ADVERTISEMENT

ಬಗರ್ ಹುಕುಂ ಪ್ರಕರಣ | ತಹಶೀಲ್ದಾರ್‌ಗೆ ಜಾಮೀನು: ಹೈಕೋರ್ಟ್ ಅತೃಪ್ತಿ

ಬಗರ್ ಹುಕುಂ ಜಮೀನು ಅಕ್ರಮ ಮಂಜೂರು ಆರೋಪ ಪ್ರಕರಣ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2024, 0:30 IST
Last Updated 15 ನವೆಂಬರ್ 2024, 0:30 IST
<div class="paragraphs"><p>ಕರ್ನಾಟಕ ಹೈಕೋರ್ಟ್ </p></div>

ಕರ್ನಾಟಕ ಹೈಕೋರ್ಟ್

   

ಬೆಂಗಳೂರು: ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನಲ್ಲಿ ಬಗರ್ ಹುಕುಂ ಸಾಗುವಳಿಯ ಜಮೀನನ್ನು ಅಕ್ರಮವಾಗಿ ಮಂಜೂರು ಮಾಡಿದ ಆರೋಪ ಎದುರಿಸುತ್ತಿರುವ ಪ್ರಕರಣದಲ್ಲಿ ಅಂದಿನ ತಹಶೀಲ್ದಾರ್ ನಿರೀಕ್ಷಣಾ ಜಾಮೀನು ಪಡೆದಿರುವ ಕ್ರಮಕ್ಕೆ ಹೈಕೋರ್ಟ್ ಮೌಖಿಕವಾಗಿ ಅಸಮಾಧಾನ ವ್ಯಕ್ತಪಡಿಸಿದೆ.

ಪ್ರಕರಣದ ಆರೋಪಿ ಹಾಗೂ ಅಂದಿನ ಬಗರ್ ಹುಕುಂ‌ ಸಮಿತಿ ಸದಸ್ಯರೂ ಆಗಿದ್ದ ವಕೀಲ ಎಸ್.ಎನ್. ಲಿಂಗೇಶ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ‘ಶಾಸಕರು-ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ’ಯ ವಿಶೇಷ ನ್ಯಾಯಪೀಠದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು ಗುರುವಾರ ವಿಚಾರಣೆ ನಡೆಸಿದರು.

ADVERTISEMENT

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ‘ಪ್ರಕರಣದ ಮತ್ತೊಬ್ಬ ಆರೋಪಿ ತಹಶೀಲ್ದಾರ್‌ ಅವರಿಗೆ ನೀರಿಕ್ಷಣಾ ಜಾಮೀನು ದೊರೆತಿದೆ. ಹಾಗಾಗಿ, ಲಿಂಗೇಶ್ ಅವರಿಗೂ ಮಂಜೂರು ಮಾಡಬೇಕು’ ಎಂದು ಮನವಿ ಮಾಡಿದರು.

ಅದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳು, ‘ಪ್ರಕರಣದಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿರುವುದು ಹಾಗೂ ಮೂಲ ದಾಖಲೆಗಳನ್ನು ತಿರುಚಿರುವುದೂ ಸೇರಿದಂತೆ ಎಲ್ಲ ಅಪಕೃತ್ಯಗಳನ್ನು ಮಾಡಿರುವುದೇ ತಹಶೀಲ್ದಾರ್‌ ಎಂಬುದನ್ನು ದಾಖಲೆಯ ಅಂಶಗಳು ಹೇಳುತ್ತವೆ. ಹೀಗಿರುವಾಗ ಅವರು ಅದ್ಹೇಗೆ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದಾರೆ’ ಎಂದು ರಾಜ್ಯ ಹೆಚ್ಚುವರಿ ಪ್ರಾಸಿಕ್ಯೂಟರ್ ಬಿ.ಎನ್.ಜಗದೀಶ್ ಅವರನ್ನು ಪ್ರಶ್ನಿಸಿದರು.

