ADVERTISEMENT

ಬಾಹುಬಲಿ ತ್ಯಾಗದ ವೀರಮೂರ್ತಿ: ಹೆಗ್ಗಡೆ

ಆರ್.ಎನ್.ಪೂವಣಿ
Published 15 ಫೆಬ್ರುವರಿ 2019, 19:30 IST
Last Updated 15 ಫೆಬ್ರುವರಿ 2019, 19:30 IST
   

* ಮಹಾಮಸ್ತಕಾಭಿಷೇಕವು ಕ್ಷೇತ್ರದಲ್ಲಿ ನಡೆಯುವ ಇತರ ಉತ್ಸವಗಳಿಗಿಂತ ಹೇಗೆ ಭಿನ್ನ ?

ಇಂದು ತ್ಯಾಗದ ಪರಿಕಲ್ಪನೆಯು ಮಸುಕಾಗುತ್ತಿದೆ. ಬಾಹುಬಲಿ ತ್ಯಾಗದ ಪರಿಕಲ್ಪನೆಯನ್ನು ಜೀವನದಲ್ಲಿ ಸಾಕಾರಗೊಳಿಸಿಕೊಂಡ ಮಹಾನ್‌ ಮೂರ್ತಿ. ಆದ್ದರಿಂದಲೇ ಆತನನ್ನು ತ್ಯಾಗವೀರ ಎಂದು ಕರೆಯುತ್ತೇವೆ. ಅಹಿಂಸೆ, ತ್ಯಾಗ, ಸಂಯಮ, ತಾಳ್ಮೆ ಮೊದಲಾದ ಸಂದೇಶಗಳು ಸಾರ್ವಕಾಲಿಕ ಮೌಲ್ಯವನ್ನು ಹೊಂದಿವೆ. ಸಕಲ ಸುಖ-ಭೋಗಗಳನ್ನೂ ತ್ಯಜಿಸಿ ತ್ಯಾಗಜೀವನಕ್ಕೆ ಆತ ಪದಾರ್ಪಣೆ ಮಾಡಿದ ನೀತಿ ಇಂದು ಅತ್ಯಂತ ಪ್ರಸ್ತುತವಾಗಿದೆ. ಇಡೀ ಉತ್ಸವದಲ್ಲಿ ಈ ಮೌಲ್ಯಗಳು ಜನರಿಗೆ ತಿಳಿಯಲಿ ಎಂಬ ಆಶಯವನ್ನು ಇಟ್ಟುಕೊಂಡಿದ್ದೇವೆ. ಅಹಿಂಸೆಯಿಂದ ಸುಖ, ತ್ಯಾಗದಿಂದ ಶಾಂತಿ, ಮೈತ್ರಿಯಿಂದ ಪ್ರಗತಿ ಮತ್ತು ಧ್ಯಾನದಿಂದ ಸಿದ್ಧಿ ಎಂದು ಆವರು ಜೀವನದಲ್ಲಿ ಸಾಧಿಸಿ ತೋರಿಸಿದ್ದಾರೆ.

* ಜೈನತತ್ವಗಳನ್ನು ಜನರಿಗೆ ತಲುಪಿಸಲು ಏನೆಲ್ಲ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ?

ADVERTISEMENT

ಮೊತ್ತಮೊದಲನೆಯದಾಗಿ ಬಾಹುಬಲಿಯ ಜೀವನಚರಿತ್ರೆಯನ್ನೇ ‘ಪಂಚಮಹಾವೈಭವ’ ಎಂಬ ರೂಪಕದ ಮೂಲಕ ಅನಾವರಣಗೊಳಿಸಲಾಗಿದೆ. ಇಂದು ರಾಜಕೀಯ, ಸಾಮಾಜಿಕ, ಧಾರ್ಮಿಕ, ಕೌಟುಂಬಿಕ - ಹೀಗೆ ಎಲ್ಲಾ ಕ್ಷೇತ್ರಗಳಲ್ಲಿಯೂ ಕೊಲೆ, ಹಿಂಸೆ, ಗೊಂದಲ, ಅನ್ಯಾಯ ಮೊದಲಾದ ಸಮಾಜಬಾಹಿರ ಕೃತ್ಯಗಳ ವೈಭವೀಕರಣವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಬಾಹುಬಲಿಯ ಸಂದೇಶ ಪಾಲನೆಯಿಂದ ಜೀವನದಲ್ಲಿ ಸುಖ-ಶಾಂತಿ–ನೆಮ್ಮದಿಯನ್ನು ಹೊಂದಬಹುದು ಎಂಬ ಆಶಯ ನಮ್ಮದು. ಬಾಹುಬಲಿ ಸಾರಿದ ತತ್ವ-ಸಂದೇಶಗಳ ಪ್ರಸಾರದೊಂದಿಗೆ, ಅದರ ಮಹತ್ವ ತಿಳಿಸುವುದೇ ಈ ಮಸ್ತಕಾಭಿಷೇಕದ ಉದ್ದೇಶ.

