ADVERTISEMENT

ಉಗ್ರ ತಳಿ ನಾಯಿ ಸಾಕುವುದಕ್ಕೆ ನಿಷೇಧ: ಹೈಕೋರ್ಟ್‌ನಿಂದ ಕೇಂದ್ರದ ಸುತ್ತೋಲೆ ರದ್ದು

ಕೇಂದ್ರ ಸರ್ಕಾರ ಹೊರಡಿಸಿದ್ದ ಸುತ್ತೋಲೆ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2024, 16:18 IST
Last Updated 10 ಏಪ್ರಿಲ್ 2024, 16:18 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ಮಾನವರ ಜೀವಕ್ಕೆ ಎರವಾಗುವ ಮತ್ತು ಉಗ್ರ ಸ್ವರೂಪದವು ಎಂದೇ ಪರಿಗಣಿಸಲಾದ ಅಡ್ಡ ತಳಿಯೂ ಸೇರಿದಂತೆ 20ಕ್ಕೂ ಹೆಚ್ಚು ಬಗೆಯ ನಾಯಿಗಳ ತಳಿ ಅಭಿವೃದ್ಧಿ ಮತ್ತು ಸಾಕುವುದನ್ನು ನಿಷೇಧಿಸಿ ಕೇಂದ್ರ ಸರ್ಕಾರ ಹೊರಡಿಸಿದ್ದ ಸುತ್ತೋಲೆಯನ್ನು ಹೈಕೋರ್ಟ್‌ ರದ್ದುಪಡಿಸಿದೆ.

ಸುತ್ತೋಲೆ ಪ್ರಶ್ನಿಸಿ ನಗರದ ಶ್ವಾನ ತರಬೇತುದಾರರಾದ ಕಿಂಗ್ ಸಾಲೊಮನ್‌ ಡೇವಿಡ್ ಮತ್ತು ಮರ್ಡೋನಾ ಜೋನ್ಸ್‌ ಸಲ್ಲಿಸಿದ್ದ ರಿಟ್‌ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.

‘ನಿಷೇಧದ ನಿರ್ಧಾರಕ್ಕೆ ಸಂಬಂಧಿಸಿದಂತೆ ಶ್ವಾನ ತಳಿ ಪ್ರಮಾಣೀಕರಿಸುವ ಸಂಸ್ಥೆಗಳು ಮತ್ತು ಪ್ರಾಣಿ ದಯಾ ಸಂಘಟನೆಗಳ ವಿವರಣೆಯನ್ನು ಸರ್ಕಾರ ಕಡ್ಡಾಯವಾಗಿ ಆಲಿಸಬೇಕು. ನಂತರ ತಿದ್ದುಪಡಿಯ ಮೂಲಕ ಸಮಗ್ರ ಮಾರ್ಗದರ್ಶಿ ಸೂತ್ರದೊಂದಿಗೆ ಹೊಸ ಸುತ್ತೋಲೆ ಹೊರಡಿಸಬಹುದು’ ಎಂದು ನ್ಯಾಯಪೀಠ ಹೇಳಿದೆ.

ಪ್ರಕರಣವೇನು?: ದೆಹಲಿ ಹೈಕೋರ್ಟ್‌ನಲ್ಲಿ ದಾಖಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದರಲ್ಲಿ ನೀಡಲಾಗಿದ್ದ ನಿರ್ದೇಶನದ ಅನುಸಾರ, ಕೇಂದ್ರ ಪಶು ಸಂಗೋಪನೆ ಮತ್ತು ಡೈರಿ ಸಚಿವಾಲಯವು 20ಕ್ಕೂ ಹೆಚ್ಚು ಬಗೆ ತಳಿಗಳ ನಾಯಿ ಸಾಕಾಣಿಕೆ ಮತ್ತು ಅಭಿವೃದ್ಧಿಯನ್ನು ನಿಷೇಧಿಸಿ 2024ರ ಮಾರ್ಚ್‌ 12ರಂದು ಸುತ್ತೋಲೆ ಹೊರಡಿಸಿತ್ತು.

‘ಈ ಸುತ್ತೋಲೆ ಅಸಾಂವಿಧಾನಿಕವಾಗಿದೆ’ ಎಂದು ಆಕ್ಷೇಪಿಸಿ ಕರ್ನಾಟಕ ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ದಾಖಲಿಸಿದ್ದ ಅರ್ಜಿದಾರರು, ‘ಅಪಾಯಕಾರಿ ಎಂಬ ಅಭಿಪ್ರಾಯಕ್ಕೆ ಬರುವ ಮುನ್ನ ಅಂತಹ ತಳಿಯ ಶ್ವಾನಗಳ ಬಗ್ಗೆ ಆಳವಾದ ಅಧ್ಯಯನದ ಅಗತ್ಯವಿದೆ. ಈ ವಿಷಯದಲ್ಲಿ ನಾವೂ ಪಾಲುದಾರರಿದ್ದೇವೆ ಮತ್ತು ಈ ದಿಸೆಯಲ್ಲಿ ಭಾರತದಾದ್ಯಂತ ಸುಪರಿಚಿತವಾದ ನಾಯಿಗಳ ತಳಿ ಅಭಿವೃದ್ಧಿಯ ಕೆನ್ನೆಲ್‌ ಕ್ಲಬ್‌ ಆಫ್‌ ಇಂಡಿಯಾದ ಜೊತೆ ತಜ್ಞರು ಯಾವ ಚರ್ಚೆಯನ್ನೂ ನಡೆಸಿಲ್ಲ. ಹಾಗಾಗಿ, ಸುತ್ತೋಲೆಯನ್ನು ರದ್ದುಗೊಳಿಸಬೇಕು’ ಎಂದು ಕೋರಿದ್ದರು. ಅರ್ಜಿದಾರರ ಪರ ವಕೀಲ ಆರ್.ಸ್ವರೂಪ್‌ ಆನಂದ್‌ ವಾದ ಮಂಡಿಸಿದ್ದರು. 

ನಿಷೇಧಿತ ತಳಿಗಳು

ಪಿಟ್‌ಬುಲ್ ಟೆರ್ರಿಯರ್, ಟೋಸಾ ಇನು, ಅಮೆರಿಕನ್ ಸ್ಟಾಫರ್ಡ್‌ ಶೈರ್ ಟೆರಿಯರ್, ಫಿಲಾ ಬ್ರೆಸಿಲಿರೊ, ಡೊಗೊ ಅರ್ಜೆಂಟಿನೊ, ಅಮೆರಿಕನ್‌ ಬುಲ್‌ ಡಾಗ್‌, ಬೋರ್‌ ಬೋಲ್‌, ಕಂಗಲ್, ಮಧ್ಯ ಏಷ್ಯಾದ ಶೆಫರ್ಡ್ ಡಾಗ್, ಕಕೇಶಿಯನ್ ಶೆಫರ್ಡ್ ಡಾಗ್, ದಕ್ಷಿಣ ರಷ್ಯನ್ ಶೆಫರ್ಡ್ ಡಾಗ್ (ಓವ್ಚಾರ್ಕಾ), ಟೋರ್ನ್‌ ಜಾಕ್‌, ಸರ್‌ಪ್ಲಾನಿನಾಕ್‌, ಜಪಾನೀಸ್ ತೋಸಾ ಮತ್ತು ಅಕಿತಾ, ಮ್ಯಾಸ್ಟಿಫ್ಸ್ (ಬೋರ್‌ ಬುಲ್ಸ್), ರಾಟ್‌ವೀಲರ್, ಟೆರೈರ್ಸ್‌, ರೊಡೇಸಿಯನ್ ರಿಡ್ಜ್‌ ಬ್ಯಾಕ್‌, ವೂಲ್ಫ್ ಡಾಗ್ಸ್, ಕೆನಾರಿಯೊ, ಅಕ್ಬಷ್‌ ನಾಯಿ, ಮಾಸ್ಕೊ ಗಾರ್ಡ್ ನಾಯಿ, ಕೇನ್ ಕೊರ್ಸೊ ಮತ್ತು ಬ್ಯಾನ್‌ ಡಾಗ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.