ADVERTISEMENT

₹ 6 ಕೋಟಿ ಮೌಲ್ಯದ ಮಾದಕದ್ರವ್ಯ MDMA ವಶ; ನೈಜೀರಿಯಾ ಪ್ರಜೆ ಬಂಧನ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2024, 13:48 IST
Last Updated 7 ಅಕ್ಟೋಬರ್ 2024, 13:48 IST
<div class="paragraphs"><p>ಬೆಂಗಳೂರಿನ ದೊಮ್ಮಸಂದ್ರದ ಸ್ವಾಮಿ ವಿವೇಕಾನಂದ ನಗರದ ಗೋವಿಂದರೆಡ್ಡಿ ಬಡಾವಣೆಯ ಸೂಲಿಕುಂಟೆಯ ಬಾಡಿಗೆ ಮನೆಯಲ್ಲಿ ಪತ್ತೆಯಾದ ನಿಷೇಧಿತ ಎಂಡಿಎಂಎನ್‌ ಹಾಗೂ ಪೀಟರ್ ಐಕೆಡಿ ಬೆಲನೋವು</p></div>

ಬೆಂಗಳೂರಿನ ದೊಮ್ಮಸಂದ್ರದ ಸ್ವಾಮಿ ವಿವೇಕಾನಂದ ನಗರದ ಗೋವಿಂದರೆಡ್ಡಿ ಬಡಾವಣೆಯ ಸೂಲಿಕುಂಟೆಯ ಬಾಡಿಗೆ ಮನೆಯಲ್ಲಿ ಪತ್ತೆಯಾದ ನಿಷೇಧಿತ ಎಂಡಿಎಂಎನ್‌ ಹಾಗೂ ಪೀಟರ್ ಐಕೆಡಿ ಬೆಲನೋವು

   

ಮಂಗಳೂರು: ನಿಷೇಧಿತ ಮಾದಕ ವಸ್ತುಗಳನ್ನು ಪೂರೈಸುತ್ತಿದ್ದ ನೈಜೀರಿಯಾ ಪ್ರಜೆಯನ್ನು ಇಲ್ಲಿನ ಸಿಸಿಬಿ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದು, ಆತನಿಂದ 6 ಕಿಲೋ 310 ಗ್ರಾಂ ಮೀಥೈಲೀನ್‌ ಡಯಾಕ್ಸಿ ಮೆಥಾಂಫೆಟಮೈನ್‌ (ಎಂಡಿಎಂಎ) ವಶಪಡಿಸಿಕೊಂಡಿದ್ದಾರೆ.

ಈ ಕುರಿತು ಇಲ್ಲಿ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾಹಿತಿ ನೀಡಿದ ನಗರ ಪೊಲೀಸ್‌ ಕಮಿಷನರ್‌ ಅನುಪಮ್ ಅಗರ್ವಾಲ್‌, ‘ನೈಜೀರಿಯಾದ ಎನುಗು ಪ್ರಾಂತ್ಯದ ಪೀಟರ್ ಐಕೆಡಿ ಬೆಲನೋವು (38) ಬಂಧಿತ ಆರೋಪಿ. ಬೆಂಗಳೂರಿನ ದೊಮ್ಮಸಂದ್ರದ ಸ್ವಾಮಿ ವಿವೇಕಾನಂದ ನಗರದ ಗೋವಿಂದರೆಡ್ಡಿ ಬಡಾವಣೆಯ ಸೂಲಿಕುಂಟೆಯ ಬಾಡಿಗೆ ಮನೆಯಲ್ಲಿ ಆತ ವಾಸವಿದ್ದ. ಆತನಿಂದ ವಶಪಡಿಸಿಕೊಂಡ ಎಂಡಿಎಂಎಯ ಅಂದಾಜು ಮೌಲ್ಯ ₹ 6 ಕೋಟಿ’ ಎಂದರು.

