ADVERTISEMENT

ಬೆಂಗಳೂರು | ಲೋಕ ಅದಾಲತ್‌: 35 ಲಕ್ಷ ಪ್ರಕರಣ ಇತ್ಯರ್ಥ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2024, 0:00 IST
Last Updated 21 ಸೆಪ್ಟೆಂಬರ್ 2024, 0:00 IST
ನ್ಯಾಯಮೂರ್ತಿಗಳಾದ ಶ್ರೀನಿವಾಸ ಹರೀಶ್‌ ಕುಮಾರ್‌ ಮತ್ತು ವಿ.ಕಾಮೇಶ್ವರ ರಾವ್‌
ನ್ಯಾಯಮೂರ್ತಿಗಳಾದ ಶ್ರೀನಿವಾಸ ಹರೀಶ್‌ ಕುಮಾರ್‌ ಮತ್ತು ವಿ.ಕಾಮೇಶ್ವರ ರಾವ್‌   

ಬೆಂಗಳೂರು: ರಾಜ್ಯದಾದ್ಯಂತ ಇದೇ​ 14ರಂದು ನಡೆದ ರಾಷ್ಟ್ರೀಯ ಲೋಕ ಅದಾಲತ್​ನಲ್ಲಿ ಬಾಕಿಯಿರುವ ಹಾಗೂ ವ್ಯಾಜ್ಯಪೂರ್ವ ಪ್ರಕರಣಗಳೂ ಸೇರಿದಂತೆ ಒಟ್ಟು 35 ಲಕ್ಷಕ್ಕೂ ಹೆಚ್ಚು ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ.

ಈ ವಿಷಯವನ್ನು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಹಕ ಅಧ್ಯಕ್ಷರೂ ಆದ ಹೈಕೋರ್ಟ್‌ನ ಹಿರಿಯ ನ್ಯಾಯಮೂರ್ತಿ ವಿ.ಕಾಮೇಶ್ವರ ರಾವ್​ ಮತ್ತು ಹೈಕೋರ್ಟ್‌ನ ಸಮಿತಿ ಅಧ್ಯಕ್ಷರಾದ ನ್ಯಾಯಮೂರ್ತಿ ಶ್ರೀನಿವಾಸ ಹರೀಶ್‌ ಕುಮಾರ್‌ ಶುಕ್ರವಾರ ಮಾಧ್ಯಮ ಗೋಷ್ಠಿಯಲ್ಲಿ ವಿವರಿಸಿದರು.

‘ಹೈಕೋರ್ಟ್‌ನ ಬೆಂಗಳೂರು, ಧಾರವಾಡ ಮತ್ತು ಕಲಬುರಗಿ ಪೀಠಗಳು, ಜಿಲ್ಲಾ ಮತ್ತು ತಾಲ್ಲೂಕು ನ್ಯಾಯಾಲಯಗಳಲ್ಲಿ ಸ್ಥಾಪಿಸಲಾಗಿದ್ದ 1,008 ಪೀಠಗಳಲ್ಲಿ ಒಟ್ಟು 781 ಹಾಗೂ ಜಿಲ್ಲಾ ನ್ಯಾಯಾಲಯಗಳಲ್ಲಿ ಬಾಕಿ ಇರುವ 2,00,083 ಮತ್ತು ವ್ಯಾಜ್ಯಪೂರ್ವದ 33,84,347 ಪ್ರಕರಣಗಳೂ ಸೇರಿದಂತೆ ಒಟ್ಟು 35,84,430 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಇವುಗಳಲ್ಲಿ ₹2,402 ಕೋಟಿ ಪರಿಹಾರ ಕೊಡಿಸಲಾಗಿದೆ. ವಿಶೇಷವಾಗಿ 1,669 ವೈವಾಹಿಕ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. 248 ದಂಪತಿಗಳು ರಾಜಿ ಸಂದಾನದ ಮೂಲಕ ಪುನಃ ಒಂದಾಗಿದ್ದಾರೆ’ ಎಂದು ತಿಳಿಸಿದರು.  

ADVERTISEMENT

‘2,696 ವಿಭಾಗ ದಾವೆಗಳು, 3,621 ಮೋಟಾರು ವಾಹನ ಅಪರಾಧ ಪರಿಹಾರ, 8,517 ಚೆಕ್​ ಬೌನ್ಸ್, 389 ಎಲ್ಎಸಿ ಅಮಲ್ಜಾರಿ, 623 ಎಂವಿಸಿ ಅಮಲ್ಜಾರಿ ಹಾಗೂ ಇತರೆ 2,598 ಅಮಲ್ಜಾರಿ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಇವುಗಳಲ್ಲಿ ₹108 ಕೋಟಿ ಮೊತ್ತದ ಪರಿಹಾರ ನೀಡಲಾಗಿದೆ. 73 ಗ್ರಾಹಕರ ವ್ಯಾಜ್ಯಗಳನ್ನು ಇತ್ಯರ್ಥಪಡಿಸಲಾಗಿದ್ದು, ₹3.24 ಲಕ್ಷವನ್ನು ಇತ್ಯರ್ಥದ ಮೊತ್ತವಾಗಿ ನೀಡಲಾಗಿದೆ’ ಎಂದರು.

