ADVERTISEMENT

ರೇಣುಕಸ್ವಾಮಿ ಕೊಲೆ ಆರೋಪಿಗಳ ಜಾಮೀನು ಅರ್ಜಿ: ಕಾಯ್ದಿರಿಸಿದ ಆದೇಶ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2024, 19:21 IST
Last Updated 21 ಸೆಪ್ಟೆಂಬರ್ 2024, 19:21 IST
ರೇಣುಕಸ್ವಾಮಿ
ರೇಣುಕಸ್ವಾಮಿ   

ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ 15 ಹಾಗೂ 17ನೇ ಆರೋಪಿಗಳಾದ ಕ್ರಮವಾಗಿ ಕಾರ್ತಿಕ್‌ ಹಾಗೂ ನಿಖಿಲ್‌ ಸಲ್ಲಿಸಿದ್ದ ಜಾಮೀನು ಅರ್ಜಿಗಳ ಮೇಲಿನ ಆದೇಶವನ್ನು ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯ ಕಾಯ್ದಿರಿಸಿದೆ.

ಈ ಕುರಿತಂತೆ ಕಾರ್ತಿಕ್‌ ಮತ್ತು ನಿಖಿಲ್‌ ಸಲ್ಲಿಸಿದ್ದ ಜಾಮೀನು ಅರ್ಜಿಗಳನ್ನು ಸಿಸಿಎಚ್‌–57ನೇ ಕೋರ್ಟ್‌ನ ನ್ಯಾಯಾಧೀಶ ಜಯಶಂಕರ್‌ ಅವರು ಶನಿವಾರ ವಿಚಾರಣೆ ನಡೆಸಿದರು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ರಂಗನಾಥ ರೆಡ್ಡಿ, ‘ಪ್ರಕರಣದಲ್ಲಿ ಈಗಾಗಲೇ ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಅಷ್ಟಕ್ಕೂ, ಅರ್ಜಿದಾರರ ವಿರುದ್ಧ ಹೊರಿಸಲಾಗಿರುವ ಆರೋಪಗಳು ಕಡಿಮೆ ಶಿಕ್ಷೆಯ ಪ್ರಮಾಣದವು ಮತ್ತು ಇವರಿಬ್ಬರೂ ಕೃತ್ಯದಲ್ಲಿ ಭಾಗಿಯಾಗಿಲ್ಲ. ಶವವನ್ನು ಸಾಗಿಸಿದ ನಂತರದ ಸನ್ನಿವೇಶಗಳಲ್ಲಿ ಹಣದ ಆಮಿಷಕ್ಕಾಗಿ ಪ್ರಕರಣದಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿದ್ದಾರೆ. ಆದ್ದರಿಂದ, ಜಾಮೀನು ಮಂಜೂರು ಮಾಡಬೇಕು’ ಎಂದು ಮನವಿ ಮಾಡಿದರು.

ADVERTISEMENT

ಇದಕ್ಕೆ ಪ್ರತಿಯಾಗಿ ಪ್ರಕರಣದ ವಿಶೇಷ ಪ್ರಾಸಿಕ್ಯೂಟರ್ ಪಿ.ಪ್ರಸನ್ನ ಕುಮಾರ್, ‘ಅರ್ಜಿದಾರರ ವಿರುದ್ಧದ ಪ್ರಮುಖ ಆರೋಪ ಎಂದರೆ ಸಾಕ್ಷ್ಯ ನಾಶ ಜೊತೆಗೆ ಒಳಸಂಚು ಸೇರಿವೆ. ಇವರು ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಬಿಡುಗಡೆ ಆದೇಶ ಪಡೆಯಬಹುದು. ಆದಾಗ್ಯೂ, ಆರೋಪಿಗಳ ವಿರುದ್ಧ ಜಾಮೀನು ನೀಡಬಹುದಾದ ಆರೋಪಗಳಿಗೆ ಸುಪ್ರೀಂ ಕೋರ್ಟ್‌ ತೀರ್ಪುಗಳ ಅನುಸಾರ ತಾವು ತೀರ್ಮಾನ ಪ್ರಕಟಿಸಬಹುದು’ ಎಂದರು.

ಇದಕ್ಕೆ ರಂಗನಾಥ ರೆಡ್ಡಿ, ‘ವಸಹತುಶಾಹಿ ಕಾಲದಲ್ಲಿ ವಿಶೇಷ ಪ್ರಾಸಿಕ್ಯೂಟರ್‌ಗಳು ಪೊಲೀಸರು ಹೇಳಿದ್ದನ್ನಷ್ಟೆ ನ್ಯಾಯಾಲಯಕ್ಕೆ ಒಪ್ಪಿಸುತ್ತಿದ್ದರು. ಆದರೆ, ಈ ಪ್ರಕರಣದಲ್ಲಿ ಪ್ರಸನ್ನ ಕುಮಾರ್ ನ್ಯಾಯಾಲಯಕ್ಕೆ ಸ್ಪಷ್ಟವಾದ ಕಾನೂನು ಮಾಹಿತಿ ನೀಡಿದ್ದಾರೆ. ಪಬ್ಲಿಕ್ ಪ್ರಾಸಿಕ್ಯೂಟರ್ ಎಂಬ ಪದಕ್ಕೆ ನಿಜವಾದ ಅರ್ಥ ನೀಡಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವಾದ–ಪ್ರತಿವಾದ ಆಲಿಸಿದ ನ್ಯಾಯಾಧೀಶರು, ‘ತನಿಖಾಧಿಕಾರಿಗಳು ಪ್ರಕರಣದ ತನಿಖೆಯನ್ನು ತುಂಬಾ ಚೆನ್ನಾಗಿ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ’ ಎಂದು ಶ್ಲಾಘಿಸಿ ಆದೇಶವನ್ನು ಸೋಮವಾರ (ಸೆ.23) ಪ್ರಕಟಿಸುವುದಾಗಿ ತಿಳಿಸಿದರು. ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ–1860ರ ಕಲಂ 120(ಬಿ), 149 ಹಾಗೂ 201ರ ಅಡಿ ದೋಷಾರೋಪ ಹೊರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.