ADVERTISEMENT

‘ಡ್ರಗ್‌ ವ್ಯಸನಮುಕ್ತ ಮಂಗಳೂರು ನಿರ್ಮಿಸುವ ಉದ್ದೇಶದಿಂದ ಮಾದಕ ದ್ರವ್ಯವನ್ನು ನಗರಕ್ಕೆ ಪೂರೈಸುವವರ ಮೇಲೆ ನಿಗಾ ಇಟ್ಟಿದ್ದೆವು. ನಗರದ ಪಂಪ್‌ವೆಲ್‌ನ ಲಾಡ್ಜ್‌ನಲ್ಲಿ ಮಾದಕ ದ್ರವ್ಯ ಮಾರಾಟದಲ್ಲಿ ತೊಡಗಿದ್ದ ಆರೋಪಿ ಹೈದರ್‌ ಅಲಿ (51) ಎಂಬಾತನನ್ನು ಸೆ. 29ರಂದು ಬಂಧಿಸಿದ್ದೆವು. ತೊಕ್ಕೊಟ್ಟು ಚೆಂಬುಗುಡ್ಡೆ ನಿವಾಸಿಯಾದ ಆತನಿಂದ ಸುಮಾರು ₹ 75 ಸಾವಿರ ಮೌಲ್ಯದ 15 ಗ್ರಾಂ ಎಂಡಿಎಂಎ ವಶಕ್ಕೆ ಪಡೆಯಲಾಗಿತ್ತು. ಬೆಂಗಳೂರಿನಲ್ಲಿ ನೆಲೆಸಿರುವ ಪೀಟರ್‌ನಿಂದ ಆತ ಎಂಡಿಎಂಎಯನ್ನು ಖರೀದಿಸಿದ್ದ. ಸಿಸಿಬಿ ಪೊಲೀಸರ ತಂಡವು ಬೆಂಗಳೂರಿಗೆ ತೆರಳಿ ಪೀಟರ್‌ನ ವಾಸವಿದ್ದ ಬಾಡಿಗೆ ಮನೆಯಲ್ಲಿ ತಪಾಸಣೆ ನಡೆಸಿತ್ತು. ಅಲ್ಲಿ ಎಂಡಿಎಂಎಯ ಜೊತೆಗೆ 3 ಮೊಬೈಲ್ ಫೋನುಗಳು, ಡಿಜಿಟಲ್ ತೂಕ ಮಾಪಕ ಹಾಗೂ ಬೇರೆ ಬೇರೆ ಹೆಸರಿನಲ್ಲಿದ್ದ 35 ಡೆಬಿಟ್ (ಎಟಿಎಂ) ಕಾರ್ಡ್‌ಗಳು, ನಿಷ್ಕ್ರಿಯಗೊಂಡಿದ್ದ 17 ಸಿಮ್ ಕಾರ್ಡ್ ಗಳು, ಬೇರೆ ಬೇರೆ ಬ್ಯಾಂಕ್‌ಗಳ 10 ಖಾತೆ ಪುಸ್ತಕಗಳು ಸಿಕ್ಕಿದ್ದವು’ ಎಂದು ಮಾಹಿತಿ ನೀಡಿದರು.

‘ಬೆಂಗಳೂರಿನ ವಿದ್ಯಾರಣ್ಯಾಪುರ ಠಾಣೆಯಲ್ಲಿ 2023ರಲ್ಲಿ ದಾಖಲಾಗಿದ್ದ ಮಾದಕ ವಸ್ತು ಮಾರಾಟ ಪ್ರಕರಣದಲ್ಲೂ ಪೀಟರ್ ಆರೋಪಿ. ಆತ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ನಗರಗಳಿಗೆ, ಕೇರಳದ ಕೆಲವು ನಗರಗಳಿಗೆ ನಿಷೇಧಿತ ಮಾದಕ ವಸ್ತುಗಳನ್ನು ಪೂರೈಸುತ್ತಿದ್ದ. ಈ ಮಾದಕ ವಸ್ತು ಮಾರಾಟ ದಂಧೆಯಲ್ಲಿ ಹಲವರು ಭಾಗಿಯಾಗಿರುವ ಸುಳಿವು ಸಿಕ್ಕಿದೆ. ಅವರ ಪತ್ತೆ ಕಾರ್ಯ ಮುಂದುವರಿದಿದೆ’ ಎಂದರು.

‘ಡಿಸಿಪಿ (ಕಾನೂನು ಸುವ್ಯವಸ್ಥೆ) ಸಿದ್ಧಾರ್ಥ ಗೋಯಲ್‌, ಡಿಸಿಪಿ (ಅಪರಾಧ) ಬಿ.ಪಿ.ದಿನೇಶ್‌ ಕುಮಾರ್‌ ಮಾರ್ಗದರ್ಶನದಲ್ಲಿ, ಸಿಸಿಬಿ ಎಸಿಪಿ ಮನೋಜ್ ಕುಮಾರ್ ನಾಯ್ಕ್ ನೇತೃತ್ವದಲ್ಲಿ ಸಿಸಿಬಿ ಇನ್‌ಸ್ಪೆಕ್ಟರ್‌ ಶ್ಯಾಮಸುಂದರ್ ಎಚ್.ಎಂ, ಪಿಎಸ್ಐ ಸುದೀಪ್ ಎಂ.ವಿ, ಶರಣಪ್ಪ ಭಂಡಾರಿ, ನರೇಂದ್ರ, ಎಎಸ್ಐಗಳಾದ ಮೋಹನ್ ಕೆ.ವಿ, ರಾಮ ಪೂಜಾರಿ, ಶೀನಪ್ಪ, ಸುಜನ್ ಶೆಟ್ಟಿ ಮತ್ತು ಸಿಬ್ಬಂದಿ ಈ ಪತ್ತೆಕಾರ್ಯದಲ್ಲಿ ಭಾಗವಹಿಸಿದ್ದಾರೆ’ ಎಂದರು.

ಡಿಜಿಪಿ ಅಲೋಕ್ ಮೋಹನ್‌ ಹಾಗೂ ನಗರ ಪೊಲೀಸ್‌ ಕಮಿಷನರ್‌ ಅವರು ಸಿಸಿಬಿ ತಂಡಕ್ಕೆ ತಲಾ ₹ 1 ಲಕ್ಷ ನಗದು ಬಹುಮಾನವನ್ನು ಘೋಷಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.