ಆಸ್ತಿ ತೆರಿಗೆ ರಿಯಾಯಿತಿ: ‘ಕರ್ನಾಟಕ ಪುರಸಭೆ ಕಾಯ್ದೆಯ ಕಲಂ 103ರ ಅಡಿಯಲ್ಲಿ ಲೋಕ ಅದಾಲತ್​ನಲ್ಲಿ ರಿಯಾಯಿತಿ ವಿಸ್ತರಣೆ ಮಾಡಿದ ಹಿನ್ನೆಲೆಯಲ್ಲಿ 5,95,892 ಪ್ರಕರಣಗಳಲ್ಲಿ ತೆರಿಗೆ ಪಾವತಿಯಾಗಿದ್ದು ₹653 ಕೋಟಿಯಷ್ಟು ಬೃಹತ್‌ ಮೊತ್ತ ಸರ್ಕಾರದ ಖಜಾನೆಗೆ ಜಮೆಯಾಗಿದೆ’ ಎಂದು ವಿವರಿಸಿದರು.

ವಿಶೇಷ ಪ್ರಕರಣಗಳು

* ರಿಲಯನ್ಸ್​ ಹೋಮ್​ ಫೈನಾನ್ಸ್​ ವಿರುದ್ಧ ಸೈಕಾನ್​ ಕನ್‌ಸ್ಟ್ರಕ್ಷನ್‌​ ಪ್ರೈವೇಟ್​ ಲಿಮಿಟೆಡ್​ ಕಂಪನಿ ಪ್ರಕರಣ ₹20 ಕೋಟಿ ಪರಿಹಾರದೊಂದಿಗೆ ಇತ್ಯರ್ಥ.

* ಅಪರ್ಣಾ ರಾಮಕೃಷ್ಣ ವಿರುದ್ಧದ ರಾಯಲ್​ ಸುಂದರಂ ವಿಮಾ ಕಂಪೆನಿ ಪ್ರಕರಣ ₹3.75 ಕೋಟಿ ಮೊತ್ತಕ್ಕೆ ಇತ್ಯರ್ಥ.

* ನಗರದ ಎಸಿಎಂಎಂ ನ್ಯಾಯಾಲಯದಲ್ಲಿ 26 ವರ್ಷಗಳಿಂದ ಬಾಕಿ ಇದ್ದ ನಂಜಪ್ಪ ವಿರುದ್ಧದ ಅಕ್ರಂ ಪ್ರಕರಣ ಇತ್ಯರ್ಥ.

* 1,365 ಪ್ರಕರಣಗಳಲ್ಲಿ ಹಿರಿಯ ನಾಗರಿಕರು ತಮ್ಮ ವ್ಯಾಜ್ಯಗಳನ್ನು ಇತ್ಯರ್ಥಪಡಿಸಿಕೊಂಡಿದ್ದಾರೆ.

* ಐದು ವರ್ಷಗಳಿಗೂ ಹೆಚ್ಚು ಹಳೆಯದಾದ 1,022, 10 ವರ್ಷಗಳಿಗೂ ಹಳೆಯದಾದ 277 ಮತ್ತು 15 ವರ್ಷಗಳಿಗೂ ಹಳೆಯದಾದ 144 ಪ್ರಕರಣಗಳು ಸೇರಿದಂತೆ 1,443 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ.  

Cut-off box - ಡಿಸೆಂಬರ್ 14ಕ್ಕೆ ಮುಂದಿನ ಅದಾಲತ್ ‘ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ 2024ನೇ ಸಾಲಿನ ನಾಲ್ಕನೇ ಹಾಗೂ ಈ ವರ್ಷದ ಕೊನೆಯ ಲೋಕ ಅದಾಲತ್​ ಅನ್ನು ಡಿಸೆಂಬರ್​ 14ರಂದು ಹಮ್ಮಿಕೊಳ್ಳಲಾಗಿದ್ದು ಈ ಸಂಬಂಧ ಸಾರ್ವಜನಿಕರು ನ್ಯಾಯಾಲಯದಲ್ಲಿ ಬಾಕಿ ಉಳಿದಿರುವ ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳಬಹುದಾಗಿದೆ’ ಎಂದು ನ್ಯಾಯಮೂರ್ತಿಗಳು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.