ಅಂತೆಯೇ, ‘ಪ್ರಕರಣದಲ್ಲಿ ತಹಶೀಲ್ದಾರ್‌ಗೆ ನಿರೀಕ್ಷಣಾ ಜಾಮೀನು ಲಭ್ಯವಾದ ಬಗ್ಗೆ ವಿವರಣೆ ನೀಡಿ’ ಎಂದು ಸೂಚಿಸಿ ವಿಚಾರಣೆಯನ್ನು ಇದೇ 20ಕ್ಕೆ ಮುಂದೂಡಿದರು.

ಪ್ರಕರಣವೇನು?: ‘ಬೇಲೂರು ತಾಲ್ಲೂಕಿನಲ್ಲಿ 2,750 ಎಕರೆ ಜಮೀನನ್ನು 1,430 ಮಂದಿ ನಕಲಿ ಮತ್ತು ಅಕ್ರಮ ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗಿದೆ’ ಎಂದು ಆರೋಪಿಸಿ ಕೋಲಾರದ ಸಾಮಾಜಿಕ ಕಾರ್ಯಕರ್ತ ಕೆ.ಸಿ.ರಾಜಣ್ಣ ಖಾಸಗಿ ದೂರು ಸಲ್ಲಿಸಿದ್ದರು.

ದೂರನ್ನು ಪರಿಗಣಿಸಿದ್ದ ವಿಚಾರಣಾ ನ್ಯಾಯಾಲಯ ಆರೋಪಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಲು ಆದೇಶಿಸಿತ್ತು. ಅದರನ್ವಯ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ-1860ರ ಕಲಂ 468, 464, 465, 471, 409, 420, 120ಬಿ ಅಡಿ ಪ್ರಕರಣ ದಾಖಲಿಸಲಾಗಿದೆ. 

‘ಬೇಲೂರು ತಾಲ್ಲೂಕು ಬಗರ್‌ ಹುಕುಂ ಸಾಗುವಳಿ ಸಮಿತಿ ಅಧ್ಯಕ್ಷರಾಗಿದ್ದ ಮೊದಲ ಆರೋಪಿಯಾಗಿರುವ ಜೆಡಿಎಸ್ ನ ಮಾಜಿ ಶಾಸಕ ಕೆ.ಎಸ್.ಲಿಂಗೇಶ್‌ 750 ಎಕರೆಗಿಂತ ಹೆಚ್ಚಿನ ಸರ್ಕಾರಿ ಜಮೀನಿ‌ನ ಅನುದಾನವನ್ನು ಅನುಮೋದಿಸಿದ್ದಾರೆ. ಉಳಿದ ಆರೋಪಿಗಳೆಲ್ಲರೂ ಅಧಿಕಾರಿಗಳ ಜೊತೆ ಶಾಮೀಲಾಗಿ ತಮ್ಮ ಅಧಿಕಾರ ಮತ್ತು ಸ್ಥಾನ ದುರ್ಬಳಕೆ ಮಾಡಿಕೊಂಡಿದ್ದಾರೆ. ಅಧಿಕಾರಿಗಳು ನಕಲಿ ದಾಖಲೆ ಸೃಷ್ಟಿಸಲು ಸಹಕಾರ ‌ನೀಡಿದ್ದ, ಸರ್ಕಾರಕ್ಕೆ ವಂಚಿಸುವ ಉದ್ದೇಶದಿಂದ ಅಪರಾಧಿಕ ಒಳಸಂಚು ನಡೆಸಿದ್ದಾರೆ. ಮಾಜಿ ಶಾಸಕ ವೈ.ಎನ್‌‌.ರುದ್ರೇಶ್‌ ಗೌಡ ಅವರೂ ಅಕ್ರಮ ವಹಿವಾಟಿನ ಭಾಗವಾಗಿದ್ದಾರೆ’ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.