ನವದೆಹಲಿ: ಬಿಜೆಪಿ ಕರ್ನಾಟಕ ರಾಜ್ಯ ಘಟಕದ ಎಲ್ಲ ಘಟಕಗಳ ಪುನರ್ ರಚನೆ ಸಂಬಂಧ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಜತೆಗೆ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಶುಕ್ರವಾರ ಸಮಾಲೋಚನೆ ನಡೆಸಿದರು.
ಈ ಹಿಂದಿನ ಅವಧಿಯಲ್ಲಿ ಬಿಜೆಪಿ ಯಾವುದೇ ಘಟಕಗಳು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಿರಲಿಲ್ಲ. ಸಕ್ರಿಯವಾಗಿ ಕಾರ್ಯ ನಿರ್ವಹಿಸುವವರು ಮತ್ತು ಕ್ರಿಯಾಶೀಲರಿಗೆ ಹೆಚ್ಚಿನ ಆದ್ಯತೆ ನೀಡಲು ಘಟಕಗಳ ಪುನರ್ ರಚನೆಗೆ ನಿರ್ಧರಿಸಲಾಗಿದೆ. ಈ ಕುರಿತು ಅರುಣ್ ಸಿಂಗ್ ಜತೆಗೆ ಚರ್ಚಿಸುವಂತೆ ವಿಜಯೇಂದ್ರ ಅವರಿಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೂಚಿಸಿದ್ದರು.
‘ಪಕ್ಷದ ಹಿರಿಯ ನಾಯಕರೊಂದಿಗೆ ಸಮಾಲೋಚಿಸಿ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಈ ಪಟ್ಟಿಯನ್ನು ಅರುಣ್ ಸಿಂಗ್ ಅವರಿಗೆ ನೀಡಲಾಗಿದೆ. ಅವರು ವರಿಷ್ಠರೊಂದಿಗೆ ಸಮಾಲೋಚನೆ ನಡೆಸುವರು. ಮಧ್ಯ ಪ್ರದೇಶ, ರಾಜಸ್ಥಾನ, ಛತ್ತೀಸಗಢ ರಾಜ್ಯಗಳಿಗೆ ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆ ಮುಗಿದ ಬಳಿಕ ವರಿಷ್ಠರು ಚರ್ಚಿಸಿ ಪಟ್ಟಿಗೆ ಅಂತಿಮ ರೂಪ ನೀಡಲಿದ್ದಾರೆ’ ಎಂದು ವಿಜಯೇಂದ್ರ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.