ADVERTISEMENT

ಬದಲಾದ ಡಿವಿಎಸ್‌ ನಿಲುವು; ಹಲವರ ಒಲವು

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ಬಿಜೆಪಿ ಭದ್ರಕೋಟೆ ವಶಕ್ಕೆ ’ಕೈ‘ ಹವಣಿಕೆ

​ಪ್ರಜಾವಾಣಿ ವಾರ್ತೆ
Published 16 ಜನವರಿ 2024, 22:34 IST
Last Updated 16 ಜನವರಿ 2024, 22:34 IST
ಡಿ.ವಿ.ಸದಾನಂದಗೌಡ
ಡಿ.ವಿ.ಸದಾನಂದಗೌಡ   

ಬೆಂಗಳೂರು: ಚುನಾವಣಾ ರಾಜಕೀಯದಿಂದ ನೇಪಥ್ಯಕ್ಕೆ ಸರಿಯುವುದಾಗಿ ಘೋಷಿಸಿದ್ದ ಹಾಲಿ ಸಂಸದ ಡಿ.ವಿ. ಸದಾನಂದ ಗೌಡರ ಬದಲಾದ ನಿಲುವು, ಬಿಜೆಪಿ– ಜೆಡಿಎಸ್‌ ಮೈತ್ರಿ, ಬಿಜೆಪಿ ಭದ್ರಕೋಟೆಯನ್ನು ಈ ಬಾರಿಯಾದರೂ ವಶಕ್ಕೆ ಪಡೆಯಬೇಕೆಂಬ ಕಾಂಗ್ರೆಸ್‌ ಲೆಕ್ಕಾಚಾರಗಳು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಕಣ ಚಿತ್ರಣವನ್ನೇ ಬದಲಿಸಿದೆ.

ಒಕ್ಕಲಿಗ ಮತದಾರರು ನಿರ್ಣಾಯಕ ಸಂಖ್ಯೆಯಲ್ಲಿರುವ ಈ ಕ್ಷೇತ್ರದಿಂದ ಆ ಸಮುದಾಯದ ಅಭ್ಯರ್ಥಿಗೆ ಪಕ್ಷಗಳು ಮಣೆ ಹಾಕುವುದು ನಿಶ್ಚಿತ. ಯಾರನ್ನು ಕಣಕ್ಕಿಳಿಸಬೇಕೆಂದು ಬಿಜೆಪಿ– ಜೆಡಿಎಸ್‌ ಮೈತ್ರಿಕೂಟ ಮತ್ತು ಕಾಂಗ್ರೆಸ್‌ ಇನ್ನೂ ನಿರ್ಧರಿಸಿಲ್ಲ. ಆದರೆ, ರಾಜಕೀಯ ಪಡಸಾಲೆಯಲ್ಲಿ ನಾನಾ ಲೆಕ್ಕಾಚಾರಗಳು, ಸಮೀಕರಣಗಳು ನಡೆಯುತ್ತಿವೆ.

ರಾಜ್ಯದ ಕೆಲವು ಬಿಜೆಪಿ ಸಂಸದರಿಗೆ ಈ ಬಾರಿ ಟಿಕೆಟ್‌ ಇಲ್ಲ ಎಂಬ ಮಾತು ಕೆಲವು ತಿಂಗಳುಗಳ ಹಿಂದೆ ಚಾಲ್ತಿಯಲ್ಲಿತ್ತು. ಆಗ ಬೇಸರಗೊಂಡಿದ್ದ ಸದಾನಂದಗೌಡರು ದೆಹಲಿಗೆ ದೌಡಾಯಿಸಿದ್ದರು. ಆದರೆ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಭೇಟಿಗೆ ಸಿಕ್ಕಿರಲಿಲ್ಲ. ಮರಳಿ ಬಂದ ಅವರು, ಇನ್ನು ಮುಂದೆ ಚುನಾವಣೆಗೆ ಸ್ಪರ್ಧಿಸುವುದಿಲ್ಲವೆಂದು ಪ್ರಕಟಿಸಿದ್ದರು. ಆ ಬೆನ್ನಿಗೆ, ‘ಉತ್ತರ’ಕ್ಕೆ ಬಿಜೆಪಿಯಿಂದ ಉಡುಪಿ– ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಮತ್ತು ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡಿರುವ ಸಿ.ಟಿ. ರವಿ ಹೆಸರು ಮುನ್ನೆಲೆಗೆ ಬಂದಿತ್ತು. ಈ ವದಂತಿ ರೆಕ್ಕೆಪುಕ್ಕ ಪಡೆಯುತ್ತಿದ್ದಂತೆ ಮತ್ತೆ ಅಖಾಡಕ್ಕಿಳಿಯುವ ಇಂಗಿತ ವ್ಯಕ್ತಪಡಿಸಿರುವ ಗೌಡರು ಅಚ್ಚರಿ ಮೂಡಿಸಿದ್ದಾರೆ.

