕ್ಷಿಗಳು ಪರೀಕ್ಷೆಯನ್ನು ಮುಂದಕ್ಕೆ ಹಾಕಿ, ಮತ್ತೊಂದು ವಾರಾಂತ್ಯದ ರಜಾ ದಿನಾಂಕ ನಿಗದಿ ಮಾಡಬೇಕೆಂದು ಮನವಿ ನೀಡಿದ್ದರೂ ಹಠಕ್ಕೆ ಬಿದ್ದಿರುವ ಕೆಪಿಎಸ್‌ಸಿ ಪರೀಕ್ಷೆ ಮಾಡಿಯೇ ಸಿದ್ದ ಎಂಬಂತೆ ವರ್ತಿಸುತ್ತಿರುವುದು ಕಠೋರತನದ ನಡೆಯಾಗಿದೆ’ ಎಂದು ಕಿಡಿಕಾರಿದರು.

‘2017-18ರ ನಂತರ ಈಗಷ್ಟೇ ಪರೀಕ್ಷೆ ನಿಗದಿಯಾಗಿದ್ದು ಕನಿಷ್ಠ 60 ದಿನಗಳಾದರೂ ಕಾಲಾವಕಾಶ ನೀಡದಿರುವ ನಿರ್ಧಾರ ಸರ್ಕಾರದ ಮೇಲೆ ಅನುಮಾನ ಹೆಚ್ಚಿಸಿದೆ’ ಎಂದು ಹೇಳಿದರು.

‘ಸರ್ಕಾರ ಹಾಗೂ ಕೆಪಿಎಸ್‌ಸಿ ಅಧಿಕಾರಿಗಳು ನಿರ್ಧಾರ ಬದಲಿಸಿ ಪರಿಕ್ಷಾರ್ಥಿ ಉದ್ಯೋಗಾಕಾಂಕ್ಷಿಗಳಿಗೆ ಅನಾನುಕೂಲವಾಗದಂತೆ ಪರೀಕ್ಷೆ ನಡೆಸಬೇಕಿದೆ’ ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.