ADVERTISEMENT

ಎಸ್‌ಸಿ, ಎಸ್‌ಟಿ ಪಂಗಡದವರಿಗೆಂದೇ ಮೀಸಲಾಗಿರುವ 2,503 ಹುದ್ದೆ ಖಾಲಿ

ಭರ್ತಿ ಮಾಡಲು ಸಚಿವ ಪ್ರಿಯಾಂಕ್‌ ಅಧ್ಯಕ್ಷತೆಯಲ್ಲಿ ಸಂಪುಟ ಉಪ ಸಮಿತಿ

ರಾಜೇಶ್ ರೈ ಚಟ್ಲ
Published 8 ಅಕ್ಟೋಬರ್ 2018, 3:32 IST
Last Updated 8 ಅಕ್ಟೋಬರ್ 2018, 3:32 IST
ಪ್ರಿಯಾಂಕ್‌ ಖರ್ಗೆ
ಪ್ರಿಯಾಂಕ್‌ ಖರ್ಗೆ   

ಬೆಂಗಳೂರು: ಬಡ್ತಿ ಮೀಸಲು ಪ್ರಕರಣ ಸು‍ಪ್ರೀಂ ಕೋರ್ಟ್‌ ಅಂಗಳದಲ್ಲಿರುವ ಮಧ್ಯೆಯೇ, ವಿವಿಧ ಇಲಾಖೆಗಳು, ನಿಗಮ–ಮಂಡಳಿಗಳು, ವಿಶ್ವವಿದ್ಯಾಲಯಗಳು, ಸಹಕಾರ ಸಂಸ್ಥೆಗಳು ಮತ್ತು ಅನುದಾನಿತ ಸಂಸ್ಥೆಗಳಲ್ಲಿರುವ ಪರಿಶಿಷ್ಟ ಸಮುದಾಯಗಳ ಹಿಂಬಾಕಿ (ಬ್ಯಾಕ್‌ ಲಾಗ್‌) ಹುದ್ದೆಗಳನ್ನು ಭರ್ತಿ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ.

ವಿವಿಧ ಇಲಾಖೆಗಳಲ್ಲಿ 19,115 ಬ್ಯಾಕ್‌ ಲಾಗ್‌ ಹುದ್ದೆಗಳನ್ನು ಗುರುತಿಸಲಾಗಿದೆ. ಈ ಪೈಕಿ 2,668 ಹುದ್ದೆಗಳು ಖಾಲಿ ಇವೆ. ಆದರೆ, ರೋಗಗ್ರಸ್ತ, ಆರ್ಥಿಕ ಸಂಕಷ್ಟ, ಮತ್ತು ಮುಚ್ಚಿದ ಕಾರಣಕ್ಕೆ ಕೆಲವು ಸಂಸ್ಥೆಗಳ 165 ಹುದ್ದೆಗಳಿಗೆ ಭರ್ತಿಯಿಂದ ವಿನಾಯಿತಿ ನೀಡಿರುವುದರಿಂದ 2,503 ಹುದ್ದೆಗಳು ತುಂಬಲು ಬಾಕಿ ಇವೆ ಎಂದು ಸಮಾಜ ಕಲ್ಯಾಣ ಇಲಾಖೆ ಪಟ್ಟಿ ಮಾಡಿದೆ.

ಬ್ಯಾಕ್‌ ಲಾಗ್‌ ಹುದ್ದೆಗಳನ್ನು ಭರ್ತಿ ಮಾಡುವ ‘ಉಸ್ತುವಾರಿ‘ಗಾಗಿ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್‌ ಖರ್ಗೆ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಉಪ ಸಮಿತಿ ರಚಿಸಲಾಗಿದೆ. ಸಚಿವರಾದ ಜಿ.ಟಿ. ದೇವೇಗೌಡ, ರಮೇಶ ಜಾರಕಿಹೊಳಿ, ಎನ್‌. ಮಹೇಶ್ ಮತ್ತು ಸಿ. ಪುಟ್ಟರಂಗಶೆಟ್ಟಿ ಈ ಸಮಿತಿಯ ಸದಸ್ಯರು.

ADVERTISEMENT

ಪರಿಶಿಷ್ಟ ಜಾತಿ (ಎಸ್‌.ಸಿ), ಪರಿಶಿಷ್ಟ ಪಂಗಡಕ್ಕೆಂದೇ (ಎಸ್‌.ಟಿ) ಮೀಸಲಿರಿಸಿದ ಹುದ್ದೆಗಳನ್ನು ಬ್ಯಾಕ್‌ ಲಾಗ್‌ ಹುದ್ದೆಗಳು ಎಂದು ಪರಿಗಣಿಸಲಾಗುತ್ತದೆ. ನೇರ ನೇಮಕಾತಿಯಲ್ಲಿ ಎಸ್‌.ಸಿಗೆ ಶೇ 18 ಮತ್ತು ಎಸ್‌.ಟಿಗೆ ಶೇ 3 ಹುದ್ದೆ ಮೀಸಲಿಡಲಾಗಿದೆ. ಈ ಹುದ್ದೆಗಳಿಗೆ ಎಸ್‌.ಸಿ, ಎಸ್‌.ಟಿ ಅಲ್ಲದವರನ್ನು ಭರ್ತಿ ಮಾಡಲು ಅವಕಾಶವಿಲ್ಲ. ‘ಕರ್ನಾಟಕ ಅನುಸೂಚಿತ ಜಾತಿಗಳ ಮತ್ತು ಅನುಸೂಚಿತ ಪಂಗಡಗಳ ಮತ್ತು ಇತರ ಹಿಂದುಳಿದ ವರ್ಗಗಳ ನೇಮಕಾತಿ ಮುಂತಾದವುಗಳ ಮೀಸಲಾತಿ ಕಾಯ್ದೆ–1990’ರಲ್ಲಿಈ ಬಗ್ಗೆ ಸ್ಪಷ್ಟಪಡಿಸಲಾಗಿದೆ.

