ಬೆಂಗಳೂರು: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ (ಬಿಎನ್‌ಪಿ) ಸುತ್ತಲಿನ ‘ಪರಿಸರ ಸೂಕ್ಷ್ಮ ವಲಯ’ದ (ಇಎಸ್‌ಝಡ್) ವ್ಯಾಪ್ತಿಯನ್ನು ಕಡಿಮೆ ಮಾಡುವ ಪ್ರಸ್ತಾಪವನ್ನು ಕೇಂದ್ರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಕೈಬಿಡಲಿದೆಯೇ?
ಕೇಂದ್ರ ಸಚಿವಾಲಯವು ಈ ವರ್ಷದ ಆ.20ರಂದು ರಾಜ್ಯ ಸರ್ಕಾರಕ್ಕೆ ಬರೆದಿರುವ ಪತ್ರವೊಂದು ಇಂತಹದ್ದೊಂದು ಸುಳಿವು ನೀಡಿದೆ. ಇಎಸ್‌ಜೆಡ್ ವ್ಯಾಪ್ತಿಯನ್ನು ಮೂಲ ಪ್ರಸ್ತಾವನೆಯಲ್ಲಿರುವಷ್ಟೇ ಉಳಿಸಿಕೊಳ್ಳಬೇಕು ಎಂದು ಸಚಿವಾಲಯದ ನಿರ್ದೇಶಕ ಡಾ.ಸುಬ್ರತಾ ಬೋಸ್ ಈ ಪತ್ರದಲ್ಲಿ ಕೋರಿದ್ದಾರೆ.
ಪರಿಸರ ಇಎಸ್‌ಜೆಡ್ ಪ್ರಮಾಣವನ್ನು ಈ ಹಿಂದಿನಷ್ಟೇ ಉಳಿಸಿಕೊಳ್ಳಲು ಹೋರಾಟ ನಡೆಸುತ್ತಿರುವ ಪರಿಸರ ಕಾರ್ಯಕರ್ತರಲ್ಲಿ ಈ ಬೆಳವಣಿಗೆ ಹೊಸ ಭರವಸೆಯನ್ನು ಮೂಡಿಸಿದೆ.
ಸಚಿವಾಲಯವು 2016ರಲ್ಲಿ ಹೊರಡಿಸಲಾಗಿದ್ದ ಕರಡು ಅಧಿಸೂಚನೆ ಪ್ರಕಾರ, ಇಎಸ್‌ಝಡ್ ವ್ಯಾಪ್ತಿಯನ್ನು 268.96 ಚದರ ಕಿ.ಮೀ. ಎಂದು ಗುರುತಿಸಲಾಗಿತ್ತು. ಆದರೆ, ಈ ಕುರಿತ ಅಂತಿಮ ಅಧಿಸೂಚನೆ ಪ್ರಕಟವಾಗದ ಕಾರಣ ಇಎಸ್‌ಜೆಡ್ ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದಿರಲಿಲ್ಲ. ಬಳಿಕ ರಾಜ್ಯ ಸರ್ಕಾರವು ಇಎಸ್‌ಜೆಡ್ ವ್ಯಾಪ್ತಿಯನ್ನು 181.57 ಕಿ.ಮೀಗೆ ಕಡಿತಗೊಳಿಸುವಂತೆ ಕೇಂದ್ರ ಸಚಿವಾಲಯಕ್ಕೆ ಕೋರಿಕೆ ಸಲ್ಲಿಸಿತ್ತು.
ಬಳಿಕ ಕೇಂದ್ರ ಸಚಿವಾಲಯವು ಇಎಸ್‌ಝಡ್ ವ್ಯಾಪ್ತಿಯನ್ನು 168.84 ಚದರ ಕಿ.ಮೀ.ಗೆ ಕಡಿತಗೊಳಿಸಲು 2018ರ ನವೆಂಬರ್ 2ರಂದು ಹೊಸದಾಗಿ ಕರಡು ಅಧಿಸೂಚನೆ ಪ್ರಕಟಿಸಿತ್ತು. ಇದು ಜಾರಿಯಾಗಿದ್ದೇ ಆದರೆ, ರಾಷ್ಟ್ರೀಯ ಉದ್ಯಾನದ ಸಂರಕ್ಷಿತ ಪ್ರದೇಶಕ್ಕೆ ತಾಗಿಕೊಂಡಿರುವ ಗ್ರಾಮಗಳಲ್ಲಿ ಕನಿಷ್ಠ 100 ಮೀಟರ್‌ಗಳಿಂದ ಗರಿಷ್ಠ 1 ಕಿ.ಮೀ ವ್ಯಾಪ್ತಿಯಷ್ಟು ಪರಿಸರ ಸೂಕ್ಷ್ಮ ಪ್ರದೇಶ ಮಾತ್ರ ಉಳಿದುಕೊಳ್ಳುತ್ತಿತ್ತು.
