ಮೂಡಲಗಿ: ‘ದೇಶದ ಗಡಿಯಲ್ಲಿ ಯಾರೋ ಬಾಂಬ್ ಹಾಕಿದರೆ ದೇಶದೊಳಗಿನ ಮುಸ್ಲಿಮರನ್ನು ಅನುಮಾನಿಸುವ ದಿನಗಳು ಇದ್ದವು. ಆದರೆ, ನರೇಂದ್ರ ಮೋದಿ ಅವರು ಪ್ರಧಾನಿ ಆದ ಮೇಲೆ ಭಯೋತ್ಪಾದನೆಗೆ ಕಡಿವಾಣ ಹಾಕಿ, ಹಿಂದೂ– ಮುಸ್ಲಿಮರ ಮಧ್ಯೆ ಸಾಮರಸ್ಯ ಮೂಡಿಸಿದ್ದಾರೆ’ ಎಂದು ಕೆಎಂಎಫ್ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಪಟ್ಟಣದಲ್ಲಿ ಸೋಮವಾರ ಜರುಗಿದ ಅರಭಾವಿ ಕ್ಷೇತ್ರದ ಮುಸ್ಲಿಂ ಸಮಾಜದ ಬೃಹತ್ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ‘2014ರಲ್ಲಿ ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಅಧಿಕಾರ ವಹಿಸಿಕೊಂಡ ಮೇಲೆ ಇಡೀ ದೇಶದ ಚಿತ್ರಣವೇ ಬದಲಾಗಿದೆ. ಭಾರತವನ್ನು ಯಾರು ದ್ವೇಷಿಸುತ್ತಿದ್ದರೋ ಅವರೇ ಇಂದು ನಮ್ಮ ದೇಶಕ್ಕೆ ಗೌರವ ನೀಡುತ್ತಿದ್ದಾರೆ. ದೇಶದಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗೆ ಮೋದಿ ಅವರು ಕಡಿವಾಣ ಹಾಕಿದ್ದಾರೆ’ ಎಂದರು.
‘ಅರಭಾವಿ ಕ್ಷೇತ್ರದಲ್ಲಿ ಮುಸ್ಲಿಮರೂ ಸೇರಿದಂತೆ ಎಲ್ಲ ಸಮಾಜದವರು ಶಾಂತಿ, ಸೌಹಾರ್ದದಿಂದ ಬದುಕುತ್ತಿದ್ದಾರೆ. ಮುಸ್ಲಿಂ ಸಮಾಜದವರು ನನ್ನ ಮೇಲೆ ತೋರಿದ ಪ್ರೀತಿ, ವಿಶ್ವಾಸವು ಹೃದಯಸ್ಪರ್ಷಿಯಾಗಿದೆ. ಈ ಸಮಾಜದ ಅಭಿವೃದ್ಧಿಗೆ ಸದಾ ಬದ್ಧನಾಗಿದ್ದೇನೆ’ ಎಂದರು.
‘ಮುಸ್ಲಿಂ ಸಮಾಜದವರು ಮಕ್ಕಳ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಬೇಕು. ಶಿಕ್ಷಣದಿಂದ ಬದಲಾವಣೆ ಸಾಧ್ಯ’ ಎಂದು ಕರೆ ನೀಡಿದರು.
ಮುಖಂಡ ಲಾಲಸಾಬ್ ಸಿದ್ಧಾಪೂರ ಮಾತನಾಡಿ, ‘ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮುಸ್ಲಿಂ ಸಮಾಜದವರ ಎಲ್ಲ ಕೆಲಸಗಳಿಗೆ ಸ್ಪಂದಿಸಿದ್ದಾರೆ. ಬರುವ ಚುನಾವಣೆಯಲ್ಲಿ ಕ್ಷೇತ್ರದ ಎಲ್ಲ ಮುಸ್ಲಿಮರು ಅವರ ಬೆಂಬಲವಾಗಿ ನಿಲ್ಲುತ್ತೇವೆ’ ಎಂದರು.
ಮುಖಂಡ ಎಚ್.ಡಿ. ಮುಲ್ಲಾ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಜೀಜ್ ಡಾಂಗೆ, ಮಲ್ಲಿಕ ಹುಣಶ್ಯಾಳ, ಅನ್ವರ ನದಾಫ್, ಹುಸೇನಸಾಬ್ ಶೇಖ್, ಅಬ್ದುಲ್ ಗಫಾರ ಡಾಂಗೆ, ನನ್ನುಸಾಬ್ ಶೇಖ್, ರಾಜೇಸಾಬ್ ಖೇಮಲಾಪೂರ, ಅಮೀನಸಾಬ್ ಯಳ್ಳೂರ, ಹಾಸಿಮ್ ನಗಾರ್ಚಿ, ಸರ್ವೋತ್ತಮ ಜಾರಕಿಹೊಳಿ ಹಲವರು ಇದ್ದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.