ADVERTISEMENT

Bangalore–Mysore Expressway| ಎಕ್ಸ್‌ಪ್ರೆಸ್ ಸಮಸ್ಯೆಗಳ ಅಧ್ಯಯನಕ್ಕೆ ತಾಂತ್ರಿಕ ತಂಡ

​ಪ್ರಜಾವಾಣಿ ವಾರ್ತೆ
Published 26 ಜೂನ್ 2023, 23:36 IST
Last Updated 26 ಜೂನ್ 2023, 23:36 IST
   

ಬೆಂಗಳೂರು: ‘ಬೆಂಗಳೂರು– ಮೈಸೂರು ಎಕ್ಸ್‌ಪ್ರೆಸ್‌ ಹೆದ್ದಾರಿಯಲ್ಲಿ ಸಂಭವಿಸುತ್ತಿರುವ ಸರಣಿ ಅಪಘಾತ, ಮೂಲಸೌಲಭ್ಯಗಳ ಕೊರತೆ, ಸರ್ವೀಸ್‌ ರಸ್ತೆಯಲ್ಲಿ ನೀರು ಸಂಗ್ರಹ ಸೇರಿ ವಿವಿಧ ಸಮಸ್ಯೆಗಳ ಅಧ್ಯಯನಕ್ಕೆ ತಾಂತ್ರಿಕ ತಂಡ ರಚಿಸಲಿದ್ದು, ಈ ತಂಡ  ಸಮಗ್ರ ಅಧ್ಯಯನ ನಡೆಸಿ ವರದಿ ಸಲ್ಲಿಸಲಿದೆ’ ಎಂದು ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ತಿಳಿಸಿದರು.

ವಿಧಾನಸೌಧದಲ್ಲಿ ಸೋಮವಾರ ನಡೆದ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

‘ಶ್ರೀರಂಗಪಟ್ಟಣ, ಮಂಡ್ಯ, ಮದ್ದೂರು ಸೇರಿದಂತೆ ಹೆದ್ದಾರಿಯಲ್ಲಿ ಸಿಗುವ ನಗರ, ಪಟ್ಟಣಗಳಿಗೆ ಪ್ರವೇಶ ಮತ್ತು ನಿರ್ಗಮನ ಪಥಗಳು ನಿರ್ಮಾಣಗೊಳ್ಳಬೇಕಿದೆ. ಸಾರ್ವಜನಿಕರ ದೂರುಗಳನ್ನು ಆಧರಿಸಿ ತಾಂತ್ರಿಕ ತಂಡ ಸಮಗ್ರ ಅಧ್ಯಯನ ನಡೆಸಲಿದೆ‘ ಎಂದರು.

ADVERTISEMENT

‘ಅಪಘಾತಗಳ ಹೆಚ್ಚಳಕ್ಕೆ ಕಾರಣಗಳೇನು, ಸ್ಥಳಗಳಾವುವು, ಮಳೆ ನೀರು ರಸ್ತೆಯಲ್ಲಿ ನಿಲ್ಲಲು ಕಾರಣವೇನು, ಪ್ರಾಧಿಕಾರದ ಅಧಿಕಾರಿಗಳು ಯಾವ ಕ್ರಮ ಕೈಗೊಂಡಿದ್ದಾರೆ ಎಂಬ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಾಗಿದೆ’ ಎಂದರು.

‘ಎಕ್ಸ್‌ಪ್ರೆಸ್‌ ಕಾಮಗಾರಿ ಆರಂಭವಾದಾಗ ಅಧಿಕೃತ ಒಪ್ಪಂದದಲ್ಲಿ ಯಾವ ವಿಷಯಗಳು ಇದ್ದವು ಎಂಬ ಬಗ್ಗೆ ಸ್ಪಷ್ಟತೆ ಬೇಕಾಗಿದೆ. ಒಪ್ಪಂದದ ನಿಯಮಗಳನ್ನು ಪಾಲಿಸಲಾಗಿದೆಯೇ ಎಂದು ತಿಳಿಯಬೇಕಿದೆ. ಕಾಮಗಾರಿ ಸಂಪೂರ್ಣಗೊಳ್ಳದೇ ಏಕೆ ಟೋಲ್ ಸಂಗ್ರಹ ಮಾಡಲಾಗುತ್ತಿದೆ ಎಂಬ ಬಗ್ಗೆ ಸ್ಪಷ್ಟತೆ ಬೇಕಾಗಿದೆ. ಈ ಎಲ್ಲಾ ವಿಚಾರ ಕುರಿತು ತಾಂತ್ರಿಕ ತಂಡ ಅಧ್ಯಯನ ಮಾಡಲಿದೆ’ ಎಂದರು.

ಸಂಸದೆ ಸುಮಲತಾ, ಶಾಸಕರಾದ ಪಿ.ಎಂ.ನರೇಂದ್ರಸ್ವಾಮಿ, ರಮೇಶ್‌ ಬಂಡಿಸಿದ್ದೇಗೌಡ, ದಿನೇಶ್ ಗೂಳಿಗೌಡ, ಮಧು ಮಾದೇಗೌಡ, ರವಿಕುಮಾರ್ ಗಣಿಗ, ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ್‌, ಹೆದ್ದಾರಿ ಪ್ರಾಧಿಕಾರ, ದಿಲೀಪ್‌ ಬಿಲ್ಡ್‌ಕಾನ್‌ ಲಿಮಿಟೆಡ್‌ ಅಧಿಕಾರಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.