ಬೆಂಗಳೂರು: ‘ಮೀಸಲಾತಿಯ ಪ್ರಯೋಜನ ಪಡೆದು ಮುಂದೆ ಬಂದವರೇ ಈಗ ಮೀಸಲಾತಿ, ಒಳಮೀಸಲಾತಿಯನ್ನು ವಿರೋಧಿಸುತ್ತಿದ್ದಾರೆ. ಅಂತಹವರಲ್ಲಿ ಮೀಸಲಾತಿಯನ್ನು ಪ್ರಶ್ನಿಸುವವರೂ ಇದ್ದಾರೆ’ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದರು.
ಅಭಿರುಚಿ ಪ್ರಕಾಶನವು ನಗರದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೆ.ಎನ್.ಲಿಂಗಪ್ಪ ಅವರ ‘ಮೀಸಲಾತಿಯ ಒಳಮುಖ’ ಪುಸ್ತಕವನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
‘ಮೀಸಲಾತಿಯಿಂದ ಶಿಕ್ಷಣ, ಉದ್ಯೋಗ ಮತ್ತು ರಾಜಕೀಯವಾಗಿಯೂ ಪ್ರಾತಿನಿಧ್ಯ ಪಡೆದವರು ನವ ಬ್ರಾಹ್ಮಣರಂತೆ ವರ್ತಿಸುತ್ತಿದ್ದಾರೆ. ತಮ್ಮತನವನ್ನು ಮರೆತು, ಬ್ರಾಹ್ಮಣರನ್ನು ಅನುಸರಿಸುತ್ತಿದ್ದಾರೆ. ಹೀಗಾಗಿ ಮೀಸಲಾತಿ, ಒಳಮೀಸಲಾತಿ ಅಗತ್ಯವಿಲ್ಲ ಎನ್ನುವ ಅರ್ಥದಲ್ಲಿ ಮಾತನಾಡುತ್ತಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ಸ್ವಾತಂತ್ರ್ಯಪೂರ್ವದಲ್ಲಿಯೇ ಮೈಸೂರು ಸಂಸ್ಥಾನವು ಶೇ 75ರಷ್ಟು ಮೀಸಲಾತಿ ಜಾರಿಗೆ ತರಲು ಮುಂದಾಗಿತ್ತು. ಅಂದು ದಿವಾನರಾಗಿದ್ದ ವಿಶ್ವೇಶ್ವರಯ್ಯನವರು ಇದನ್ನು ವಿರೋಧಿಸಿದರು. ವಿರೋಧಿಸುವುದಿದ್ದರೆ ನೀವು ಹೊರಡಬಹುದು ಎಂದು ಒಡೆಯರು ಹೇಳಿದ್ದರು. ಈ ಕಾರಣದಿಂದಲೇ ವಿಶ್ವೇಶ್ವರಯ್ಯ ದಿವಾನ ಹುದ್ದೆಗೆ ರಾಜೀನಾಮೆ ನೀಡಿದ್ದು. ಅಂದು ಜಾರಿಗೆ ಬಂದ ಶೇ 75ರಷ್ಟು ಮೀಸಲಾತಿಯಿಂದ ಪ್ರಯೋಜನವಾಗಿದ್ದು ಲಿಂಗಾಯತರು ಮತ್ತು ಒಕ್ಕಲಿಗರಿಗೆ ಮಾತ್ರ. ಆದರೆ ಇಂದು ಈ ಸಮುದಾಯಗಳು ಮೀಸಲಾತಿ ಮತ್ತು ಒಳಮೀಸಲಾತಿಯನ್ನು ವಿರೋಧಿಸುತ್ತಿವೆ’ ಎಂದರು.
‘ಅರ್ಹತೆ ಬದಿಗಿಟ್ಟು ಮೀಸಲಾತಿ ಅಧಾರದಲ್ಲಿ ಉದ್ಯೋಗ ನೀಡಿದರೆ ಆಡಳಿತಕ್ಕೆ ತೊಡಕಾಗುತ್ತದೆ ಎಂದೇ ವಿಶ್ವೇಶ್ವರಯ್ಯ ವಾದಿಸಿದ್ದರು. ಈಗಲೂ ಇದೇ ವಾದ ಮುಂದಿಡಲಾಗುತ್ತಿದೆ. ಆದರೆ ಶೇ 69ರಷ್ಟು ಮೀಸಲಾತಿ ನೀಡುತ್ತಿರುವ ತಮಿಳುನಾಡು, ದೇಶದ ಅತ್ಯಂತ ಮುಂದುವರೆದ ರಾಜ್ಯಗಳಲ್ಲಿ ಒಂದಾಗಿದೆ. ಹಿಂದುಳಿದವರಿಗೆ ಶೇ 27ರಷ್ಟೇ ಮೀಸಲಾತಿ ನೀಡುತ್ತಿರುವ ಬಿಹಾರ, ಉತ್ತರ ಪ್ರದೇಶಗಳು ಸಾಂಸ್ಕೃತಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ದಕ್ಷಿಣ ಭಾರತದ ರಾಜ್ಯಗಳಿಗಿಂತ ಸುಮಾರು 200 ವರ್ಷಗಳಷ್ಟು ಹಿಂದುಳಿದಿವೆ’ ಎಂದರು.
ಅಂಕಣಕಾರ ಎ.ನಾರಾಯಣ ಮಾತನಾಡಿ, ‘ನಮ್ಮ ಜಾತಿಗಳಲ್ಲೂ ಬಡವರಿದ್ದಾರೆ. ಅವರಿಗೆ ಮೀಸಲಾತಿ ಬೇಕು ಎಂದು ಮುಂದುವರೆದ ಜಾತಿಗಳವರು ಕೇಳುತ್ತಾರೆ. ಆರ್ಥಿಕವಾಗಿ ದುರ್ಬಲ ವರ್ಗಗಳ ಮೀಸಲಾತಿ ಬಂದಿದ್ದು ಹೀಗೆಯೇ. ಆದರೆ ಮೀಸಲಾತಿ ಎಂಬುದು ಬಡತನ ನಿರ್ಮೂಲನೆಯ ಕಾರ್ಯಕ್ರಮವಲ್ಲ. ಬದಲಿಗೆ ಪ್ರಾತಿನಿಧ್ಯವಿಲ್ಲದ ಸಮುದಾಯಗಳಿಗೆ ಪ್ರಾತಿನಿಧ್ಯ ಒದಗಿಸುವ ವ್ಯವಸ್ಥೆ. ಇದನ್ನು ಲಿಂಗಪ್ಪನವರು ತಮ್ಮ ಈ ಪುಸ್ತಕದಲ್ಲಿ ವಿವರಿಸಿದ್ದಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.