ADVERTISEMENT

Bangalore Mysore Expressway Toll| ಗಣಂಗೂರಿನಲ್ಲಿ ಜುಲೈ 1ರಿಂದ ‘ಟೋಲ್’ ಹೊರೆ

​ಪ್ರಜಾವಾಣಿ ವಾರ್ತೆ
Published 28 ಜೂನ್ 2023, 23:40 IST
Last Updated 28 ಜೂನ್ 2023, 23:40 IST
ಶ್ರೀರಂಗಪಟ್ಟಣ ತಾಲ್ಲೂಕು ಗಣಂಗೂರು ಟೋಲ್‌ ಕೇಂದ್ರದ ನೋಟ
ಪ್ರಜಾವಾಣಿ ಚಿತ್ರ: ಧನುಷ್‌ ಡಿ.ವಿ
ಶ್ರೀರಂಗಪಟ್ಟಣ ತಾಲ್ಲೂಕು ಗಣಂಗೂರು ಟೋಲ್‌ ಕೇಂದ್ರದ ನೋಟ ಪ್ರಜಾವಾಣಿ ಚಿತ್ರ: ಧನುಷ್‌ ಡಿ.ವಿ   

ಮಂಡ್ಯ: ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ ವೇ 2ನೇ ಹಂತದ ಟೋಲ್‌ ಸಂಗ್ರಹ ಶ್ರೀರಂಗಪಟ್ಟಣ ತಾಲ್ಲೂಕಿನ ಗಣಂಗೂರು ಟೋಲ್‌ ಕೇಂದ್ರದಲ್ಲಿ ಜುಲೈ 1ರಂದು ಆರಂಭವಾಗಲಿದೆ.

ಬೆಂಗಳೂರಿನಿಂದ ಮದ್ದೂರು ತಾಲ್ಲೂಕು ನಿಡಘಟ್ಟವರೆಗೆ ಈಗಾಗಲೇ ಮೊದಲ ಹಂತದ ಟೋಲ್‌ ಸಂಗ್ರಹಿಸಲಾಗುತ್ತಿದೆ. ನಿಡಘಟ್ಟದಿಂದ ಮೈಸೂರುವರೆಗೆ ಕಾಮಗಾರಿ ಅಪೂರ್ಣವಾಗಿದ್ದರಿಂದ ಟೋಲ್‌ ಸಂಗ್ರಹಿಸುತ್ತಿರಲಿಲ್ಲ. ನಿಡಘಟ್ಟದಿಂದ ಮೈಸೂರು ಪ್ರವೇಶಿಸುವ ಮಣಿಪಾಲ್‌ ಆಸ್ಪತ್ರೆವರೆಗೆ 60 ಕಿ.ಮೀ ಅಂತರವಿದ್ದು, ಗಣಂಗೂರು ಟೋಲ್‌ನಲ್ಲಿ ಶುಲ್ಕ ಸಂಗ್ರಹ ಆರಂಭಗೊಳ್ಳಲಿದೆ. ಈ ಬಗ್ಗೆ ಹೆದ್ದಾರಿ ಪ್ರಾಧಿಕಾರ ಪ್ರಕಟಣೆ ಹೊರಡಿಸಿದೆ.

ಕೇಂದ್ರದಲ್ಲಿ ಸ್ವಚ್ಛತೆ, ದೀಪಗಳ ಅಳವಡಿಕೆ ಮೊದಲಾದ ಕೆಲಸಗಳಲ್ಲಿ ಸಿಬ್ಬಂದಿ ತೊಡಗಿದ್ದಾರೆ.

ADVERTISEMENT

ಬೆಂಗಳೂರಿನಿಂದ ಮೈಸೂರು ಕಡೆಗೆ ಪ್ರಯಾಣಿಸುವವರು ಬೆಂಗಳೂರು ನಗರ ಜಿಲ್ಲೆಯ ಕಣಮಿಣಕಿ ಗ್ರಾಮದ ಬಳಿಯ ಟೋಲ್‌ನಲ್ಲಿ ಶುಲ್ಕ ಪಾವತಿಸಬೇಕು. ಅದು ನಿಡಘಟ್ಟದವರೆಗೂ ಅನ್ವಯವಾಗುತ್ತದೆ. ನಿಡಘಟ್ಟದಿಂದ ಹೊಸ ಟೋಲ್‌ ಆರಂಭಗೊಳ್ಳಲಿದ್ದು, ಗಣಂಗೂರು ಟೋಲ್‌ನಲ್ಲಿ ಶುಲ್ಕ ಪಾವತಿಸಿಸಬೇಕು, ಅದು ಮೈಸೂರು ಪ್ರವೇಶದವರೆಗೂ ಅನ್ವಯವಾಗಲಿದೆ.

