ಬೆಂಗಳೂರು: ಸಿ.ಡಿ ಪ್ರಕರಣದಲ್ಲಿ ಸಂತ್ರಸ್ತೆ ಪರ ವಕಾಲತ್ತು ವಹಿಸಿದ್ದ ಆರ್.ಮಂಜುನಾಥ್ ಅವರನ್ನು ವಕೀಲರ ಪರಿಷತ್ತು ಅಮಾನತುಗೊಳಿಸಿದೆ.
ವಕೀಲರ ಪರಿಷತ್ತಿನ ವಿರುದ್ಧ ಏಪ್ರಿಲ್ 1ರಂದು ಮಾಡಿರುವ ಆರೋಪಗಳ ಕುರಿತು ಹತ್ತು ದಿನಗಳಲ್ಲಿ ಉತ್ತರಿಸುವಂತೆ ಶೋಕಾಸ್ ನೋಟಿಸ್ ನೀಡಲಾಗಿದೆ. ಈ ವಿಚಾರದ ತನಿಖೆ ಮುಗಿಯುವ ತನಕ ವಕೀಲ ವೃತ್ತಿಯ ಪರವಾನಗಿ ತಡೆ ಹಿಡಿಯಲಾಗಿದೆ.
ಯಾವುದೇ ಪ್ರಕರಣದ ಪರವಾಗಿ ವಕೀಲರು ವಕಾಲತ್ತು ವಹಿಸುವಾಗ ವಕೀಲರ ಕ್ಷೇಮಾಭಿವೃದ್ದಿ ಸ್ಟ್ಯಾಂಪ್‌ಗಳನ್ನು ಲಗತ್ತಿಸುವುದು ಕಡ್ಡಾಯ. ಈ ಸ್ಟ್ಯಾಂಪ್‌ನಲ್ಲಿ ಅಕ್ರಮ ನಡೆದಿರುವುದಾಗಿ ಮಂಜುನಾಥ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ಮೂಲಕ ಆರೋಪ ಮಾಡಿದ್ದರು.
‘ವಕೀಲರ ಪರಿಷತ್ತಿನ ಸದಸ್ಯರ ವಿರುದ್ದ ಸಾಮಾಜಿಕ ಜಾಲತಾಣಗಳಲ್ಲಿ ಸರಣಿ ಆರೋಪ ಮಾಡಿದ್ದೀರಿ. ಕ್ಷೇಮಾಭಿವೃದ್ದಿ ನಿಧಿಯ ಸ್ಟ್ಯಾಂಪ್‌ಗಳಲ್ಲಿ ಅಕ್ರಮ ನಡೆದಿದೆ ಎಂದು ಹೇಳಿದ್ದೀರಿ. ನಕಲಿ ಸ್ಟ್ಯಾಂಪ್‌ಗಳ ಬಳಕೆಯಾಗುತ್ತಿದೆ ಎಂದು ತೆಲಗಿ ಪ್ರಕರಣದೊಂದಿಗೆ ತಳಕು ಹಾಕಿದ್ದೀರಿ. ಸಾಮಾಜಿಕ ಜಾಲತಾಣಗಳನ್ನು ಬಳಸಿ ಪರಿಷತ್ತಿನ ತೇಜೋವಧೆಗೆ ಪ್ರಯತ್ನಿಸುತ್ತಿದ್ದೀರಿ’ ಎಂದು ಹೇಳಿದೆ.
‘ಪರಿಷತ್ತು ಸರ್ವಾನುಮತದಿಂದ ತೆಗೆದುಕೊಂಡ ನಿರ್ಣಯದ ಪ್ರಕಾರ ಪರಿಷತ್ತಿನ ಎಲ್ಲಾ ಸ್ಥಾನಗಳಿಂದ ನಿಮ್ಮನ್ನು ಏಕೆ ತೆಗೆದುಹಾಕಬಾರದು, ಮುಂದಿನ ಹತ್ತು ದಿನಗಳಲ್ಲಿ ಉತ್ತರ ನೀಡಬೇಕು’ ಎಂದು ನೋಟಿಸ್‌ನಲ್ಲಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.