ADVERTISEMENT

ಬೆಂಗಳೂರು ದಕ್ಷಿಣ ಕ್ಷೇತ್ರ: ‘ಕಮಲ‘ದ ಓಟಕ್ಕೆ ಕಾಂಗ್ರೆಸ್‌ ತಡೆ ಒಡ್ಡಬಲ್ಲದೇ?

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2024, 20:44 IST
Last Updated 2 ಏಪ್ರಿಲ್ 2024, 20:44 IST
   

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಸಂಸದ ತೇಜಸ್ವಿ ಸೂರ್ಯ ಎದುರಿಗೆ ಕಾಂಗ್ರೆಸ್‌ ಈ ಬಾರಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಪುತ್ರಿ ಸೌಮ್ಯಾರೆಡ್ಡಿಯವರನ್ನು ಕಣಕ್ಕೆ ಇಳಿಸಿದೆ. ಬಿಜೆಪಿಯ ಭದ್ರಕೋಟೆ ಎನಿಸಿರುವ ಈ ಕ್ಷೇತ್ರದಲ್ಲಿ ಮೂರು ದಶಕಗಳಿಂದ ಬಿಜೆಪಿ ಅಭ್ಯರ್ಥಿಗಳು ನಿರಂತರವಾಗಿ ಗೆಲುವು ಸಾಧಿಸುತ್ತಲೇ ಬಂದಿದ್ದಾರೆ.  ಬಿಜೆಪಿಯ ಗೆಲುವಿನ ಓಟಕ್ಕೆ ಸೌಮ್ಯಾರೆಡ್ಡಿ ತಡೆ ಒಡ್ಡುವರೇ ಎಂಬುದು ನಿಗೂಢ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೌಮ್ಯಾ ಅವರು ಜಯನಗರ ವಿಧಾನಸಭಾ ಕ್ಷೇತ್ರದಿಂದ ಅತಿ ಕಡಿಮೆ ಮತಗಳ ಅಂತರದಿಂದ ಸೋತಿದ್ದರು. ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಅನಂತ್‌ಕುಮಾರ್ ಅವರ ನಿಧನದಿಂದಾಗಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್‌ ಗಿಟ್ಟಿಸಿದ ತೇಜಸ್ವಿ ಸೂರ್ಯ ಅವರು ಕ್ಷೇತ್ರದಲ್ಲಿ ಸಾಕಷ್ಟು ಜನಪ್ರಿಯತೆ ಹೊಂದಿದ್ದಾರೆ. ಇಬ್ಬರೂ ಅಭ್ಯರ್ಥಿಗಳಿಗೂ ಸ್ವಪಕ್ಷೀಯರ ಬಂಡಾಯದ ಕಾಟವಿಲ್ಲ. ಕಳೆದ ಬಾರಿ ಕಾಂಗ್ರೆಸ್‌ನ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್‌ ಅವರನ್ನು ಮಣಿಸಿದ್ದ ತೇಜಸ್ವಿಗೆ ಸೌಮ್ಯಾ ಈ ಬಾರಿ ತುರುಸಿನ ಪೈಪೋಟಿ ನೀಡಲಿದ್ದಾರೆ. ತೇಜಸ್ವಿಗೆ ಬಿಜೆಪಿಯ ಭದ್ರ ನೆಲೆ ಜತೆಗೆ, ದೇವೇಗೌಡರ ಬೆಂಬಲವೂ ಸಿಕ್ಕಿದೆ. ಕ್ಷೇತ್ರದಲ್ಲಿ ತಮ್ಮದೇ ಆದ ಪ್ರಭಾವ ಹೊಂದಿರುವ ರಾಮಲಿಂಗಾರೆಡ್ಡಿ ಅವರ ಜತೆ, ಆರ್.ವಿ. ದೇವರಾಜ್‌, ಎಂ. ಕೃಷ್ಣಪ್ಪ ಕೈಜೋಡಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT