ಬೆಂಗಳೂರು: ಸತತ ಆರು ಚುನಾವಣೆಗಳಲ್ಲಿ ಕಮಲದ ‘ಕೈ’ ಹಿಡಿದಿರುವ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ತೇಜಸ್ವಿನಿ ಅನಂತಕುಮಾರ್ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದ್ದು, ಕಾಂಗ್ರೆಸ್ ಹುರಿಯಾಳು ಯಾರು ಎಂಬುದು ಸದ್ಯಕ್ಕೆ ನಿಗೂಢವಾಗಿದೆ.
ಮಂಡ್ಯ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಸಿಗದೇ ಇದ್ದರೆ ಪಕ್ಷೇತರರಾಗಿ ಸ್ಪರ್ಧಿಸಲು ತಯಾರಿ ನಡೆಸುತ್ತಿರುವ ಸುಮಲತಾ (ನಟ, ರಾಜಕಾರಣಿ ಅಂಬರೀಷ್ ಪತ್ನಿ) ಅವರನ್ನು ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ಕರೆತರುವ ಯತ್ನವನ್ನು ಕಾಂಗ್ರೆಸ್ ನಾಯಕರು ನಡೆಸಿದ್ದಾರೆ. ಇದರ ಹೊಣೆಯನ್ನು ಚಿತ್ರ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಹಾಗೂ ಶಾಸಕ, ನಿರ್ಮಾಪಕ ಮುನಿರತ್ನ ಹೆಗಲಿಗೆ ವಹಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಹೀಗಾಗಿ, ಬೆಂಗಳೂರು ಕೇಂದ್ರದಷ್ಟೇ ದಕ್ಷಿಣ ಕ್ಷೇತ್ರ ಕೂಡ ರಾಜಕೀಯ ಜಿದ್ದಾಜಿದ್ದಿಯ ಕಣವಾಗುವತ್ತ ಸಾಗಿದೆ.
ಬಿಜೆಪಿಯ ಹಿರಿಯ ನಾಯಕ ಎಚ್.ಎನ್. ಅನಂತಕುಮಾರ್ ಅವರು 1996ರಿಂದ ಸತತವಾಗಿ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಆರು ಸಲ ಗೆದ್ದಿದ್ದರು. 2014ರ ಚುನಾವಣೆಯಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ದಿಗ್ಗಜ ನಂದನ್ ನಿಲೇಕಣಿ ಅವರನ್ನು 2 ಲಕ್ಷಕ್ಕೂ ಅಧಿಕ ಮತಗಳಿಂದ ವಿಜಯಿಯಾಗಿದ್ದರು. ಅವರು 2018ರ ನವೆಂಬರ್‌ನಲ್ಲಿ
ನಿಧನರಾಗಿದ್ದರು.
‘ಅನಂತಕುಮಾರ್ ಪತ್ನಿ ತೇಜಸ್ವಿನಿ ಅವರೇ ದಕ್ಷಿಣಕ್ಕೆ ಉತ್ತರಾಧಿಕಾರಿಯಾಗಬೇಕು. ಈ ಚುನಾವಣೆಯಲ್ಲಿ ಕಣಕ್ಕೆ ಇಳಿಯಬೇಕು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಂಬಲ ವ್ಯಕ್ತಪಡಿಸಿದ್ದರು. ಅನುಕಂಪದ ಅಲೆಯ ಆಧಾರದಲ್ಲಿ ಸುಲಭದಲ್ಲಿ ಗೆಲುವಿನ ದಡ ಮುಟ್ಟಬಹುದು ಎಂಬುದು ಕಮಲ ಪಡೆಯ ಲೆಕ್ಕಾಚಾರ. ತೇಜಸ್ವಿನಿ ಅವರು ಆರಂಭದಲ್ಲಿ ಸ್ಪರ್ಧೆಗೆ ಒಲವು ತೋರಿರಲಿಲ್ಲ . ಬಿಜೆಪಿ ನಾಯಕರ ಮನವೊಲಿಕೆಗೆ ಮಣಿದು ಒಪ್ಪಿಗೆ ಸೂಚಿಸಿದ್ದರು. ಬಿಜೆಪಿಯಿಂದ ಅವರು ಅಭ್ಯರ್ಥಿಯಾಗುವುದು ಈಗ ಬಹುತೇಕ ನಿಶ್ಚಿತ.
