ಚಾಮರಾಜನಗರ: ಅರಣ್ಯ ಇಲಾಖೆ ಬಿಡುಗಡೆ ಮಾಡಿರುವ 2022ರ ಹುಲಿ ಗಣತಿಯ ವಿವರಗಳ ಪ್ರಕಾರ, ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ 149 ಹುಲಿಗಳೊಂದಿಗೆ ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿದ್ದು, ಜಿಲ್ಲೆಯ ಬಂಡೀಪುರ 140 ಹುಲಿಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.
ಜಿಲ್ಲೆಯ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶ 39 ಹುಲಿಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದರೂ, 2018ರ ಅಂಕಿ ಅಂಶಗಳಿಗೆ ಹೋಲಿಸಿದರೆ, ಈ ಬಾರಿ 10 ಹುಲಿಗಳು ಕಡಿಮೆಯಾಗಿವೆ.
ಅಂತರರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯತೆ ಗಳಿಸಿರುವ ಬಂಡೀಪುರದಲ್ಲಿ ಹುಲಿಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಕಳೆದ ಗಣತಿ ಪ್ರಕಾರ ಬಂಡೀಪುರ ಅರಣ್ಯದಲ್ಲಿ 127 ವ್ಯಾಘ್ರಗಳಿದ್ದವು. ಅದೀಗ 140ಕ್ಕೆ ಏರಿದೆ.
ಹುಲಿ ಗಣತಿ ಸಂದರ್ಭದಲ್ಲಿ ಮರಿಗಳ ಸಂಖ್ಯೆಯನ್ನು ಲೆಕ್ಕ ಹಾಕುವುದಿಲ್ಲ. ವಯಸ್ಕ ಹುಲಿಗಳ ಸಂಖ್ಯೆ ಮಾತ್ರ ಪರಿಗಣಿಸಲಾಗುತ್ತದೆ.
ಮರಿಗಳ ಅಂಕಿ ಅಂಶಗಳನ್ನೂ ತೆಗೆದುಕೊಂಡರೆ ಬಂಡೀಪುರ ಮೊದಲ ಸ್ಥಾನದಲ್ಲಿದೆ. ಗುರುವಾರ ಬಿಡುಗಡೆಯಾಗಿರುವ ಗಣತಿ ವರದಿಯಲ್ಲಿ ಬಂಡೀಪುರದಲ್ಲಿ 32 ಹುಲಿ ಮರಿಗಳಿವೆ ಎಂದು ಹೇಳಲಾಗಿದೆ. ಭದ್ರಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ 27 ಮರಿಗಳಿವೆ. ನಾಗರಹೊಳೆಯಲ್ಲಿ ಒಂದು ಮರಿ ಇದೆ ಎಂದು ಉಲ್ಲೇಖಿಸಲಾಗಿದೆ.
ಹುಲಿಗಳಿಗೆ ಪೂರಕ ವಾತಾವರಣ: ಬಂಡೀಪುರದಲ್ಲಿ 32 ಹುಲಿ ಮರಿಗಳು ಕಂಡು ಬಂದಿರುವುದು, ಈ ಅರಣ್ಯದಲ್ಲಿ ವ್ಯಾಘ್ರ ಸಂತತಿಯ ಬೆಳವಣಿಗೆಗೆ ಪೂರಕ ವಾತಾವರಣ ಇದೆ ಎಂಬುದನ್ನು ಎತ್ತಿ ತೋರಿಸಿದೆ.