ADVERTISEMENT

ಕರಂದ್ಲಾಜೆ, ರವಿ ಹೆಸರು ಕೇಳಿ ಎಚ್ಚೆತ್ತುಕೊಂಡ ಕೆಲ ಬಿಜೆಪಿ ನಾಯಕರು ಗೌಡರ ಮನಪರಿವರ್ತನೆಗೆ ಮುಂದಾದುದು ಬಿಜೆಪಿಯ ಒಳ ‘ರಾಜಕಾರಣ’ವನ್ನು ಬಯಲು ಮಾಡಿದೆ. ಶಾಸಕರಾದ ಆರ್‌. ಅಶೋಕ, ಬಸವರಾಜ ಬೊಮ್ಮಾಯಿ‌, ಡಾ. ಸಿ.ಎನ್. ಅಶ್ವತ್ಥನಾರಾಯಣ, ದಾಸರಹಳ್ಳಿ ಮುನಿರಾಜು ಸೇರಿದಂತೆ ಕೆಲವರು, ‘ನೀವೇ ಸ್ಪರ್ಧಿಸಿ’ ಎಂದು ಸದಾನಂದಗೌಡರಿಗೆ ದುಂಬಾಲು ಬಿದ್ದಿದ್ದರು. ಈ ಮಾತನ್ನು ಅವರೇ ಹೇಳಿಕೊಂಡಿದ್ದಾರೆ. ‘ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಎಲ್ಲರೂ ಒತ್ತಾಯಿಸುತ್ತಿದ್ದಾರೆ. ಈ ಒತ್ತಡ ಮೀರಿ ನಿಲ್ಲುವಲ್ಲಿ ಯಶಸ್ವಿ ಆಗುತ್ತೇನೆಂದು ಸದ್ಯಕ್ಕೆ ಹೇಳುವುದಕ್ಕೆ ಆಗುವುದಿಲ್ಲ‌’ ಎಂದು ಹೇಳುವ ಮೂಲಕ ಮತ್ತೊಮ್ಮೆ ಕಣಕ್ಕಿಳಿಯುವ ಬಯಕೆಯನ್ನು ಗೌಡರು ಪರೋಕ್ಷವಾಗಿ ವ್ಯಕ್ತಪಡಿಸಿದ್ದಾರೆ. 

ಉಡುಪಿ- ಚಿಕ್ಕಮಗಳೂರು ಕ್ಷೇತ್ರಕ್ಕೆ ವಲಸೆ ಹೋಗುವುದಕ್ಕೂ ಮೊದಲು ಶೋಭಾ, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಯಶವಂತಪುರ ವಿಧಾನಸಭಾ ಕ್ಷೇತ್ರವನ್ನು ಒಂದು ಅವಧಿಗೆ (2008–2013) ಪ್ರತಿನಿಧಿಸಿದ್ದರು. ಶೋಭಾ ಅವರನ್ನು ಕಣಕ್ಕಿಳಿಸಿದರೆ ಸಮರ್ಥ ಅಭ್ಯರ್ಥಿಯೊಬ್ಬರನ್ನು ಕಣಕ್ಕಿಳಿಸುವ ಜೊತೆಗೆ, ಉಡುಪಿ- ಚಿಕ್ಕಮಗಳೂರು ಕ್ಷೇತ್ರ ಮುಕ್ತವಾಗುತ್ತದೆ. ಆ ಕ್ಷೇತ್ರಕ್ಕೆ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದ್ದು, ಮತ್ತೊಬ್ಬರಿಗೆ ಅವಕಾಶ ಮಾಡಿಕೊಡುವ ಚಿಂತನೆಯಲ್ಲಿ ಬಿಜೆಪಿ ವರಿಷ್ಠರಿದ್ದಾರೆ ಎಂಬ ಮಾತೂ ಇದೆ. ಸಿ.ಟಿ. ರವಿ ಈ ಕ್ಷೇತ್ರದ ಪ್ರಬಲ ಆಕಾಂಕ್ಷಿಗಳಲ್ಲಿ ಒಬ್ಬರು.

