ಬೆಂಗಳೂರು:ಚಿಕ್ಕಮಗಳೂರು ಜಿಲ್ಲೆಯ ಶ್ರೀಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದಲ್ಲಿ ಡಿಸೆಂಬರ್6 ರಿಂದ ಮೂರು ದಿನಗಳ ಕಾಲ ದತ್ತಾತ್ರೇಯ ಜಯಂತಿ ಆಚರಿಸಲು ಹೈಕೋರ್ಟ್ ಹಸಿರು ನಿಶಾನೆ ತೋರಿದೆ.
ಪ್ರಕರಣಕ್ಕೆ ಸಂಬಂಧಿಸಿದ ಮೇಲ್ಮನವಿಯನ್ನು ನ್ಯಾಯಮೂರ್ತಿ ಅಲೋಕ್ ಆರಾಧೆ ಹಾಗೂ ಎಸ್.ವಿಶ್ವಜಿತ್ ಶೆಟ್ಟಿ ಅವರಿದ್ದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ಅಡ್ವೋಕೇಟ್ ಜನರಲ್ ಪ್ರಭು ಲಿಂಗ ಕೆ. ನಾವದಗಿ ಹಾಜರಾಗಿ, ‘ಡಿಸೆಂಬರ್ 6, 7 ಮತ್ತು 8 ರಂದು ದತ್ತಾತ್ರೇಯ ಜಯಂತಿಆಚರಣೆಗೆ ಸಿದ್ಧತೆ ನಡೆಸಲಾಗಿದೆ. ವ್ಯವಸ್ಥಾಪನಾ ಸಮಿತಿ ಮತ್ತು ಭಕ್ತರಿಂದ ದತ್ತಪೀಠದ ದತ್ತ ಪಾದುಕೆಗಳಿಗೆ ಪೂಜೆ ನಡೆಸಲಾಗುವುದು‘ ಎಂದರು.
‘ಈಗಾಗಲೇ ಇಸ್ಲಾಂ ಮತ್ತು ಹಿಂದೂ ಧಾರ್ಮಿಕ ಸಂಪ್ರದಾಯದಂತೆ ದತ್ತಪೀಠದಲ್ಲಿ ಪೂಜಾ ವಿಧಿ ವಿಧಾನ ನೆರವೇರಿಸಲು ಸಮಿತಿಯಿಂದ ಅರ್ಚಕ ಹಾಗೂ ಮುಜಾವರ್ ನೇಮಕ ಮಾಡ ಲಾಗಿದೆ. ಪ್ರತಿದಿನ ಇಸ್ಲಾಂ ಮತ್ತು ಹಿಂದೂ ಸಮುದಾಯದವರು ದತ್ತ ಪಾದುಕೆಗಳಿಗೆ ಪೂಜೆ ಸಲ್ಲಿಸುತ್ತಿದ್ದಾರೆ. ಆದ್ದರಿಂದ, ಜಯಂತಿ ಆಚರಣೆಗೆ ಅನುಮತಿ ನೀಡಬೇಕು‘ ಎಂದು ಕೋರಿದರು.ಇದನ್ನು ದಾಖಲಿಸಿಕೊಂಡ ನ್ಯಾಯಪೀಠ, ದತ್ತಾತ್ರೇಯ ಜಯಂತಿ ಆಚರಣೆಗೆ ಅನುಮತಿ ನೀಡಿ ವಿಚಾರಣೆ ಯನ್ನು 2023ರ ಜನವರಿ 12ಕ್ಕೆ ಮುಂದೂಡಿದೆ.
ಪ್ರಕರಣವೇನು?: ಶ್ರೀಗುರು ದತ್ತಾತ್ರೇಯ ಬಾಬಾಬುಡನ್ ದರ್ಗಾದಲ್ಲಿ ಪೂಜಾ ಕೈಂಕರ್ಯ ನೆರವೇರಿಸಲು ಮೌಲ್ವಿ ಸೈಯದ್ ಗೌಸ್ ಮೊಹಿಯುದ್ದೀನ್ ಅವರನ್ನು 2018ರಲ್ಲಿ ಅಂದಿನ ರಾಜ್ಯ ಸರ್ಕಾರ ನೇಮಕ ಮಾಡಿತ್ತು. ಈ ಆದೇಶವನ್ನು ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ ರದ್ದುಪಡಿಸಿತ್ತು.ಇದನ್ನು ಪ್ರಶ್ನಿಸಿ ಮೊಹಿಯುದ್ದೀನ್ ಮೇಲ್ಮನವಿ ಸಲ್ಲಿಸಿದ್ದಾರೆ.
ಈ ಮೇಲ್ಮನವಿ 2022ರ ಆಗಸ್ಟ್ 22ರಂದು ವಿಚಾರಣೆಗೆ ಬಂದಾಗ ಸರ್ಕಾ ರವು, ‘ಈ ಕ್ಷೇತ್ರದಲ್ಲಿ ಇಸ್ಲಾಂ ಮತ್ತು ಹಿಂದೂ ಸಂಪ್ರದಾಯಗಳ ಅನುಸಾರ ಪೂಜಾ ವಿಧಿ ವಿಧಾನ ನೆರವೇರಿಸುವುದಕ್ಕೆ ಅವಕಾಶ ಕಲ್ಪಿಸಲು 2022ರ ಜುಲೈ 1ರಂದು ಸಚಿವ ಸಂಪುಟ ನಿರ್ಣಯ ಕೈಗೊಂಡಿದೆ. ಮುಜಾವರ್ ಮತ್ತು ಅರ್ಚಕರನ್ನು ನೇಮಿಸಲು 2022ರ ಜುಲೈ 19ರಂದು ಆದೇಶಿಸಲಾಗಿದೆ. ಅಂತೆಯೇ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರ ನೇಮಕಾತಿಗೆ ಅರ್ಜಿ ಆಹ್ವಾನಿಸಿ ಆಗಸ್ಟ್ 7ರಂದು ಅಧಿಸೂಚನೆ ಹೊರಡಿಸಲಾಗಿದೆ’ ಎಂದು ಮಾಹಿತಿ ನೀಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.