ಬೆಂಗಳೂರು: ಶಿವರಾತ್ರಿ ಹಬ್ಬದ ಆಚರಣೆಗೆ ನಗರದ ಜನರು ಸಜ್ಜಾಗಿದ್ದಾರೆ. ಬಹುತೇಕ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಅಭಿಷೇಕ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳಿಗೆ ಸಿದ್ಧತೆಗಳು ಭರದಿಂದ ಸಾಗಿವೆ.
ಎರಡು ವರ್ಷಗಳಿಂದ ಶಿವರಾತ್ರಿ ಸಂಭ್ರಮಕ್ಕೆ ಕೋವಿಡ್ ಅಡ್ಡಿಯಾಗಿತ್ತು. ಈ ಬಾರಿ ಆಚರಣೆಗೆ ಜನರು ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದಾರೆ.ಮಂಗಳವಾರ ಹಾಗೂ ಬುಧವಾರ ಶಿವರಾತ್ರಿಯ ಆಚರಣೆ ನಡೆಯಲಿದ್ದು, ಮೊದಲ ದಿನ ಉಪವಾಸ ಆಚರಿಸಿ, ರಾತ್ರಿಯಿಡೀ ಜಾಗರಣೆ ಇರುತ್ತಾರೆ. ಮರುದಿನ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ಬಳಿಕ ಆಹಾರ ಸೇವಿಸುವುದು ವಾಡಿಕೆ.
ಗವಿಪುರದ ಗವಿ ಗಂಗಾಧರೇಶ್ವರ ದೇವಾಲಯ, ಮಲ್ಲೇಶ್ವರದಕಾಡು ಮಲ್ಲೇಶ್ವರ ದೇವಾಲಯ, ದಕ್ಷಿಣಮುಖ ನಂದಿ ತೀರ್ಥ, ಹಲಸೂರಿನ ಸೋಮೇಶ್ವರ ದೇವಸ್ಥಾನ, ಜರಗನಹಳ್ಳಿ ಗಂಗಾಧರೇಶ್ವರ ಸ್ವಾಮಿ ದೇವಸ್ಥಾನ, ಶ್ರೀಕಂಠೇಶ್ವರ ಸ್ವಾಮಿ ದೇವಸ್ಥಾನ, ಚಂದ್ರಚೂಡೇಶ್ವರ ದೇವಸ್ಥಾನ, ಚಾಮರಾಜಪೇಟೆಯ ಮಲೆಮಹದೇಶ್ವರ ದೇವಸ್ಥಾನ, ಮುರುಗೇಶ ಪಾಳ್ಯದ ಶಿವೋಹಂ ಶಿವ ದೇವಸ್ಥಾನ, ಕೋಟೆ ಜಲಕಂಟೇಶ್ವರ ದೇವಸ್ಥಾನ ಸೇರಿ ವಿವಿಧ ಶಿವಾಲಯಗಳು ಮಹಾಶಿವರಾತ್ರಿ ಆಚರಣೆಗೆ ಸಜ್ಜಾಗಿವೆ.
ದೇವಸ್ಥಾನಗಳಲ್ಲಿ ವಿಶೇಷಪೂಜೆ, ರುದ್ರಾಭಿಷೇಕ, ಕ್ಷೀರಾಭಿಷೇಕ,ಬಿಲ್ವಪತ್ರೆ ಅರ್ಪಣೆ, ಮಹಾ ಮಂಗಳಾರತಿ ಸೇರಿದಂತೆ ವಿವಿಧ ಧಾರ್ಮಿಕ ವಿಧಿ ವಿಧಾನಗಳಿಗೆ ಭರದ ಸಿದ್ಧತೆಯಾಗಿದೆ. ಭಕ್ತರಿಗೆ ಶಿವನಾಮ ಸ್ಮರಣೆ, ಜಪ, ತಪಗಳಿಗೆ ವ್ಯವಸ್ಥೆ ಮಾಡಲಾಗಿದೆ.
ಜಾಗರಣೆ ನಿಮಿತ್ತ ನಾಟಕೋತ್ಸವ, ಸಂಗೀತ–ನೃತ್ಯ, ಲಕ್ಷ ದೀಪೋತ್ಸವ, ವಿಶೇಷಧಾರ್ಮಿಕ ಕಾರ್ಯಕ್ರಮಗಳನ್ನುದೇವಸ್ಥಾನಗಳಲ್ಲಿ ಹಮ್ಮಿಕೊಳ್ಳಲಾಗಿದೆ.ತಳಿರು, ತೋರಣ ಹಾಗೂ ವಿದ್ಯುತ್ ದೀಪಗಳಿಂದ ದೇವಸ್ಥಾನಗಳು ಅಲಂಕಾರಗೊಂಡಿವೆ.
