ನವದೆಹಲಿ: ಚಿಕ್ಕಮಗಳೂರು ಜಿಲ್ಲೆಯಲ್ಲಿನ ವಿವಾದಾತ್ಮಕ ಗುರು ದತ್ತಾತ್ರೇಯ ಬಾಬಾ ಬುಡನ್‌ಗಿರಿ ಸ್ವಾಮಿ ದರ್ಗಾದ ಷಾ ಖಾದ್ರಿ ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿಗೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡುವಂತೆ ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.
ಜುಲೈ 22ರೊಳಗೆ ಈ ಕುರಿತು ಪ್ರತಿಕ್ರಿಯಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಪೀಠ ಸೋಮವಾರ ನಿರ್ದೇಶನ ನೀಡಿದೆ.
‘ಧಾರ್ಮಿಕ ಆಚರಣೆಗಳಲ್ಲಿನ ತಮ್ಮ ಪಾತ್ರ ಸೀಮಿತಗೊಳಿಸಲಾಗಿದ್ದು, ಆಡಳಿತ ನಿರ್ವಹಣೆಯ ಹೊಣೆಕಿತ್ತುಕೊಳ್ಳಲಾಗಿದೆ. ಆಡಳಿತವನ್ನು ಹಿಂದೂ ಧಾರ್ಮಿಕ ದತ್ತಿ ಇಲಾಖೆಗೆ ವಹಿಸಿರುವುದು ನ್ಯಾಯಾಂಗ ನಿಂದನೆ’ ಎಂದು ದೂರಿ ದರ್ಗಾದ ‘ಸಜ್ಜಾದ ನಶೀನ್’ ಆಗಿರುವ (ಸೂಫಿ ಸಂತರ ಉತ್ತರಾಧಿಕಾರಿ) ಸಯ್ಯದ್ ಗೌಸ್ ಮೊಹಿಯುದ್ದೀನ್ ಷಾ ಖಾದ್ರಿ ಅರ್ಜಿ ಸಲ್ಲಿಸಿದ್ದರು.
ಸಜ್ಜಾದ ನಶೀನ್ ಅವರು ಕರ್ತವ್ಯ ಲೋಪ ಎಸಗಿ, ಕ್ಷೇತ್ರದ ಆದಾಯದ ದುರ್ಬಳಕೆ ಮಾಡಿಕೊಂಡಿದ್ದು ಕಂಡುಬಂದಲ್ಲಿ ಅಥವಾ ಆಡಳಿತ ನಿರ್ವಹಿಸಲು ವಿಫಲವಾದಲ್ಲಿ ಆಡಳಿತವನ್ನು ಹಿಂದೂ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ನೀಡಬೇಕು ಎಂಬ ಷರತ್ತು ವಿಧಿಸಿರುವ ಕುರಿತೂ ಪ್ರತಿಕ್ರಿಯಿಸಬೇಕು ಎಂದು ನ್ಯಾಯಪೀಠ, ಸರ್ಕಾರದ ಪರ ವಕೀಲ ಬಸವಪ್ರಭು ಪಾಟೀಲ ಅವರಿಗೆ ಸೂಚಿಸಿತು. ಹಿಂದೆಯೂ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಪೀಠ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತಿತರರಿಗೆ ನೋಟಿಸ್ ಜಾರಿ ಮಾಡಿತ್ತು.
ವಿವಾದ ಬಗೆಹರಿಸುವಲ್ಲಿ ವಿಳಂಬವಾಗಿದೆ ಎಂದು ತಿಳಿಸಿ ಮುಖ್ಯ ಕಾರ್ಯದರ್ಶಿ ಕ್ಷಮೆ ಯಾಚಿಸಿದ್ದರಿಂದ ಪ್ರಕರಣ ಕೈಬಿಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.