ರಾಜ್ಯ ಸರ್ಕಾರದ ‘ಬಡ್ತಿ ಮೀಸಲು ಕಾಯ್ದೆ–2002’ ಅನ್ನು ಸುಪ್ರೀಂ ಕೋರ್ಟ್‌ ರದ್ದುಪಡಿಸಿದ ಪರಿಣಾಮ, ಹಿಂಬಡ್ತಿ ಭೀತಿ ಎದುರಿಸುತ್ತಿರುವ ಎಸ್‌.ಸಿ, ಎಸ್‌.ಟಿ ನೌಕರರ ಹಿತ ಕಾಪಾಡಲು ರಾಜ್ಯ ಸರ್ಕಾರ ತಂದಿರುವ ಕಾಯ್ದೆ ಅನುಷ್ಠಾನಕ್ಕೆ ಪಟ್ಟು ಹಿಡಿದಿರುವ ಸಚಿವ ಪ್ರಿಯಾಂಕ್‌ ಖರ್ಗೆ, ಬ್ಯಾಕ್‌ ಲಾಗ್‌ ಹುದ್ದೆಗಳ ಭರ್ತಿಗೂ ಒತ್ತಡ ಹೇರಿದ್ದಾರೆ.

ಪ್ರಿಯಾಂಕ್‌ ಅವರ ನಿರ್ದೇಶನದಂತೆ ಇಲಾಖೆಯ ಆಯುಕ್ತ ವಿಕಾಶ್ ಕುಮಾರ್ ವಿಕಾಶ್ ಇದೇ ಜೂನ್‌ 19ರಂದು ಎಲ್ಲ ನೇಮಕಾತಿ ಪ್ರಾಧಿಕಾರಗಳು ರೋಸ್ಟರ್‌ ರಿಜಿಸ್ಟರ್‌ (ರಿಕ್ತ ಸ್ಥಾನಗಳನ್ನು ತುಂಬಿದ ಪಟ್ಟಿ) ಮತ್ತು ಖಾಲಿ ಹುದ್ದೆಗಳ ರಿಜಿಸ್ಟರ್‌ ನೀಡುವಂತೆ ಸುತ್ತೋಲೆ ಹೊರಡಿಸಿದ್ದರು. ಆ. 21ರಂದು ಎಲ್ಲ ಇಲಾಖೆಗಳ ಮುಖ್ಯಸ್ಥರಿಗೆಗೆ ಸಚಿವರೇ ಪ್ರತ್ಯೇಕ ಪತ್ರ ಬರೆದಿದ್ದರು. ಸೆ. 4ರಂದು ರಾಜ್ಯ ಮುಖ್ಯ ಕಾರ್ಯದರ್ಶಿ (ಸಿ.ಎಸ್‌) ಪತ್ರ ಬರೆದು ತಕ್ಷಣ ಸ್ಪಂದಿಸುವಂತೆ ಕೋರಿದ್ದರು. ಅದರ ಪ್ರಕಾರ ಅ. 25ರ ಒಳಗೆ ರೋಸ್ಟರ್‌ ರಿಜಿಸ್ಟರ್ ಮತ್ತು ವೇಕೆನ್ಸಿ ರಿಜಿಸ್ಟರ್‌ ಸಿದ್ಧಪಡಿಸಿ ಸಮಾಜ ಕಲ್ಯಾಣ ಇಲಾಖೆಗೆ ಸಲ್ಲಿಸುವಂತೆ ಎಲ್ಲ ನೇಮಕಾತಿ ಪ್ರಾಧಿಕಾರಗಳಿಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಸೆ. 17ರಂದು ಸುತ್ತೋಲೆ ಹೊರಡಿಸಿತ್ತು.

41 ಇಲಾಖೆಗಳ ಅಧೀನದಲ್ಲಿರುವ ನಿಗಮ ಮಂಡಳಿ, ಸಹಕಾರ ಸಂಸ್ಥೆಗಳು, ಅನುದಾನಿತ ಸಂಸ್ಥೆಗಳ ಪೈಕಿ, ಈವರೆಗೆ 108 ಸಂಸ್ಥೆಗಳು ಮಾತ್ರ ರೋಸ್ಟರ್‌ ರಿಜಿಸ್ಟರ್‌ ಸಲ್ಲಿಸಿವೆ. 142 ಸಂಸ್ಥೆಗಳು ಇನ್ನೂ ಸಲ್ಲಿಸಬೇಕಿವೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ, ಉನ್ನತ ಶಿಕ್ಷಣ, ತಾಂತ್ರಿಕ ಶಿಕ್ಷಣ, ಅಬಕಾರಿ, ಗ್ರಾಮೀಣಭಿವೃದ್ಧಿ ಮತ್ತು ಪಂಚಾಯತ್‌ರಾಜ್‌, ಅರಣ್ಯ, ಲೋಕೋಪಯೋಗಿ ಇಲಾಖೆಗಳಿಂದ ರೋಸ್ಟರ್‌ ರಿಜಿಸ್ಟರ್‌ ಇನ್ನೂ ತಲುಪಿಲ್ಲ ಎಂದು ಸಮಾಜ ಕಲ್ಯಾಣ ಇಲಾಖೆ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.