ಬೆಂಗಳೂರು: ‘ಕೇಂದ್ರ ಸರ್ಕಾರ ಕಸ್ತೂರಿ ರಂಗನ್ ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸಬೇಕು’ ಎಂಬುದೂ ಸೇರಿದಂತೆ ಒಟ್ಟು ಆರು ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಇದೇ 21ರಂದು ನಗರದ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ‘ಬೆಂಗಳೂರು ಚಲೋ’ ಹಮ್ಮಿಕೊಳ್ಳಲಾಗಿದೆ’ ಎಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ.
ರಾಜ್ಯದ 16 ಜಿಲ್ಲೆಗಳಿಂದ ಸುಮಾರು 10 ಸಾವಿರ ಅರಣ್ಯವಾಸಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ಅನುಸೂಚಿತ ಬುಡಕಟ್ಟುಗಳ ಮತ್ತು ಇತರ ಪಾರಂಪರಿಕ ಅರಣ್ಯವಾಸಿಗಳ ಅರಣ್ಯ ಹಕ್ಕು ಕಾಯ್ದೆ, ಬುಡಕಟ್ಟು ಮಂತ್ರಾಲಯ ಹಕ್ಕು ಮತ್ತು ಗುಜರಾತ್ ಹೈಕೋರ್ಟ್ ಆದೇಶದಂತೆ ಮೂರು ತಲೆಮಾರಿನ ದಾಖಲೆಗಳಿಗೆ ಅರಣ್ಯವಾಸಿಗಳ ಮೇಲೆ ಒತ್ತಡ ಹೇರಬಾರದು ಎಂಬ ಬೇಡಿಕೆಯೂ ಇದೆ’ ಎಂದಿದ್ದಾರೆ.
‘1978 ಏಪ್ರಿಲ್ 27ರ ಪೂರ್ವದ 19,348 ಅರಣ್ಯವಾಸಿ ಕುಟುಂಬಗಳಿಗೆ 14,848.83 ಹೆಕ್ಟೇರ್ ಅರಣ್ಯ ಪ್ರದೇಶವನ್ನು ಅರಣ್ಯ ಸಂರಕ್ಷಣಾ ಕಾಯ್ದೆ 1980 ಅಡಿಯಲ್ಲಿ ಷರತ್ತುಬದ್ಧ ಮಂಜೂರಿಗೆ ಕೇಂದ್ರ ಸರ್ಕಾರ 1996 ಮೇ 15ರಂದು ಆದೇಶ ನೀಡಿತ್ತು. ಈ ಕುಟುಂಬಗಳಿಗೆ ಹಕ್ಕು ಪತ್ರ ವಿತರಿಸಬೇಕು, ಅಸಮರ್ಪಕ ಜಿಪಿಎಸ್ ಕುರಿತು ಸಲ್ಲಿಸಿದ ಮೇಲ್ಮನವಿಗೆ ಮಾನ್ಯತೆ ನೀಡಬೇಕು, ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ಅರ್ಜಿ ಸಲ್ಲಿಸದ ಅರಣ್ಯವಾಸಿಗಳ ಕುಟುಂಬಗಳಿಗೆ ಅರ್ಜಿ ಸಲ್ಲಿಸಲು ಮತ್ತೊಂದು ಅವಕಾಶ ನೀಡಬೇಕು, ಅರಣ್ಯವಾಸಿಗಳನ್ನು ಕಾನೂನುಬಾಹಿರವಾಗಿ ಒಕ್ಕಲೆಬ್ಬಿಸುವ ಮತ್ತು ದೌರ್ಜನ್ಯ ಎಸಗುವ ಕ್ರಮಗಳನ್ನು ನಿಯಂತ್ರಿಸಬೇಕು ಎಂದೂ ಆಗ್ರಹಿಸಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದೂ ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.