ಬಿಜೆಪಿ - ಜೆಡಿಎಸ್ ಮೈತ್ರಿ ಪಕ್ಕಾ ಆಗಿರುವುದರಿಂದ ಮಂಡ್ಯ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟು ಕೊಡಬೇಕಾದ ಅನಿವಾರ್ಯ ಬಿಜೆಪಿಗೆ ಎದುರಾಗಲಿದೆ. ಆಗ ಮಂಡ್ಯದ ಹಾಲಿ ಸಂಸದೆ, ಬಿಜೆಪಿ ಸಖ್ಯದಲ್ಲಿರುವ ಸುಮಲತಾ ಅಂಬರೀಷ್ ಅವರಿಗೆ ಕ್ಷೇತ್ರ ಇಲ್ಲವಾಗುತ್ತದೆ. ಅವರಿಗೆ ‘ಸುರಕ್ಷಿತ’ ಕ್ಷೇತ್ರ ಎಂದರೆ ಬೆಂಗಳೂರು ಉತ್ತರ ಒಂದೇ. ‘ನಾನು ಮಂಡ್ಯದ ಸೊಸೆ. ಕ್ಷೇತ್ರವನ್ನು ತೊರೆಯುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಬೆಂಗಳೂರಿನತ್ತ ಹೋಗುವುದಿಲ್ಲ’ ಎಂದು ಸುಮಲತಾ  ಹೇಳಿದ್ದಾರೆ. ಸುಮಲತಾ ಅವರನ್ನು ಮನವೊಲಿಸಿ ಕಣಕ್ಕಿಳಿಸಲು ಬಿಜೆಪಿ ಮುಂದಾಗಬಹುದೇ? ಅವರು ಬೆಂಗಳೂರು ಉತ್ತರಕ್ಕೆ ಬರಬಹುದೇ? ಎಂಬ ಕುತೂಹಲವೂ ಇದೆ. ಬಿಜೆಪಿ ಕಾನೂನು ಪ್ರಕೋಷ್ಠದ ಅಧ್ಯಕ್ಷ ವಿವೇಕ್‌ ರೆಡ್ಡಿ ಕೂಡಾ ತಾವು ಆಕಾಂಕ್ಷಿ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಅಲ್ಲದೆ, ಸಾಮಾಜಿಕ ಮಾಧ್ಯಮಗಳ ಮೂಲಕ ಈಗಾಗಲೇ ಜನಸಂಪರ್ಕ ಆರಂಭಿಸಿದ್ದಾರೆ.

ಕಾಂಗ್ರೆಸ್‌ನಿಂದ ಕುಸುಮಾ ಹನುಮಂತರಾಯಪ್ಪ ಹೆಸರು ಪ್ರಮುಖವಾಗಿದೆ. ವಿಧಾನಸಭೆ ಚುನಾವಣೆಯಲ್ಲಿ ಆರ್‌.ಆರ್‌. ನಗರ ಕ್ಷೇತ್ರದಲ್ಲಿ ಎರಡು ಬಾರಿ ಸೋಲುಕಂಡಿರುವ ಅವರು, ‘ನಾನು ಆಕಾಂಕ್ಷಿಯಲ್ಲ’ ಎಂದು ಹೇಳಿಕೊಂಡಿದ್ದಾರೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿ.ಕೆ. ಸುರೇಶ್ ಅವರಿಗೆ ಬೆಂಗಳೂರು ಉತ್ತರದ ಟಿಕೆಟ್‌ ನೀಡಿ ಇಲ್ಲಿನ ಪರಿಸ್ಥಿತಿ ಅವಲೋಕಿಸಿದ್ದಾರೆ. ಹಾಗಾದಲ್ಲಿ, ಗ್ರಾಮಾಂತರ ಕ್ಷೇತ್ರದಿಂದ ಕುಸುಮಾ ಅವರನ್ನು ಕಣಕ್ಕಿಳಿಸುವ ಬಗ್ಗೆಯೂ ಕಾಂಗ್ರೆಸ್‌ನಲ್ಲಿ ಚರ್ಚೆ ನಡೆಯುತ್ತಿದೆ. ಈ ಮಧ್ಯೆ, ಯಶವಂತಪುರ ಬಿಜೆಪಿ ಶಾಸಕ ಎಸ್.​ಟಿ. ಸೋಮಶೇಖರ್ ಅವರನ್ನು ಪಕ್ಷಕ್ಕೆ ಸೆಳೆಯಲು ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ. 

ಬಿಜೆಪಿ–ಕಾಂಗ್ರೆಸ್‌ ಸಮಬಲ

ಹಾಗೆ ನೋಡಿದರೆ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಸಮಬಲ ಹೊಂದಿದೆ. ಎಂಟು ವಿಧಾನಸಭಾ ಕ್ಷೇತ್ರಗಳಿರುವ ಈ ಕ್ಷೇತ್ರದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ 5ರಲ್ಲಿ ಬಿಜೆಪಿ 3ರಲ್ಲಿ ಕಾಂಗ್ರೆಸ್‌ ಗೆದ್ದಿದೆ. ಒಕ್ಕಲಿಗ ಮತಗಳೇ ದೊಡ್ಡ ಶಕ್ತಿಯಾಗಿರುವ ಕ್ಷೇತ್ರದಲ್ಲಿ ಡಿ.ಕೆ. ಶಿವಕುಮಾರ್‌ ಪರ ಮತಗಳ ಕ್ರೋಡೀಕರಣ ಎಸ್‌.ಟಿ. ಸೋಮಶೇಖರ್‌ ಬೆಂಬಲಿಗರ ಬೆಂಬಲ ‘ಗ್ಯಾರಂಟಿ’ ಯೋಜನೆಗಳ ಜನಪ್ರಿಯತೆ ‘ಕೈ’ ಹಿಡಿದರೆ ಕುಸುಮಾ ಅಥವಾ ಡಿ.ಕೆ. ಸುರೇಶ್‌ ಗೆಲುವಿನ ದಡ ದಾಟಬಹುದೆಂಬ ಲೆಕ್ಕಾಚಾರ ಕಾಂಗ್ರೆಸ್‌ನವರದ್ದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.