ADVERTISEMENT

ಬೆಂಗಳೂರು–ವಿಜಯಪುರ: ರೈಲು ಪ್ರಯಾಣದ ಅವಧಿ ಇಳಿಕೆಗೆ ಕ್ರಮ: ಎಂ.ಬಿ. ಪಾಟೀಲ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2024, 16:12 IST
Last Updated 15 ಮಾರ್ಚ್ 2024, 16:12 IST
<div class="paragraphs"><p> ಎಂ.ಬಿ. ಪಾಟೀಲ</p></div>

ಎಂ.ಬಿ. ಪಾಟೀಲ

   

ಬೆಂಗಳೂರು: ಬೆಂಗಳೂರು–ವಿಜಯಪುರ–ಬಾಗಲಕೋಟೆ ರೈಲು ಪ್ರಯಾಣದ ಸಮಯ ನಾಲ್ಕು ಗಂಟೆಗಳಷ್ಟು ಕಡಿಮೆ ಮಾಡಲು ರೈಲ್ವೆ ಇಲಾಖೆ ಸಮ್ಮತಿಸಿದೆ ಎಂದು ಕೈಗಾರಿಕೆ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ ಹೇಳಿದರು.

ಮೂಲಸೌಕರ್ಯ ಅಭಿವೃದ್ಧಿ ಇಲಾಖೆ, ನೈರುತ್ಯ ರೈಲ್ವೆ ಅಧಿಕಾರಿಗಳ ಜತೆ ಶುಕ್ರವಾರ ನಡೆಸಿದ ಸಭೆಯ ನಂತರ ಅವರು ಮಾತನಾಡಿದರು.

ADVERTISEMENT

ಬೆಂಗಳೂರಿನಿಂದ ವಿಜಯಪುರ, ಬಾಗಲಕೋಟೆ ನಡುವಿನ 660 ಕಿ.ಮೀ. ಪ್ರಯಾಣಕ್ಕೆ 14 ಗಂಟೆ ವ್ಯಯವಾಗುತ್ತಿದೆ. ಹುಬ್ಬಳ್ಳಿ ನಿಲ್ದಾಣ ಹಾಗೂ ಗದಗದಲ್ಲಿ ಸಮಯ ವ್ಯರ್ಥವಾಗುತ್ತಿದೆ. ಅದನ್ನು ತಪ್ಪಿಸಿ, 10 ಗಂಟೆಗಳಿಗೆ ಇಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಮನವರಿಕೆ ಮಾಡಲಾಗಿದೆ. ವಿಶೇಷ ರೈಲುಗಳ ಸಂಚಾರ ಹಾಗೂ ವಿದ್ಯುದೀಕರಣ ಕಾಮಗಾರಿ ಪೂರ್ಣಗೊಂಡರೆ ವಂದೇ ಭಾರತ್‌ ಎಕ್ಸಪ್ರೆಸ್‌ ರೈಲು ಸೇವೆ ಆರಂಭಿಸಲು ಪ್ರಸ್ತಾವ ಸಲ್ಲಿಸಲಾಗುವುದು ಎಂದರು.

ಮಂದಗತಿಯಲ್ಲಿ ಸಾಗುತ್ತಿರುವ ರಾಜ್ಯದ ಒಂಬತ್ತು ರೈಲ್ವೆ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಇಲ್ಲದಿದ್ದರೆ ವೆಚ್ಚದಲ್ಲಿ ಏರಿಕೆಯಾಗುತ್ತದೆ. ಈಗಾಗಲೇ ಬೆಂಗಳೂರು-ಹುಬ್ಬಳ್ಳಿ-ಬಾಗಲಕೋಟೆ ನಡುವೆ ದ್ವಿಪಥ ಮಾರ್ಗ ಇದೆ. ಬಾಗಲಕೋಟೆ-ವಿಜಯಪುರ ಮಧ್ಯೆ ಆಲಮಟ್ಟಿಯವರೆಗೂ ದ್ವಿಪಥ ಕಾಮಗಾರಿ ಮುಗಿಯುವ ಹಂತಕ್ಕೆ ಬಂದಿದೆ ಎಂದು ಹೇಳಿದರು.

ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಕಾರ್ಯದರ್ಶಿ ಎನ್.ಮಂಜುಳಾ, ರಾಜ್ಯ ಕೈಗಾರಿಕಾ ಮೂಲಸೌಕರ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಸತೀಶ, ನೈರುತ್ಯ ರೈಲ್ವೆ ಮುಖ್ಯ ಆಡಳಿತಾಧಿಕಾರಿ ರಾಮಗೋಪಾಲ್‌, ಯೋಜನಾ ವಿಭಾಗದ ಮುಖ್ಯ ಎಂಜಿನಿಯರ್‌ ಮೂರ್ತಿ ರಾಜು, ಕೈಗಾರಿಕಾ ಸಚಿವರ ತಾಂತ್ರಿಕ ಸಲಹೆಗಾರ ಅರವಿಂದ ಗಲಗಲಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.