ಕಾಮಗಾರಿ ಅಪೂರ್ಣ: ಆರು ಪಥದ ಪ್ರಮುಖ ರಸ್ತೆ ಕಾಮಗಾರಿ ಪೂರ್ಣಗೊಂಡಿದ್ದು, ಎರಡೂ ಕಡೆ ಸರ್ವೀಸ್‌ ರಸ್ತೆ ಇನ್ನೂ ಪೂರ್ಣಗೊಂಡಿಲ್ಲ. ಚರಂಡಿ, ಕೆಳ ಸೇತುವೆಗಳಲ್ಲಿ ಮೂಲ ಸೌಲಭ್ಯ ಒದಗಿಸಿಲ್ಲ.

ಈ ಹಿನ್ನೆಲೆಯಲ್ಲಿ ಈಚೆಗೆ ಬೆಂಗಳೂರಿನಲ್ಲಿ ಸಭೆ ನಡೆಸಿದ್ದ ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ, ‘ಸರ್ವೀಸ್‌ ರಸ್ತೆ ಕಾಮಗಾರಿ ಪೂರ್ಣಗೊಳ್ಳುವವರೆಗೂ ಟೋಲ್‌ ಸಂಗ್ರಹಿಸಬಾರದು’ ಎಂದು ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಿದ್ದರು. ಆದರೆ, ಪ್ರಾಧಿಕಾರದ ಅಧಿಕಾರಿಗಳು ಟೋಲ್‌ ಸಂಗ್ರಹದ ದಿನಾಂಕ ಹಾಗೂ ಶುಲ್ಕ ವಿವರ ಪ್ರಕಟಿಸಿದ್ದಾರೆ.

‘ಎಕ್ಸ್‌ಪ್ರೆಸ್‌ ವೇಯಲ್ಲಿ ಕನಿಷ್ಠ ಸೌಲಭ್ಯಗಳಿಲ್ಲ, ವೇಗ ನಿಯಂತ್ರಣ ವ್ಯವಸ್ಥೆ ಇಲ್ಲ, ಸರ್ವೀಸ್‌ ರಸ್ತೆ ಕಾಮಗಾರಿ ಪೂರ್ಣಗೊಂಡಿಲ್ಲ. ಹೀಗಾಗಿ ಈಗಲೇ ಟೋಲ್‌ ಸಂಗ್ರಹಿಸುವುದು ಬೇಡ ಎಂದು ನಾನು ಅಧಿಕಾರಿಗಳಿಗೆ ಸೂಚಿಸಿದ್ದೆ. ಆದರೆ, ಕೇಂದ್ರ ಸರ್ಕಾರದ ಸೂಚನೆಯಂತೆ ಟೋಲ್‌ ಸಂಗ್ರಹ ಆರಂಭಿಸುತ್ತಿರುವುದಾಗಿ ಜಿಲ್ಲಾಧಿಕಾರಿ, ಎಸ್ಪಿಗೆ ಮಾಹಿತಿ ಬಂದಿದೆ’ ಎಂದು ಸಚಿವ ಎನ್‌.ಚಲುವರಾಯಸ್ವಾಮಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಅಧಿಕೃತ ಪ್ರಕಟಣೆಯ ಅನ್ವಯ ಜುಲೈ 1ರಿಂದ ಟೋಲ್ ಸಂಗ್ರಹ ಆರಂಭವಾಗಲಿದೆ. ಯಾವುದೇ ಬದಲಾವಣೆ ಇಲ್ಲ
ರಾಹುಲ್ ಗುಪ್ತಾ ಯೋಜನಾ ನಿರ್ದೇಶಕ ಹೆದ್ದಾರಿ ಪ್ರಾಧಿಕಾರ

