ನವದೆಹಲಿ: ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಕ್ಲರ್ಕ್ ಹುದ್ದೆಯ ನೇಮಕಾತಿ ಪರೀಕ್ಷೆ ಯನ್ನು ಕನ್ನಡವೂ ಸೇರಿದಂತೆ 13 ಪ್ರಾದೇಶಿಕ ಭಾಷೆಗಳಲ್ಲಿ ಆಯೋ ಜಿಸಲು ಕೇಂದ್ರದ ಹಣಕಾಸು ಸಚಿವಾಲಯ ಒಪ್ಪಿಗೆ ಸೂಚಿಸಿದೆ.
ಇದುವರೆಗೆ ಇಂಗ್ಲಿಷ್ ಮತ್ತುಹಿಂದಿ ಭಾಷೆಯಲ್ಲಿ ಮಾತ್ರ ಆಯೋಜಿಸಲಾಗುತ್ತಿದ್ದ ಈ ಹುದ್ದೆಗಳ ನೇಮಕಾತಿ ಪರೀಕ್ಷೆಯನ್ನು, ಪ್ರಾದೇಶಿಕ ಭಾಷೆಗಳಲ್ಲಿ ಆಯೋಜಿಸುವಂತೆ ಅನೇಕ ವರ್ಷಗಳಿಂದ ಬೇಡಿಕೆ ಇತ್ತು.
ಈ ಕುರಿತ ಪರಿಶೀಲನೆಗೆ ರಚಿಸಲಾಗಿದ್ದ ಸಮಿತಿಯು ಅಧ್ಯಯನ ನಡೆಸಿ ಸಲ್ಲಿಸಿರುವ ಶಿಫಾರಸ್ಸನ್ನು ಆಧರಿಸಿ ಪ್ರಾದೇಶಿಕ ಭಾಷೆಗಳಲ್ಲೂ ಪರೀಕ್ಷೆ ನಡೆಸುವಂತೆ ಬ್ಯಾಂಕಿಂಗ್ ಸಿಬ್ಬಂದಿ ನೇಮಕಾತಿ ಸಂಸ್ಥೆ (ಐಬಿಪಿಎಸ್)ಗೆ ಹಣಕಾಸು ಸಚಿವಾಲಯ ಸೂಚಿಸಿದೆ.
ಸ್ಥಳೀಯ ಯುವಜನತೆಗೆ ಬ್ಯಾಂಕಿಂಗ್ ವಲಯದ ಉದ್ಯೋಗದಲ್ಲಿ ಏಕರೂಪದ ಅವಕಾಶ ಒದಗಿಸಲು ಪ್ರಾದೇಶಿಕ ಭಾಷೆಯಲ್ಲೇ ನೇಮಕಾತಿ ಪರೀಕ್ಷೆ ಆಯೋಜಿಸುವುದು ಸೂಕ್ತ. ಸ್ಥಳೀಯರೇ ಉದ್ಯೋಗ ಪಡೆದಲ್ಲಿ ಬ್ಯಾಂಕ್‌ನ ಗ್ರಾಹಕರೊಂದಿಗೆ ವ್ಯವ ಹರಿಸುವುದೂ ಸುಲಭ ಎಂದೂ ಸಮಿತಿ ಶಿಫಾರಸು ಮಾಡಿತ್ತು.
ವಿವಿಧ 12 ಬ್ಯಾಂಕ್‌ಗಳಲ್ಲಿನ ಕ್ಲರ್ಕ್ ಹುದ್ದೆಗಳ ನೇಮಕಾತಿಗಾಗಿ ಸಮಿತಿಯು ಐಬಿಪಿಎಸ್ ಹೊರಡಿಸಿದ್ದ ಅಧಿಸೂಚನೆಗೆ, ಪರಿಶೀಲನೆ ನಡೆಸಿ ವರದಿ ಸಲ್ಲಿಸುವವರೆಗೆ ತಾತ್ಕಾಲಿಕ ತಡೆ ನೀಡಲಾಗಿತ್ತು. ಇದೀಗ ನೇಮಕಾತಿ ಪ್ರಕ್ರಿಯೆ ಮುಂದುವರಿಸಲು ಸಚಿವಾಲಯ ಸಮ್ಮತಿ ಸೂಚಿಸಿದೆ.
ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ)ನ ಕ್ಲರ್ಕ್ ಹುದ್ದೆಗಳ ನೇಮಕಾತಿಗೂ ಈ ಆದೇಶ ಅನ್ವಯವಾಗಲಿದೆ. ಈಗಾಗಲೇ ಪೂರ್ವಭಾವಿ ಪರೀಕ್ಷೆ ಆಯೋಜಿಸಿ ಅಂತಿಮ ಹಂತದಲ್ಲಿರುವ ಎಸ್‌ಬಿಐನ ನೇಮಕಾತಿ ಪ್ರಕ್ರಿಯೆಯು ಈ ಹಿಂದಿನ ಅಧಿಸೂಚನೆಯಂತೆಯೇ ಪೂರ್ಣಗೊಳ್ಳಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.