ಬೆಂಗಳೂರು: ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಹಿಂಬಾಕಿ (ಬ್ಯಾಗ್‌ಲಾಗ್) ಹುದ್ದೆಗಳನ್ನು ತಿಂಗಳ ಒಳಗಾಗಿ ಭರ್ತಿ ಮಾಡುವಂತೆ ನೇಮಕಾತಿ ಪ್ರಾಧಿಕಾರಗಳಿಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್) ಸೂಚಿಸಿದೆ.
ಈ ಹುದ್ದೆಗಳನ್ನು ಭರ್ತಿ ಮಾಡದೆ, ಮೀಸಲಾತಿ ನಿಯಮ ಉಲ್ಲಂಘಿಸಿರುವ ಅನುದಾನಿತ ಶಿಕ್ಷಣ ಸಂಸ್ಥೆಗಳು ಮತ್ತು ಸಹಕಾರ ಸಂಸ್ಥೆಗಳಿಗೆ ಅನುದಾನ ತಡೆಹಿಡಿಯಲು ಉನ್ನತ ಶಿಕ್ಷಣ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಹಾಗೂ ಸಹಕಾರ ಇಲಾಖೆಗಳು ಕ್ರಮ ತೆಗೆದುಕೊಳ್ಳಬೇಕು ಎಂದೂ ಸುತ್ತೋಲೆಯಲ್ಲಿ ಡಿಪಿಎಆರ್ ತಿಳಿಸಿದೆ.
ಬ್ಯಾಕ್‌ಲಾಗ್ ಹುದ್ದೆಗಳ ಬಗ್ಗೆ ನಿಖರ ಮಾಹಿತಿಯನ್ನು ಸಂಬಂಧಪಟ್ಟ ಇಲಾಖೆಗಳ ಮುಖ್ಯಸ್ಥರು ದೃಢೀಕರಿಸಿ ಸಮಾಜ ಕಲ್ಯಾಣ ಇಲಾಖೆಗೆ ಸಲ್ಲಿಸಬೇಕು. ಈವರೆಗೂ ರೋಸ್ಟರ್ ಮತ್ತು ಖಾಲಿ ಹುದ್ದೆ ರಿಜಿಸ್ಟರ್ ಸಲ್ಲಿಸದ ಇಲಾಖೆಗಳು ತಕ್ಷಣ ಅದನ್ನು ಸಲ್ಲಿಸಬೇಕು. ಈ ಹುದ್ದೆಗಳ ನೇಮಕಾತಿ ಅಧಿಸೂಚನೆಯ ಜಾಹೀರಾತನ್ನು ರಾಜ್ಯಮಟ್ಟದ ಎರಡು ಪತ್ರಿಕೆಗಳಲ್ಲಿ ನೀಡಬೇಕು ಎಂದೂ ಡಿಪಿಎಆರ್ ಸೂಚಿಸಿದೆ.
ಬ್ಯಾಗ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡದಿದ್ದರೆ ಅಥವಾ ನಿಯಮ ಉಲ್ಲಂಘಿಸಿ ನೇಮಕಾತಿ ಮಾಡಿದರೆ ಅಂಥ ಅಧಿಕಾರಿಗೆ ₹ 1,000 ದಂಡ ಮತ್ತು ಆರು ತಿಂಗಳು ಜೈಲು ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.