ಬೆಂಗಳೂರು: ನಗರದ ಸೆಂಟ್ರಲ್ ಕಾಲೇಜು ಸಭಾಂಗಣದಲ್ಲಿ ಜುಲೈ 10ರಂದು ಬೆಳಿಗ್ಗೆ 11ಕ್ಕೆ ಬೆಂಗಳೂರು ನಗರ ವಿಶ್ವವಿದ್ಯಾಲಯದ ಎರಡನೇ ಘಟಿಕೋತ್ಸವ ಆಯೋಜಿಸಲಾಗಿದೆ. 5,997 ಸ್ನಾತಕೋತ್ತರ ವಿದ್ಯಾರ್ಥಿಗಳು ಸೇರಿದಂತೆ 35,911 ವಿದ್ಯಾರ್ಥಿಗಳು ಪದವಿಗೆ ಅರ್ಹರಾಗಿದ್ದಾರೆ.
ರಾಜ್ಯಪಾಲ ಥಾವರಚಂದ್ ಗೆಹಲೋತ್, ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಉಪಸ್ಥಿತರಿರುವರು. ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಘಟಿಕೋತ್ಸವ ಭಾಷಣ ಮಾಡುವರು. 61 ವಿದ್ಯಾರ್ಥಿಗಳು ರ‍್ಯಾಂಕ್ ಪಡೆದಿದ್ದು, 51 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ವಿತರಿಸಲಾಗುವುದು. ಪದವಿ ಪಡೆಯುತ್ತಿರುವವರಲ್ಲಿ ಶೇ 60ರಷ್ಟು ಮಹಿಳೆಯರು, ಶೇ 40ರಷ್ಟು ಪುರುಷರು ಇದ್ದಾರೆ ಎಂದು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಲಿಂಗರಾಜ ಗಾಂಧಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಹೊಸದಾಗಿ ಸ್ಥಾಪಿತವಾದ ವಿಶ್ವವಿದ್ಯಾಲಯವಾದ ಕಾರಣ ವಿಶ್ವವಿದ್ಯಾಲಯವೇ 38 ಚಿನ್ನದ ಪದಕ ನೀಡುತ್ತಿದೆ. ದಾನಿಗಳು 13 ಚಿನ್ನದ ಪದಕ ಸ್ಥಾಪಿಸಿದ್ದಾರೆ. ಎಂಎಸ್ಸಿ ರಸಾಯನ ಶಾಸ್ತ್ರದಲ್ಲಿ ಪದ್ಮಾವತಿ ಕೆ.ವಿ. ನಾಯರ್, ಬಿ.ಕಾಂನಲ್ಲಿ ಕೃಪಾನಿಧಿ ವಾಣಿಜ್ಯ ಕಾಲೇಜಿನ ಅಜಿತ್ ಕುಮಾರ್ ಎಂ, ಬಿಬಿಎನಲ್ಲಿ ಶೇಷಾದ್ರಿಪುರಂ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಎಸ್.ದೀಪ್ತಿ ತಲಾ ಮೂರು ಚಿನ್ನದ ಪದಕ ಪಡೆದಿದ್ದಾರೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ವಿಶ್ವವಿದ್ಯಾಲಯದ ಕುಲಸಚಿವ ಸಿ.ಎನ್.ಶ್ರೀಧರ್, ಮೌಲ್ಯಮಾಪನ ಕುಲಸಚಿವ ವಿ.ಲೋಕೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.