ಟೋಲ್‌ ಬಳಿ ಪ್ರತಿಭಟನೆ

ಮಂಡ್ಯ: ‘ಎಕ್ಸ್‌ಪ್ರೆಸ್‌ ವೇಯಲ್ಲಿ ಮೂಲ ಸೌಲಭ್ಯಗಳಿಲ್ಲ ಆಗಮನ ನಿರ್ಗಮನ ಪಥವಿಲ್ಲ. ಆದರೂ ದುಬಾರಿ ಟೋಲ್‌ ನಿಗದಿಪಡಿಸಿದ್ದಾರೆ. ಹೆದ್ದಾರಿಯಲ್ಲೇ ಬರಲಿ ಎಂಬ ಉದ್ದೇಶದಿಂದ ಸರ್ವೀಸ್‌ ರಸ್ತೆ ಕಾಮಗಾರಿ ಮುಗಿಸಿಲ್ಲ. ಕಾಮಗಾರಿ ಪೂರ್ಣಗೊಳ್ಳುವವರೆಗೆ ಸೌಲಭ್ಯ ನೀಡುವವರೆಗೆ ಟೋಲ್‌ ಸಂಗ್ರಹ ಆರಂಭಿಸದಂತೆ ಆಗ್ರಹಿಸಿ ಜುಲೈ 1ರಂದು ಟೋಲ್‌ ಕೇಂದ್ರದ ಬಳಿ ಪ್ರತಿಭಟಿಸುತ್ತೇವೆ’ ಎಂದು ಕರುನಾಡು ಸೇವಕರು ಸಂಘಟನೆ ಮುಖಂಡ ಎಂ.ಬಿ.ನಾಗಣ್ಣಗೌಡ ತಿಳಿಸಿದರು.

ಈಗಾಗಲೇ ಶುರುವಾಗಬೇಕಿತ್ತು: ಪ್ರತಾಪ

ಮೈಸೂರು: ‘‌ಗಣಂಗೂರು ಟೋಲ್‌ನಲ್ಲಿ ಟೋಲ್ ಸಂಗ್ರಹ ಈಗಾಗಲೇ ಆರಂಭವಾಗಬೇಕಿತ್ತು ಕೆಲವು ಸಮಸ್ಯೆಗಳಿದ್ದಿದ್ದರಿಂದ ಹಾಗೂ ಕೆಲವೆಡೆ ಕಾಮಗಾರಿ ಪೂರ್ಣಗೊಂಡಿಲ್ಲದಿದ್ದರಿಂದ ನಾನೇ ತಡೆದಿದ್ದೆ. ಈಗ ಪ್ರಾಧಿಕಾರದವರು ಪ್ರಸ್ತಾಪಿಸಿದ್ದಾರೆ ಅದನ್ನು ಪರಿಶೀಲಿಸಿ ಪ್ರತಿಕ್ರಿಯಿಸುವೆ’ ಎಂದು ಸಂಸದ ಪ್ರತಾಪ ಸಿಂಹ ತಿಳಿಸಿದರು. ಇಲ್ಲಿ ಪತ್ರಕರ್ತರೊಂದಿಗೆ ಬುಧವಾರ ಮಾತನಾಡಿದ ಅವರು ‘ಸಿದ್ದಲಿಂಗಪುರದ ಸಮೀಪ ಫ್ಲೈಓವರ್‌ ಕಾಮಗಾರಿ ಮುಗಿದಿಲ್ಲ ಮೂಲಸೌಕರ್ಯಗಳನ್ನು ಕಲ್ಪಿಸಬೇಕಿದೆ ಅದಕ್ಕೆ 8–10 ತಿಂಗಳು ಬೇಕಾಗುತ್ತದೆ’ ಎಂದರು. ‘ಹೊಸದಾಗಿ ₹ 480 ಕೋಟಿ ವೆಚ್ಚದಲ್ಲಿ ಭೂಸ್ವಾಧೀನ ಮಾಡಿಕೊಳ್ಳಲಾಗುತ್ತಿದೆ. ₹ 1200 ಕೋಟಿ ವೆಚ್ಚದಲ್ಲಿ ಪ್ರವೇಶ– ನಿರ್ಗಮನ ವಿಶ್ರಾಂತಿ ಪ್ರದೇಶ ಫ್ಲೈಓವರ್‌ ಅಂಡರ್‌ಪಾಸ್‌ ನಿರ್ಮಿಸಲಾಗುವುದು’ ಎಂದು ಮಾಹಿತಿ ನೀಡಿದರು.  ‘ಎಕ್ಸ್‌ಪ್ರೆಸ್‌ ವೇ ಸಂಚಾರಕ್ಕಿರುವ ರಸ್ತೆಯಷ್ಟೇ. ರೇಸಿಂಗ್‌ ಟ್ರ್ಯಾಕ್‌ ಅಲ್ಲ. ವಾಹನಗಳನ್ನು 80 ಕಿ.ಮೀ ಬದಲು 120 ಕಿ.ಮೀ  ವೇಗದಲ್ಲಿ ಓಡಿಸಿದರೆ ಅಪಘಾತ ಸಂಭವಿಸುವುದಿಲ್ಲವೇ?’ ಎಂದು ಕೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.