ADVERTISEMENT

ಬಂಡೀಪುರ: ಹಗಲು ಸಂಚಾರ ನಿಷೇಧ ಬೇಡ

ವಿವಿಧ ಸಂಘಟನೆಗಳ ಮುಖಂಡರ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2019, 19:46 IST
Last Updated 3 ನವೆಂಬರ್ 2019, 19:46 IST

ಮೈಸೂರು: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ವೇಳೆ ವಾಹನ ಸಂಚಾರ ನಿರ್ಬಂಧಿಸಿರುವ ವಿಚಾರದಲ್ಲಿ ಯಥಾಸ್ಥಿತಿ ಮುಂದುವ‌ರಿಯಲಿ. ಆದರೆ, ಹಗಲು ಸಂಚಾರ ನಿಷೇಧ ಬೇಡ ಎಂಬ ಅಭಿಪ್ರಾಯವನ್ನು ವಿವಿಧ ಸಂಘಟನೆಗಳ ಮುಖಂಡರು ವ್ಯಕ್ತಪಡಿಸಿದರು.

ವಾಹನ ಸಂಚಾರ ನಿಷೇಧ ಕುರಿತು ಎಂಜಿನಿಯರುಗಳ ಸಂಸ್ಥೆಯು ಭಾನುವಾರ ಆಯೋಜಿಸಿದ್ದ ಮುಕ್ತ ಚರ್ಚೆಯಲ್ಲಿ ಮೈಸೂರು, ಚಾಮರಾಜನಗರ ಮತ್ತು ವಯನಾಡು ಜಿಲ್ಲೆಗಳ ವಿವಿಧ ಸಂಘಟನೆಗಳ ಮುಖಂಡರು ಪಾಲ್ಗೊಂಡರು.

‘ಸಂರಕ್ಷಿತ ಪ್ರದೇಶದಲ್ಲಿ ಹಾದು ಹೋಗಿರುವ ಹೆದ್ದಾರಿಗಳನ್ನು ಶಾಶ್ವತವಾಗಿ ಬಂದ್‌ ಮಾಡುವ ಬಗ್ಗೆ ಸುಪ್ರೀಂ ಕೋರ್ಟ್‌ ಇತ್ತೀಚೆಗೆ ಕೇಂದ್ರ ಸರ್ಕಾರದ ಅಭಿಪ್ರಾಯವನ್ನಷ್ಟೆ ಕೇಳಿದೆ. ಯಾವುದೇ ಆದೇಶ ಹೊರಡಿಸಿಲ್ಲ’ ಎಂದು ನಿವೃತ್ತ ಮೇಜರ್‌ ಜನರಲ್‌ ಎಸ್‌.ಜಿ.ಒಂಬತ್ಕೆರೆ ಹೇಳಿದರು.

ADVERTISEMENT

ಈ ವಿವಾದವನ್ನು ಕೇರಳ– ಕರ್ನಾಟಕ ನಡುವಿನ ಹೋರಾಟವಾಗಿ ಕಾಣಬಾರದು. ಮೈಸೂರು, ಚಾಮರಾಜನಗರ ಅಲ್ಲದೆ ಕೇರಳದ ವಯನಾಡು, ಮಲಪ್ಪುರಂ ಮತ್ತು ಕೋಯಿಕ್ಕೋಡ್‌ ಜಿಲ್ಲೆಗಳ ಜನರ ಹಿತಾಸಕ್ತಿಯನ್ನು ಪರಿಗಣಿಸಿ ವಿವಾದಕ್ಕೆ ಶಾಶ್ವತ ಪರಿಹಾರ ಕಂಡಕೊಳ್ಳಬೇಕಿದೆ ಎಂದು ಅಭಿಪ್ರಾಯಪಟ್ಟರು.

ವಯನಾಡು ಜಿಲ್ಲೆಯ ವಕೀಲ ಪಿ.ಸಿ.ಗೋಪಿನಾಥ್‌ ಮಾತನಾಡಿ, ‘ಅರಣ್ಯ ಹಾಗೂ ವನ್ಯಜೀವಿ ಸಂರಕ್ಷಣಾ ಕಾಯ್ದೆಯನ್ನು ಪಾಲಿಸುವ ಜತೆಗೆ ರಾಷ್ಟ್ರೀಯ ಹೆದ್ದಾರಿ ಕಾಯ್ದೆಯನ್ನೂ ಗೌರವಿಸಬೇಕು. ಈಗ ಇರುವ ರಾತ್ರಿ ಸಂಚಾರ ನಿಷೇಧ ಸಂವಿಧಾನದ ಉಲ್ಲಂಘನೆಯಾಗಿದೆ’ ಎಂದರು.

ವಯನಾಡಿನ ನಿವೃತ್ತ ಐಎಎಸ್‌ ಅಧಿಕಾರಿ ಬಾಲಗೋಪಾಲನ್‌, ‘ರಾತ್ರಿ ವಾಹನ ಸಂಚಾರ ನಿಷೇಧ ಶುರುವಾಗಿ 10 ವರ್ಷಗಳು ಕಳೆದಿವೆ. ಕಾಡಿನ ಪ್ರಾಣಿಗಳು ಈಗಿನ ಪರಿಸ್ಥಿತಿಗೆ ಹೊಂದಿಕೊಂಡಿವೆ. ನಿಷೇಧ ರದ್ದುಗೊಳಿಸಿದರೆ ಅವುಗಳಿಗೆ ಮಾರಕವಾಗಿ ಪರಿಣಮಿಸಬಹುದು’ ಎಂದು ಅಭಿ‌ಪ್ರಾಯಪಟ್ಟರು.

ಮುಕ್ತ ಚರ್ಚೆಯಲ್ಲಿ ವ್ಯಕ್ತವಾದ ಅಭಿಪ್ರಾಯಗಳನ್ನು ಕ್ರೋಡೀಕರಿಸಿ ಕೇಂದ್ರ ಪರಿಸರ ಇಲಾಖೆ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಕಳುಹಿಸಿಕೊಡಲಾಗುವುದು ಎಂದು ಕಾರ್ಯಕ್ರಮದ ಸಂಯೋಜಕ ಎಂ.ಲಕ್ಷ್ಮಣ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.