ಬೆಂಗಳೂರು: ಬಗರ್‌ಹುಕುಂ ಅಡಿ ಒಟ್ಟು 9,29,512 ಅರ್ಜಿಗಳು ಸಲ್ಲಿಕೆಯಾಗಿದ್ದು, ಬಹುತೇಕ ಅರ್ಜಿಗಳು ಅರ್ಹತೆಯನ್ನೇ ಹೊಂದಿಲ್ಲ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ಅರ್ಹತೆ ಇಲ್ಲದ ಅರ್ಜಿಗಳನ್ನು ಕೈಬಿಟ್ಟು, ಅರ್ಹ ಅರ್ಜಿಗಳನ್ನು ಮಾತ್ರ ಪುರಸ್ಕರಿಸಲು ಮಾರ್ಗಸೂಚಿ ರೂಪಿಸಿದ್ದು, ಎಂಟು ತಿಂಗಳಲ್ಲಿ ಈ ಕಾರ್ಯ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅವರು ಮಂಗಳವಾರ ಸುದ್ದಿಗೋಷ್ಠಿ ಯಲ್ಲಿ ತಿಳಿಸಿದರು.
ಸುಮಾರು 50 ಲಕ್ಷ ಎಕರೆ ಜಮೀನು ಸಕ್ರಮಕ್ಕಾಗಿ ಅರ್ಜಿಗಳು ಸಲ್ಲಿಕೆಯಾಗಿವೆ. ಆದರೆ, ಆ ಪ್ರಮಾಣದ ಜಮೀನಿನ ಲಭ್ಯತೆಯೇ ಇಲ್ಲ. ಅರ್ಹ ಅರ್ಜಿದಾರರಿಗೆ ಆದ್ಯತೆ ಮೇರೆಗೆ ಭೂಮಿಯನ್ನು ಹಂಚಲಾಗುವುದು. ಅನರ್ಹರೇ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಸಿರುವುದರಿಂದ ಸಮಸ್ಯೆ ಸೃಷ್ಟಿಯಾಗಿದೆ ಎಂದು ಅವರು ವಿವರಿಸಿದರು.
ಕೆಲವು ಪ್ರಕರಣಗಳಲ್ಲಿ ಕೆಲ ವ್ಯಕ್ತಿಗಳು ಒಂದಕ್ಕಿಂತ ಹೆಚ್ಚು ಅರ್ಜಿಗಳನ್ನು ಸಲ್ಲಿಸಿರುವ ಉದಾಹರಣೆಯೂ ಇದೆ. ಒಬ್ಬ ವ್ಯಕ್ತಿಯಂತೂ 25 ಅರ್ಜಿಗಳನ್ನು ಸಲ್ಲಿಸಿದ್ದಾನೆ. ಮತ್ತೊಂದು ಪ್ರಕರಣದಲ್ಲಿ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ 18 ವರ್ಷ ತುಂಬಿದ ವ್ಯಕ್ತಿಯೂ ಅರ್ಜಿ ಸಲ್ಲಿಸಿದ್ದಾನೆ. ನೂರಾರು ಎಕರೆ ಜಮೀನು ಹೊಂದಿವರು, ಕೃಷಿಯನ್ನೇ ಮಾಡದವರೂ ಅರ್ಜಿ ಸಲ್ಲಿಸಿದ್ದಾರೆ ಎಂದು ಸಚಿವರು ಹೇಳಿದರು.
ಸರ್ಕಾರಿ ಭೂಮಿಯಲ್ಲಿ ಅಕ್ರಮ ಸಾಗುವಳಿ ಮಾಡಿಕೊಂಡವರಿಗೆ ಸಕ್ರಮ ಮಾಡಿಕೊಡುವುದಕ್ಕೆ ಸಂಬಂಧಿಸಿದಂತೆ ನಿಯಮಗಳಿಗೆ ಅನುಗುಣವಾಗಿಯೇ ಸರ್ಕಾರ ನಡೆದುಕೊಳ್ಳುತ್ತದೆ. ಆದರೆ, ಈ ಹಿಂದೆ ಸಕ್ರಮ ಮಾಡಿಕೊಟ್ಟ ಸಾಕಷ್ಟು ಪ್ರಕರಣಗಳಲ್ಲಿ ಲೋಪಗಳಾಗಿವೆ.
ಮಾರ್ಗಸೂಚಿ...