ಹಬ್ಬಕ್ಕಾಗಿ ಹೂವು, ಹಣ್ಣು, ತರಕಾರಿ ಹಾಗೂ ಹಬ್ಬಕ್ಕೆ ಅಗತ್ಯ ವಸ್ತುಗಳ ಖರೀದಿ ಸೋಮವಾರ ಗರಿಗೆದರಿತು. ಪ್ರಮುಖ ಮಾರುಕಟ್ಟೆಗಳೆಲ್ಲ ಗ್ರಾಹಕರಿಂದ ತುಂಬಿತ್ತು.ಶಿವಪೂಜೆಗೆ ಪ್ರಧಾನವಾಗಿ ಬಳಸುವ ಬಿಲ್ವಪತ್ರೆ, ವಿಭೂತಿ, ಹೂವು, ಹಣ್ಣುಗಳ ಖರೀದಿ ಜೋರಾಗಿತ್ತು. ಮಂಕುಕವಿದಂತಿದ್ದ ಮಾರುಕಟ್ಟೆಗಳು ಖರೀದಿಯಿಂದ ಕಳೆಗಟ್ಟಿವೆ.
ಕೆ.ಆರ್.ಮಾರುಕಟ್ಟೆ ಆವರಣದಲ್ಲಿ ಹಬ್ಬಕ್ಕಾಗಿ ತಾತ್ಕಾಲಿಕ ಮಳಿಗೆಗಳು ತಲೆ ಎತ್ತಿವೆ. ಯಶವಂತಪುರ, ಗಾಂಧಿ ಬಜಾರ್, ಮಲ್ಲೇಶ್ವರ, ಬಸವನಗುಡಿ, ಜಯನಗರ, ವಿಜಯನಗರ, ಮಡಿವಾಳ, ಕೆ.ಆರ್.ಪುರ, ಯಲಹಂಕ, ಕೆಂಗೇರಿ ಸೇರಿದಂತೆ ನಗರದ ಪ್ರಮುಖ ಬಡಾವಣೆಗಳಲ್ಲಿಪೂಜಾ ಸಾಮಗ್ರಿಗಳು, ಹೂವು ಮತ್ತು ಹಣ್ಣಿನ ಮಳಿಗೆಗಳನ್ನು ತೆರೆಯಲಾಗಿದೆ.
‘ಬಿಲ್ವಪತ್ರೆ, ಎಕ್ಕದ ಹೂವಿನ ಹಾರ, ತುಳಸಿ, ಸುಗಂಧರಾಜ ಹೂವು ಬಳಕೆ ಹೆಚ್ಚಿರುವುದರಿಂದ ಇವುಗಳಿಗೆ ಬೇಡಿಕೆ ಇರುತ್ತದೆ. ಉಳಿದ ಹೂಗಳ ದರ ಸಾಮಾನ್ಯವಾಗಿರುತ್ತವೆ. ಎರಡು ದಿನ ವ್ಯಾಪಾರ ನೀರಸವಾಗಿತ್ತು. ಮಂಗಳವಾರದ ವೇಳೆಗೆ ಗ್ರಾಹಕರು ಹೆಚ್ಚಾಗುವ ನಿರೀಕ್ಷೆ ಇದೆ’ ಎಂದು ಕೆ.ಆರ್.ಮಾರುಕಟ್ಟೆಯ ಹೂವಿನ ವರ್ತಕ ದಿವಾಕರ್ ಹೇಳಿದರು.
ಹಣ್ಣುಗಳ ವ್ಯಾಪಾರ ಜೋರು: ಹಣ್ಣಿನ ದರಗಳೆಲ್ಲ ತುಸು ಏರಿದೆ. ಹಾಪ್‌ಕಾಮ್ಸ್‌ನಲ್ಲೂ ಶಿವರಾತ್ರಿಗಾಗಿ ದ್ರಾಕ್ಷಿ ಮತ್ತು ಕಲ್ಲಂಗಡಿಯನ್ನು ವಿಶೇಷ ದರದಲ್ಲಿ ಮಾರಾಟ ಮಾಡಲಾಗುತ್ತಿದೆ.
ಮೆಣಸಿನಕಾಯಿ ತುಟ್ಟಿ: ಹಸಿ ಮೆಣಸಿನಕಾಯಿ ದರ ಗಣನೀಯವಾಗಿ ಏರಿದ್ದು, ಕೆ.ಜಿ.ಗೆ ₹80ರಿಂದ ₹125ರವರೆಗೆ ಮಾರಾಟ ಆಗುತ್ತಿದೆ. ದಪ್ಪ ಮೆಣಸಿನಕಾಯಿ ದರವೂ (ಕ್ಯಾಪ್ಸಿಕಂ) ₹80ರಂತೆ ಇದೆ. ‘ಭಾರಿ ಮಳೆಯಿಂದಾಗಿ ಮೆಣಸಿನಕಾಯಿ ಬೆಳೆ ಹಾಳಾಗಿತ್ತು. ನಂತರ ಬೆಳೆದ ಮೆಣಸಿನಕಾಯಿ ಮಾರುಕಟ್ಟೆಗಳಿಗೆ ಪೂರೈಕೆಯಾಗುವುದು ವಿಳಂಬವಾಗಿದೆ. ಹಾಗಾಗಿ, ನಿರಂತರವಾಗಿ ಬೆಲೆ ಏರಿದೆ’ ಎಂದು ಕಲಾಸಿಪಾಳ್ಯ ಸಗಟು ಮಾರುಕಟ್ಟೆಯ ತರಕಾರಿ ವರ್ತಕ ರಮೇಶ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.