ಅನಂತಕುಮಾರ್ ಅವರ ಗರಡಿಯಲ್ಲಿ ಬೆಳೆದ ಶಾಸಕ ಆರ್. ಅಶೋಕ ಅವರು ತೇಜಸ್ವಿನಿ ಪರ ಒಲವು ಹೊಂದಿಲ್ಲ. ಐಟಿ ದಿಗ್ಗಜರಾದ ನಂದನ್ ನಿಲೇಕಣಿ ಅಥವಾ ಟಿ.ವಿ.ಮೋಹನದಾಸ ಪೈ ಅವರನ್ನು ಕಣಕ್ಕೆ ಇಳಿಸಬೇಕು ಎಂಬುದು ಅವರ ಒತ್ತಾಯ. ಈ ವಿಷಯವನ್ನು ಆರ್‌ಎಸ್‌ಎಸ್ ನಾಯಕರ ಗಮನಕ್ಕೆ ತಂದಿದ್ದಾರೆ. ಬಸವನಗುಡಿ ಶಾಸಕ ಎಲ್.ರವಿಸುಬ್ರಹ್ಮಣ್ಯ ಅಥವಾ ತೇಜಸ್ವಿ ಸೂರ್ಯ ಅವರಿಗೆ ಟಿಕೆಟ್ ನೀಡಬೇಕು ಎಂಬ ವಾದವೂ ಇದೆ. ಜತೆಗೆ, ಸುಮಲತಾ ಅಂಬರೀಷ್ ಅವರನ್ನು ಬಿಜೆಪಿಗೆ ಕರೆತಂದು ಮಂಡ್ಯ ಅಥವಾ ಬೆಂಗಳೂರು ದಕ್ಷಿಣದಲ್ಲಿ ಕಣಕ್ಕೆ ಇಳಿಸಬೇಕು ಎಂಬ ತೇಜಸ್ವಿನಿ ವಿರೋಧಿ ಬಣದವರು ಹರಿಯಬಿಟ್ಟಿದ್ದಾರೆ
ದಕ್ಷಿಣ ಕ್ಷೇತ್ರದ ವ್ಯಾಪ್ತಿಯ ಎಂಟು ಕ್ಷೇತ್ರಗಳ ಪೈಕಿ ಜಯನಗರ, ಬಿಟಿಎಂ ಬಡಾವಣೆ ಹಾಗೂ ವಿಜಯನಗರದಲ್ಲಿ ಕಾಂಗ್ರೆಸ್ ಶಾಸಕರಿದ್ದರೆ, ಬಸವನಗುಡಿ,ಗೋವಿಂದರಾಜನಗರ, ಚಿಕ್ಕಪೇಟೆ, ಪದ್ಮನಾಭನಗರ ಹಾಗೂ ಬೊಮ್ಮನಹಳ್ಳಿಗಳಲ್ಲಿ ಬಿಜೆಪಿ ಶಾಸಕರಿದ್ದಾರೆ.
ಕಾಂಗ್ರೆಸ್‌ನಿಂದ ಗೋವಿಂದರಾಜನಗರ ಕ್ಷೇತ್ರದ ಮಾಜಿ ಶಾಸಕ ಪ್ರಿಯಕೃಷ್ಣ ಅವರನ್ನು ಕಣಕ್ಕೆ ಇಳಿಸಲು ರಾಜ್ಯ ನಾಯಕರು ಉತ್ಸುಕ
ರಾಗಿದ್ದರು. ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಿದ್ದರು. ಆದರೆ, ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ. ಪ್ರಿಯಕೃಷ್ಣ ತಂದೆ ವಿಜಯನಗರದ ಶಾಸಕರೂ ಆಗಿರುವ ಎಂ.ಕೃಷ್ಣಪ್ಪ ಅವರು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನು ಮಂಗಳವಾರ ಭೇಟಿಯಾಗಿ ಸಮಾಲೋಚನೆ ನಡೆಸಿದರು. ‘ಇದೊಂದು ಸೌಹಾರ್ದಯುತ ಭೇಟಿಯಾಗಿತ್ತು. ಈಗಲೇ ಅವರು ನಿಲ್ಲುತ್ತಾರೆ, ಇವರು ನಿಲ್ಲುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ’ ಎಂದು ದಿನೇಶ್ ಮಾರ್ಮಿಕವಾಗಿ ನುಡಿದರು.