‘ಬಂಡೀಪುರದಲ್ಲಿ 127 ಹುಲಿಗಳಿರುವುದು ಹಿಂದಿನ ಗಣತಿಯಲ್ಲಿ ಕಂಡು ಬಂದಿತ್ತು. ಕೇರಳದ ವಯನಾಡು, ತಮಿಳುನಾಡಿನ ಮಧುಮಲೆ, ನಮ್ಮದೇ ಆದ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳ ಹುಲಿಗಳೂ ಇಲ್ಲಿಗೆ ಬರುತ್ತಿದ್ದುದರಿಂದ 173 ಹುಲಿಗಳಿವೆ ಎಂದು ಹೇಳಲಾಗಿತ್ತು. ಈಗ ಪ್ರಕಟವಾಗಿರುವ ಹುಲಿಗಳ ಸಂಖ್ಯೆ (140) ನಮ್ಮ ಅರಣ್ಯಕ್ಕೆ ಸೇರಿದ್ದು ಮಾತ್ರ. ಬೇರೆ ಕಾಡಿನಿಂದ ಇಲ್ಲಿಗೆ ಬಂದಿರುವುದನ್ನು ಪರಿಗಣಿಸಿಲ್ಲ. ಹಾಗಿದ್ದರೂ ಹುಲಿಗಳ ಸಂಖ್ಯೆಯಲ್ಲಿ ಏರಿಕೆ ಕಂಡು ಬಂದಿದೆ’ ಎಂದು ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಡಾ.ಪಿ.ರಮೇಶ್‌ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಇಡೀ ರಾಜ್ಯದಲ್ಲಿ ನಮ್ಮಲ್ಲೇ ಹೆಚ್ಚು ಹುಲಿ ಮರಿಗಳಿರುವುದು ಸಂತಸ ತಂದಿದೆ. ಮರಿಗಳನ್ನು ಗಣತಿಯ ಸಂದರ್ಭದಲ್ಲಿ ಹುಲಿಗಳ ಲೆಕ್ಕಕ್ಕೆ ಪರಿಗಣಿಸುವುದಿಲ್ಲ. ಈ ಮರಿಗಳಲ್ಲಿ ಕೆಲವು ಈಗಾಗಲೇ ವಯಸ್ಕ ಹುಲಿಗಳು ಆಗಿರಬಹುದು. ಬಂಡೀಪುರ ಕಾಡು ಹುಲಿಗಳ ಸಂತತಿ ಬೆಳವಣಿಗೆಗೆ ಪೂರಕವಾಗಿದೆ ಎಂಬುದು ಹುಲಿ ಮರಿಗಳ ಸಂಖ್ಯೆಯಿಂದ ಗೊತ್ತಾಗುತ್ತದೆ’ ಎಂದು ಅವರು ಹೇಳಿದರು.
ಬಂಡೀಪುರ ಅರಣ್ಯದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಾಗಿದೆ. ಮರಿಗಳು ಹೆಚ್ಚಿರುವುದು ಹೆಮ್ಮೆಯ ವಿಚಾರ. ಅವುಗಳ ಸಂರಕ್ಷಣೆ ಜವಾಬ್ದಾರಿ ಎಲ್ಲರ ಮೇಲಿದೆಡಾ.ಪಿ.ರಮೇಶ್‌ಕುಮಾರ್ ಬಂಡೀಪುರ ಹುಲಿ ಯೋಜನೆ ನಿರ್ದೇಶಕ
Quote - ಬಿಆರ್‌ಟಿಯಲ್ಲಿ ಕಳೆದ ಬಾರಿ 40ರಿಂದ 50ರಷ್ಟು ಹುಲಿಗಳಿವೆ ಎಂದು ಹೇಳಲಾಗಿತ್ತು. ಈ ಬಾರಿ 39 ಹುಲಿಗಳ ಎರಡು ಮರಿಗಳಿವೆ ಎಂದು ವರದಿ ಹೇಳಿದೆ ದೀಪ್ ಜೆ.ಕಾಂಟ್ರ್ಯಾಕ್ಟರ್ ಬಿಆರ್‌ಟಿ ಡಿಸಿಎಫ್
ಬಿಆರ್‌ಟಿಯಲ್ಲಿ ಹುಲಿಗಳ ಸಂಖ್ಯೆ ಕಡಿಮೆಯಾಗಿರುವುದು ಅಚ್ಚರಿ ತಂದಿದೆ. ಇದಕ್ಕೆ ಏನು ಕಾರಣ ಎಂಬುದನ್ನು ಅಧಿಕಾರಿಗಳು ಪತ್ತೆ ಹಚ್ಚಬೇಕಿದೆಮಲ್ಲೇಶಪ್ಪ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ
ಬಿಆರ್‌ಟಿಯಲ್ಲಿ ಕಳೆದ ಬಾರಿ 40ರಿಂದ 50ರಷ್ಟು ಹುಲಿಗಳಿವೆ ಎಂದು ಹೇಳಲಾಗಿತ್ತು. ಈ ಬಾರಿ 39 ಹುಲಿಗಳ ಎರಡು ಮರಿಗಳಿವೆ ಎಂದು ವರದಿ ಹೇಳಿದೆ.ದೀಪ್ ಜೆ.ಕಾಂಟ್ರ್ಯಾಕ್ಟರ್ ಬಿಆರ್‌ಟಿ ಡಿಸಿಎಫ್
ಬಂಡೀಪುರ ಅರಣ್ಯದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಾಗಿದೆ. ಮರಿಗಳು ಹೆಚ್ಚಿರುವುದು ಹೆಮ್ಮೆಯ ವಿಚಾರ. ಅವುಗಳ ಸಂರಕ್ಷಣೆ ಜವಾಬ್ದಾರಿ ಎಲ್ಲರ ಮೇಲಿದೆಡಾ.ಪಿ.ರಮೇಶ್‌ಕುಮಾರ್ ಬಂಡೀಪುರ ಹುಲಿ ಯೋಜನೆ ನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.