* ಅರ್ಜಿದಾರ ಎಲ್ಲೆಲ್ಲಿ ಅರ್ಜಿ ಹಾಕಿದ್ದಾನೆ ಎಂಬುದನ್ನು ಪರಿಶೀಲಿಸಲು ಆಧಾರ್ ಸಂಖ್ಯೆ ಲಿಂಕ್ ಮಾಡುವುದರ ಜತೆಗೆ ಆಧಾರ್ ದೃಢೀಕರಣ ಮಾಡಲಾಗುವುದು. ಪ್ರತಿ ತಾಲ್ಲೂಕಿನಲ್ಲೂ ತಹಶೀಲ್ದಾರರು ಅವರು ಇದನ್ನು ಪರಿಶೀಲಿಸುತ್ತಾರೆ.
* ಸಾಗುವಳಿ ಆರಂಭಿಸಿದ ದಿನಾಂಕಕ್ಕೆ ಅರ್ಜಿದಾರನ ವಯಸ್ಸು 18 ವರ್ಷ ಆಗಿತ್ತಾ ಎಂಬುದನ್ನು ಖಾತರಿಪಡಿಸಿಕೊಳ್ಳಬೇಕು.
* ಯಾವ ಜಮೀನಿಗೆ ಅರ್ಜಿ ಹಾಕಿದ್ದಾರೋ ಆ ಜಮೀನು 2010, 2011, 2012 ವರ್ಷಗಳಲ್ಲಿ ಹೇಗಿತ್ತು ಎಂಬುದರ ಉಪಗ್ರಹ ಚಿತ್ರವನ್ನು ತೆಗೆಸಿ ತಹಶೀಲ್ದಾರ್‌ಗೆ ನೀಡಲಾಗುವುದು. ನಿಜವಾಗಿ ಸಾಗುವಳಿ ಆಗಿತ್ತೇ ಎಂಬುದು ತಿಳಿಯಲು ಸಾಧ್ಯವಾಗುತ್ತದೆ. ಸಾಗುವಳಿ ಮಾಡಿಲ್ಲವಾದರೆ ಕ್ರಮ ತೆಗೆದುಕೊಳ್ಳಲಾಗುತ್ತದೆ. ಸಾಕ್ಷ್ಯವನ್ನು ಬಗರ್ ಹುಕುಂ ಸಮಿತಿಗೆ ನೀಡಲಾಗುತ್ತದೆ.
* ತಹಶೀಲ್ದಾರ್ ಅವರು ಮಹಜರ್ ಮಾಡಿ, ಸಾಗುವಳಿ ಮಾಡುತ್ತಿದ್ದಾರೋ ಎಂಬುದನ್ನು ಖಾತರಿ ಮಾಡಿಕೊಳ್ಳಬೇಕು.
ದಾಖಲೆ: ಡಿಜಿಟಲೀಕರಣ
ರಾಜ್ಯದ ಎಲ್ಲ ಜಮೀನುಗಳ ಮೂಲ ದಾಖಲೆಗಳ ಡಿಜಿಟಲೀಕರಣ ಕಾರ್ಯವನ್ನು 2024 ರ ಕೊನೆಯೊಳಗೆ ಪೂರ್ಣಗೊಳಿಸಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಪ್ರಾಯೋಗಿಕವಾಗಿ ಕೆಲವು ಜಿಲ್ಲೆಗಳಲ್ಲಿ ಈ ಕಾರ್ಯ ನಡೆದಿವೆ. ಇನ್ನು ಮುಂದೆ ಅಭಿಯಾನದ ರೂಪದಲ್ಲಿ ಭೂದಾಖಲೆಗಳನ್ನು ಸ್ಕ್ಯಾನಿಂಗ್ ಮಾಡಲಾಗುವುದು. ಜಮೀನಿನ ಮಾಲೀಕತ್ವ ಯಾರದ್ದು? ಯಾರಿಂದ ಯಾರಿಗೆ ಹೇಗೆ ಬಂತು, ಮಾರಾಟವಾಯಿತೆ ಅಥವಾ ದಾನದ ರೂಪದಲ್ಲಿ ಬಂದಿತೆ ಎಂಬುದರ ಸ್ಪಷ್ಟ ಮಾಹಿತಿ ಸಿಗುತ್ತದೆ.
ಸುಮಾರು 2.40 ಕೋಟಿಯಷ್ಟು ಸರ್ವೆಸಂಖ್ಯೆಗಳ ಪಹಣಿಗಳಿವೆ. ಅವುಗಳನ್ನು ರಕ್ಷಿಸಲು ಡಿಜಿಟಲೀಕರಣ ಮಾಡಲಾಗುವುದು ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.