‘ಬಿಟಿಎಂ ಬಡಾವಣೆಯ ಹಿರಿಯ ಶಾಸಕ ರಾಮಲಿಂಗಾ ರೆಡ್ಡಿ ಸ್ಪರ್ಧಿಸಿದರೆ ಗೆಲುವು ಖಚಿತ. ಅವರನ್ನೇ ಹುರಿಯಾಳು
ವನ್ನಾಗಿ ಮಾಡಬೇಕು’ ಎಂದು ಪಕ್ಷದ ಕೆಲವು ನಾಯಕರ ಹಕ್ಕೊತ್ತಾಯ. ಇದನ್ನು ರೆಡ್ಡಿ ನಯವಾಗಿ
ನಿರಾಕರಿಸಿದ್ದಾರೆ.
ಮಂಡ್ಯ ಜೆಡಿಎಸ್‌ಗೆ?
ಮಂಡ್ಯವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟು ಸುಮಲತಾ ಅವರನ್ನು ಬೆಂಗಳೂರು ದಕ್ಷಿಣದಿಂದ ಕಣಕ್ಕೆ ಇಳಿಸುವ ಲೆಕ್ಕಾಚಾರ ಕಾಂಗ್ರೆಸ್‌ನಲ್ಲಿ ಶುರುವಾಗಿದೆ.
‘ಸುಮಲತಾ ಅವರು ಮಂಡ್ಯ ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ನೋಡಿಕೊಳ್ಳುತ್ತೇವೆ. ನೀವು ನಿಖಿಲ್ ಕುಮಾರಸ್ವಾಮಿ ಅಥವಾ ಬೇರೆ ಯಾರನ್ನಾದರೂ ನಿಲ್ಲಿಸಿಕೊಳ್ಳಿ. ಆದರೆ, ಸುಮಲತಾ ಗೆಲ್ಲಿಸಲು ‘ಮುಕ್ತ ಮನಸ್ಸಿ’ನಿಂದ ಕೆಲಸ ಮಾಡಬೇಕು’ ಎಂಬ ಷರತ್ತನ್ನು ದೇವೇಗೌಡರ ಮುಂದೆ ಮಂಡಿಸಲು ಕಾಂಗ್ರೆಸ್ ನಾಯಕರು ಚಿಂತನೆ ನಡೆಸಿದ್ದಾರೆ. ಒಕ್ಕಲಿಗ ಮತಗಳ ಜತೆಗೆ ಗೌಡರ ಆಶೀರ್ವಾದ ಸಿಕ್ಕಿದರೆ ಸುಮಲತಾ ಗೆಲುವು ಸಲೀಸು ಎಂಬುದು ಇದರ ಹಿಂದಿನ ತರ್ಕ ಎನ್ನಲಾಗುತ್ತಿದೆ.
ತೇಜಸ್ವಿನಿ ಅವರಿಗೆ ಇರುವಂತೆ ಸುಮಲತಾ ಅವರಿಗೂ ಅನುಕಂಪದ ಬಲ ಕೈಹಿಡಿಯಲಿದೆ. ಕನ್ನಡ ಚಿತ್ರರಂಗವೂ ಜತೆಗೆ ನಿಲ್ಲಲಿದೆ ಎಂಬ ವಾದವೂ ನಡೆಯುತ್ತಿದೆ.
ರಾಜರಾಜೇಶ್ವರಿನಗರ ಕ್ಷೇತ್ರದ ಶಾಸಕ ಮುನಿರತ್ನ ಹಾಗೂ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಅವರು ತಮ್ಮ ಸಮುದಾಯದವರೊಬ್ಬರು ಸಂಸದರಾಗಿ ಆಯ್ಕೆಯಾಗಬೇಕು ಎಂಬ ಬೇಡಿಕೆ ಮುಂದಿಟ್ಟು ಕೆಲಸ ಮಾಡಲು ಶುರು ಮಾಡಿದ್ದಾರೆ. ದಕ್ಷಿಣ ಕ್ಷೇತ್ರದಲ್ಲಿ ಸುಮಲತಾ ಅಭ್ಯರ್ಥಿಯಾದರೆ ಈ ಎಲ್ಲವೂ ನೆರವಿಗೆ ಬರಲಿವೆ ಎಂಬುದು ಕೈ ನಾಯಕರ ಅಂದಾಜು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.