ಮಹೋತ್ಸವ ಯಾವಾಗಲೂ ಸಭೆ, ಸಮಾರಂಭ, ಮನೋರಂಜನೆಗೆ ಸೀಮಿತವಾಗಬಾರದು. ಬಂದವರ ಜೀವನಶೈಲಿಯ ಸುಧಾರಣೆಗೆ ಮೌಲಿಕ ಸಂದೇಶ ಸಿಗಬೇಕು. ಬಾಹುಬಲಿಯ ಜನನ, ರಾಜ್ಯಭಾರ, ತ್ಯಾಗ ಜೀವನ - ಎಲ್ಲವನ್ನೂ ರೂಪಕದ ಮೂಲಕ ಪ್ರದರ್ಶಿಸಲಾಗುವುದು. ಯುವಜನತೆ ಸಕ್ರಿಯವಾಗಿ ಇಂತಹ ಸಮಾರಂಭಗಳಲ್ಲಿ ಭಾಗವಹಿಸಿ ಅದರ ಪ್ರಯೋಜನ ಪಡೆಯಬೇಕು. ತಮ್ಮ ಜೀವನಶೈಲಿಯ ಸುಧಾರಣೆಯೊಂದಿಗೆ ಆಧ್ಯಾತ್ಮಿಕ ಸಾಧನೆಗೂ ಪ್ರೇರಣೆ ದೊರಕುತ್ತದೆ.

* ಮಹಾಮಸ್ತಕಾಭಿಷೇಕದ ಸಂದೇಶ ಏನು?

ಸರ್ವ ಧರ್ಮೀಯರೂ ಜಾತಿ-ಮತಗಳ ಬೇಧವನ್ನು ಮರೆತು ಸೇವಾಕಾರ್ಯಗಳಲ್ಲಿ ತೊಡಗಿದ್ದಾರೆ. ನೂರಕ್ಕೂ ಹೆಚ್ಚು ಮಂದಿ ದಿಗಂಬರ ಮುನಿಗಳು, ಕ್ಷುಲ್ಲಕರು ಹಾಗೂ ಮಾತಾಜಿಯವರು ಧರ್ಮಸ್ಥಳದಲ್ಲಿ ವಾಸ್ತವ್ಯ ಇದ್ದು ಜಪ-ತಪ-ಧ್ಯಾನದಲ್ಲಿ ನಿರತರಾಗಿದ್ದಾರೆ. ಇದರಿಂದ ಕ್ಷೇತ್ರದ ಪಾವಿತ್ರ್ಯ ಹೆಚ್ಚಾಗಿದೆ. ಪೂಜ್ಯರ ಉಪಸ್ಥಿತಿ ನಮಗೆ ಹೆಚ್ಚಿನ ಉತ್ಸಾಹವನ್ನು ನೀಡಿದೆ. ಮಹೋತ್ಸವಕ್ಕೂ ಶೋಭೆ ಬಂದಿದೆ. ಇದು ಸಮಾಜದಲ್ಲಿ ಸಕಾರಾತ್ಮಕ ಭಾವನೆಯನ್ನು ಬಿತ್ತುತ್ತದೆ ಎಂಬುದೇ ನಮ್ಮ ನಂಬಿಕೆ.

ಚತುರ್ಥ ಮಹಾಮಸ್ತಕಾಭಿಷೇಕದ ಸವಿನೆನಪಿಗಾಗಿ ಕೆಲವು ಜನಮಂಗಲ ಯೋಜನೆಗಳನ್ನೂ ಅನುಷ್ಠಾನಗೊಳಿಸಲಾಗಿದೆ. ಇನ್ನೂರು ಕೆರೆಗಳ ಅಭಿವೃದ್ಧಿ, ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಪ್ರೋತ್ಸಾಹ ಹಾಗೂ 8,450 ಮಂದಿಗೆ ಮಾಸಾಶನ ನೀಡಲು ಉದ್ದೇಶಿಸಲಾಗಿದೆ. ಅಂಗವಿಕಲರಿಗೂ ಸ್ವಾವಲಂಬಿ ಜೀವನಕ್ಕೆ ನೆರವು ನೀಡಲಾಗುವುದು. ವಿಶ್ವಶಾಂತಿ ಮತ್ತು ಲೋಕಕಲ್ಯಾಣಕ್ಕಾಗಿ ಮಹಾಮಸ್ತಕಾಭಿಷೇಕ ನಡೆಸಲಾಗುತ್ತದೆ. ತನ್ಮೂಲಕ ಎಲ್ಲೆಲ್ಲೂ ಸುಖ, ಶಾಂತಿ, ನೆಮ್ಮದಿ, ಸಾಮಾಜಿಕ ಸಾಮರಸ್ಯ ನೆಲೆಸುವಂತಾಗಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.