ಇಎಸ್‌ಜೆಡ್ ವ್ಯಾಪ್ತಿಯನ್ನುಕಡಿತಗೊಳಿಸುವ ಪ್ರಸ್ತಾವಕ್ಕೆ ಪರಿಸರ ಕಾರ್ಯಕರ್ತರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಈ ಪ್ರಸ್ತಾವವನ್ನು ವಿರೋಧಿಸಿ ‘ಯುನೈಟೆಡ್ ಬೆಂಗಳೂರು’ ಸಂಘಟನೆಯು ಆನ್‌ಲೈನ್ ಸಹಿ ಸಂಗ್ರಹ ಅಭಿಯಾನ ಹಮ್ಮಿಕೊಂಡಿತ್ತು. ಇದಕ್ಕೆ ಸಹಮತ ವ್ಯಕ್ತಪಡಿಸಿ 1 ಲಕ್ಷಕ್ಕೂ ಅಧಿಕ ಮಂದಿ ಸಹಿ ಹಾಕಿದ್ದರು.
ಇದಕ್ಕೆ ಪ್ರತಿಯಾಗಿರಾಜ್ಯದ ಅರಣ್ಯ ಇಲಾಖೆಯ ಅಧಿಕಾರಿಗಳು, ‘ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ಆಸುಪಾಸಿನಲ್ಲಿ ದಟ್ಟವಾದ ಜನವಸತಿ ಇರುವುದರಿಂದ ಇಎಸ್‌ಜೆಡ್ ವ್ಯಾಪ್ತಿಯನ್ನು ವಿಸ್ತರಣೆ ಮಾಡುವುದು ಸೂಕ್ತವಲ್ಲ’ ಎಂಬ ಅಭಿಪ್ರಾಯ ನೀಡಿದ್ದರು.
ಜನ ವಿರೋಧವನ್ನು ಲೆಕ್ಕಿಸದ ಕೇಂದ್ರ ಇಎಸ್‌ಜೆಡ್ ತಜ್ಞರ ಸಮಿತಿ 2019ರ ಫೆ. 28ರಂದು ನಡೆಸಿದ 33ನೇ ಸಭೆಯಲ್ಲಿ ಕರಡು ಅಧಿಸೂಚನೆಗೆ ಅನುಮೋದನೆ ನೀಡುವ ತೀರ್ಮಾನ ಕೈಗೊಂಡಿತ್ತು.
ಈ ನಡುವೆ ಪರಿಸರ ಕಾರ್ಯಕರ್ತರು ರಾಜ್ಯಸಭಾ ಸದಸ್ಯ ರಾಜೀವ ಚಂದ್ರಶೇಖರ್ ನೇತೃತ್ವದಲ್ಲಿ ಆಗಿನ ಕೇಂದ್ರ ಪರಿಸರ ಸಚಿವ ಹರ್ಷವರ್ಧನ ಅವರನ್ನು ಭೇಟಿ ಮಾಡಿ, ‘ಯಾವುದೇ ಕಾರಣಕ್ಕೂ ಇಎಸ್‌ಜೆಡ್ ವ್ಯಾಪ್ತಿಯನ್ನು ಕುಗ್ಗಿಸಬಾರದು’ ಎಂದು ಒತ್ತಡ ಹೇರಿದ್ದರು. ಬಳಿಕ ಸಮಿತಿಯ ನಿರ್ಣಯವನ್ನು ಕೇಂದ್ರ ಸಚಿವಾಲಯ ತಡೆಹಿಡಿದಿತ್ತು.
‘ಬನ್ನೇರುಘಟ್ಟ ರಾಷ್ಟ್ರಿಯ ಉದ್ಯಾನವನ್ನು ಉಳಿಸಿಕೊಳ್ಳಬೇಕಾದರೆ ಇಎಸ್‌ಜೆಡ್ ತುಂಬಾ ಮಹತ್ವದ್ದು. ಅದರ ಪ್ರಮಾಣವನ್ನು ಮೂಲ ಪ್ರಸ್ತಾವನೆಯಷ್ಟೇ ಉಳಿಸಿಕೊಳ್ಳುವಂತೆ ಕೋರಿ ಕೇಂದ್ರ ಸಚಿವಾಲಯವುರಾಜ್ಯಕ್ಕೆ ಪತ್ರ ಬರೆದಿರುವುದು ಒಳ್ಳೆಯ ಬೆಳವಣಿಗೆ. ಮೂಲ ಪ್ರಸ್ತಾವನೆಯಲ್ಲಿರುವಷ್ಟೇ ಇಎಸ್‌ಜೆಡ್ ಉಳಿಸಲು ರಾಜ್ಯವೂ ಒಪ್ಪಿಗೆ ನೀಡಬೇಕು’ ಎಂದು ಪರಿಸರ ಕಾರ್ಯಕರ್ತ ವಿಜಯ್ ನಿಶಾಂತ್ ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.